ಬೆಂಗಳೂರು: ದಕ್ಷಿಣ ತಾಲೂಕಿನ ತಾವರೆಕೆರೆ (Tavarekere) ಹೋಬಳಿಯ ಮಾದಾಪಟ್ಟಣದ (Madapattana) ಕಲ್ಲು ಕ್ವಾರಿಯಲ್ಲಿ (Stone Quarry) ಬಂಡೆ ಕುಸಿದು 7 ಜನ ಕಾರ್ಮಿಕರು ಅಪ್ಪಚ್ಚಿಯಾಗಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಉದಯ್ ಶಂಕರ್ ಎಂಬುವವರಿಗೆ ಸೇರಿದ ಕಾವೇರಿ ಕ್ರಷರ್‌ನಲ್ಲಿ ಇಂದು ಬೆಳಗ್ಗೆ 7:30ರ ಹೊತ್ತಲ್ಲಿ ಕೆಲಸ ಮಾಡುವಾಗಲೇ ಈ ಅವಘಡ ಸಂಭವಿಸಿದೆ.
ಮೇಲಿನಿಂದ ಏಕಾಏಕಿ ದೊಡ್ಡ ದೊಡ್ಡ ಬಂಡೆಗಳು ಬಿದ್ದಿದ್ದರಿಂದ ಕೆಳಗೆ ಕೆಲಸ ಮಾಡುತ್ತಿದ್ದವರು ಬಲಿಯಾಗಿದ್ದಾರೆ. 16 ಕಾರ್ಮಿಕ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಮಧ್ಯಪ್ರದೇಶ, ಛತ್ತೀಸ್‌ಗಡ ಹಾಗೂ ಯಾದಗಿರಿ ಮೂಲದವರಾಗಿದ್ದಾರೆ. ಬೃಹತ್ ಬಂಡೆ ಉರುಳಿ ಬಿದ್ದ ರಭಸಕ್ಕೆ 3 ಟ್ರಾಕ್ಟರ್‌ಗಳು ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ರಾಮನಗರ ಎಸ್‌ಪಿ ಶ್ರೀನಿವಾಸ್‌ಗೌಡ, ಎಎಸ್‌ಪಿ ರಾಮಚಂದ್ರಪ್ಪ ಭೇಟಿ ನೀಡಿ ಪರಿಶೀಲಿಸಿ, ಬಂಡೆಯ ಕೆಳಗಡೆ ಸಿಲುಕಿದ್ದ ದೇಹಗಳನ್ನು ಹಿಟಾಚಿ ಮೂಲಕ ಹೊರತೆಗೆದು ಅಂಬುಲೆನ್ಸ್‌ಗಳಲ್ಲಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಯಿತು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೂ ಕಲ್ಲು ಕ್ವಾರಿಯಲ್ಲಿ ದುರಂತ – 30 ಅಡಿ ಆಳಕ್ಕೆ ಬಿದ್ದು ಕಾರ್ಮಿಕ ಸಾವು

ಐಜಿಪಿ ಗಿರೀಶ್, ಸೊಕೋ ಟೀಂ ಕೂಡ ತಪಾಸಣೆ ನಡೆಸಿತು. ಆದರೆ, ದುರ್ಘಟನೆ ಸಂಭವಿಸಿ 4 ಗಂಟೆಯಾಗಿದ್ದರೂ ಸ್ಥಳಕ್ಕೆ ಮಾಲೀಕರು ಬಂದಿರಲಿಲ್ಲ. ಬಫರ್ ಜೋನ್ ಬಿಡದೇ ಗಣಿಗಾರಿಕೆ ನಡೆಸಿದ್ದೇ ಅವಘಡಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ದುರಂತದ ಬೆನ್ನಲ್ಲೇ 55 ಕ್ವಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಇನ್ನು, ಘಟನೆ ಬಗ್ಗೆ ಮೃತರ ಸಂಬಂಧಿಕರು ಹಾಗೂ ಪ್ರತ್ಯಕ್ಷದರ್ಶಿಗಳು ವಿವರ ನೀಡಿದ್ದಾರೆ. ಈ ಮಧ್ಯೆ, ಬಸವೇಶ್ವರ ಕ್ರಷರ್ ಮಾಲೀಕ ಆನಂದಸ್ವಾಮಿ ಹಾಗೂ ಕಾವೇರಿ ಕ್ರಷರ್ ಮಾಲೀಕ ಉದಯ ಶಂಕರ್ ಮೇಲೆ ತಾವರೆಕೆರೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬದುಕು ಕಟ್ಟಿಕೊಳ್ಳಲು ಬಂದಿದ್ದ ಯಾದಗಿರಿ ಕಾರ್ಮಿಕ ಕಲ್ಲು ಕ್ವಾರಿ ದುರಂತದಲ್ಲಿ ಸಾವು
ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಸವೇಶ್ವರ ಸ್ಟೋನ್ ಕ್ರಷರ್ ಹಾಗೂ ಕಾವೇರಿ ಸ್ಟೋನ್ ಕ್ರಷರ್‌ಗೆ ಸೇರಿದ ಜಾಗದಲ್ಲಿ ಘಟನೆ ನಡೆದಿದೆ. 16 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದಾರೆ. 5 ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. 5 ಮಂದಿ ಮಧ್ಯಪ್ರದೇಶ, ಓರ್ವ ಛತ್ತೀಸ್‌ಗಢ, ಓರ್ವ ಯಾದಗಿರಿಯವರು. ಎರಡೂ ಕ್ರಷರ್ ಮಾಲೀಕರ ಮೇಲೂ ಪ್ರಕರಣ ದಾಖಲಾಗಿದೆ. ಕೆಳಗಡೆ ಕಾರ್ಮಿಕರು ಕೆಲಸ ಮಾಡ್ತಿದ್ದಾಗ ಮೇಲಿನಿಂದ ಬಂಡೆ ಉರುಳಿದೆ. ಇದರಲ್ಲಿ ಗಣಿಮಾಲೀಕರ ನಿರ್ಲಕ್ಷ್ಯ ಕಂಡು ಬರುತ್ತಿದೆ ಎಂದು ಕೇಂದ್ರ ವಲಯದ ಡಿಐಜಿ ಗಿರೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಲು ಕ್ವಾರಿ ದುರಂತ – ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ: ಹೆಚ್‌ಡಿಕೆ

ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ರಂಗಪ್ಪ ಮಾತನಾಡಿ, ಎರಡೂ ಕ್ರಷರ್ ಮಾಲೀಕರಿಂದ ಕಾರ್ಮಿಕರಿಗೆ ಪರಿಹಾರ ಕೊಡಿಸುತ್ತೇವೆ. ಮೃತ ಕಾರ್ಮಿಕರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇದರಲ್ಲಿ ಮಾಲೀಕರ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಸುರಕ್ಷಿತ ಕ್ರಮಗಳನ್ನ ತೆಗೆದುಕೊಳ್ಳುವಲ್ಲಿ ವಿಫಲ ಆಗಿದೆ. ಎರಡೂ ಕ್ರಷರ್‌ಗಳು ಪರವಾನಿಗೆ ಪಡೆದಿವೆ, ಲೀಸ್ ಪಡೆದಿದ್ದಾರೆ. ಆದರೆ ನಿರ್ಲಕ್ಷ್ಯ ತೋರಿರೋದ್ರಿಂದ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ. ಮೃತ ವ್ಯಕ್ತಿಗಳಿಗೆ ತಲಾ 10 ಲಕ್ಷ ರೂ., ಗಾಯಾಳುಗಳಿಗೆ 5 ಲಕ್ಷ ರೂ. ಪರಿಹಾರ ಕೊಡುತ್ತೇವೆ. ಈ ಭಾಗದ ಸುತ್ತಮುತ್ತಲಿನ 55 ಕ್ವಾರಿಗಳು ತಕ್ಷಣಕ್ಕೆ ಸ್ಥಗಿತ ಮಾಡುವಂತೆ ಸೂಚನೆ ನೀಡಿದ್ದೇವೆ ಎಂದರು. ಇದನ್ನೂ ಓದಿ: ಕಲ್ಲು ಕ್ವಾರಿ ದುರಂತ – ಕ್ರಷರ್ ಮಾಲೀಕನನ್ನ ಬಂಧಿಸಿ : ಎಸ್‌ಟಿ ಸೋಮಶೇಖರ್ ಆಗ್ರಹ
ಕ್ವಾರಿಯಲ್ಲಾದ ದುರ್ಘಟನೆ ಬಗ್ಗೆ ಸಿಎಂ ಡಿಕೆಶಿ ಮಾತಾಡಿ, ರಿಪೋರ್ಟ್ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲದೇ, ಗಾಯಾಳುಗಳು ಇದ್ದ ರಾಜರಾಜೇಶ್ವರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪರಮೇಶ್ವರ್ ಪ್ರತಿಕ್ರಿಯಿಸಿ, ಅಕ್ರಮವಾಗಿ ಇಡೀ ರಾಜ್ಯದಲ್ಲಿ ಕ್ವಾರಿಗಳು ಬಹಳ ನಡೆಯುತ್ತಿವೆ. ಅದನ್ನ ತಪ್ಪಿಸಲು ಏನು ಮಾಡಬೇಕೋ ಮಾಡುತ್ತೇವೆ ಅಂದರು. ನಾಯಿಕೊಡೆಗಳಂತೆ ರಾಜಕಾರಣಿಗಳ ಹೆಸರಲ್ಲಿ ಅಕ್ರಮ ಕ್ವಾರಿಗಳಿವೆ ಅಂತ ವಿಪಕ್ಷ ನಾಯಕ ಅಶೋಕ್ ಆರೋಪಿಸಿದ್ರೆ, ಬುಧವಾರವಷ್ಟೇ ಸಿಎಂ ಮೀಟಿಂಗ್ ಮಾಡಿದ್ದು, ಇವತ್ತೇ ದುರಂತ ಸಂಭವಿಸಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಈ ಮಧ್ಯೆ, ಶಾಸಕ ಸೋಮಶೇಖರ್ ಮಾತಾಡಿ, ಕೂಡಲೇ ಕ್ವಾರಿ ಮಾಲೀಕನನ್ನ ಬಂಧನ ಮಾಡಬೇಕು. ಈ ಕ್ವಾರಿ ಬಗ್ಗೆ ನಾನು ಹಿಂದೆ ಸದನದಲ್ಲಿ ವಿರೋಧ ಮಾಡಿದ್ದೆ. ಗಣಿ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೆಂಗಳೂರು ಸಮೀಪದ ಕಲ್ಲು ಕ್ವಾರಿಯಲ್ಲಿ ಘೋರ ದುರಂತ – ಬಂಡೆ ಕುಸಿದು 7 ಕಾರ್ಮಿಕರು ಸಾವು
