ಬಳ್ಳಾರಿ: ಗಣಿನಾಡು ಬಳ್ಳಾರಿ(Ballari) ಜಿಲ್ಲೆಯಾದ್ಯಂತ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ(Gruha Jyoti) ಯೋಜನೆಯ ಫಲಾನುಭವಿಗಳ ಪುನರ್ ಪರಿಶೀಲನಾ ಕಾರ್ಯ (Re-verification) ಭರದಿಂದ ಸಾಗುತ್ತಿದೆ. ಈ ವೇಳೆ ಜೆಸ್ಕಾಂ (GESCOM) ಸಿಬ್ಬಂದಿಗೆ ತಂತ್ರಾಂಶದ ತಲೆನೋವು ಶುರುವಾಗಿದ್ದು, ಹೊಸ ಸಾಫ್ಟ್‌ವೇರ್ ಕೈಕೊಡುತ್ತಿರುವುದರಿಂದ ಕೆಲಸ ಮಾಡಲು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಯೋಜನೆಯ ಅರ್ಹ ಫಲಾನುಭವಿಗಳನ್ನು ಮರುಪರಿಶೀಲಿಸಲು ಜೆಸ್ಕಾಂ(GESCOM) ಸಿಬ್ಬಂದಿ ಈಗ ಮನೆ ಮನೆಗೆ ತೆರಳಿ ಸರ್ವೇ ನಡೆಸುತ್ತಿದ್ದಾರೆ. ಪ್ರತಿ ಸಿಬ್ಬಂದಿಗೆ ನಿತ್ಯ 200 ರಿಂದ 300 ಮನೆಗಳ ಗೃಹ ಜ್ಯೋತಿ ಪರಿಷ್ಕರಣೆ ಮಾಡುವ ದೊಡ್ಡ ಟಾರ್ಗೆಟ್ ನೀಡಲಾಗಿದೆ. ಆದರೆ ಇದಕ್ಕಾಗಿ ಬಳಸಲಾಗುತ್ತಿರುವ ‘ಗೃಹ ಜ್ಯೋತಿ 2.0’ ಹೊಸ ಸಾಫ್ಟ್‌ವೇರ್ ನಿರಂತರವಾಗಿ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದೆ.
ನೆಟ್‌ವರ್ಕ್ ಅತ್ಯಂತ ಸ್ಲೋ ಆಗಿರುವುದು ಮತ್ತು ಡೇಟಾ ಅಪ್ಲೋಡ್ ಆಗಲು ವಿಪರೀತ ಸಮಯ ತೆಗೆದುಕೊಳ್ಳುತ್ತಿರುವುದರಿಂದ ಸಿಬ್ಬಂದಿ ಹೈರಾಣಾಗಿದ್ದಾರೆ. ಇದನ್ನೂ ಓದಿ: Gruha Jyothi| ಮನೆಗೆ ಬಂದು ನಡೆಯಲಿದೆ ಪರಿಶೀಲನೆ – ಮಾಲೀಕರು ಏನು ದಾಖಲೆ ಕೊಡಬೇಕು?
ಬಳ್ಳಾರಿಯ ಪಟೇಲ್ ನಗರದಲ್ಲಿ ಜೆಸ್ಕಾಂ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾಗ ತಂತ್ರಾಂಶದಲ್ಲಿ ದೊಡ್ಡ ಮಟ್ಟದ ದೋಷ ಕಾಣಿಸಿಕೊಂಡಿದೆ. ಸ್ಥಳದಲ್ಲೇ ಮಾಹಿತಿ ಅಪ್ಲೋಡ್ ಮಾಡಲು ಸಿಬ್ಬಂದಿ ಹಲವು ನಿಮಿಷ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಕ್ರಮ ಹಾಗೂ ನಕಲಿ ಫಲಾನುಭವಿಗಳಿಗೆ ಬ್ರೇಕ್ ಹಾಕಲು ಜೆಸ್ಕಾಂ ಈ ಕಠಿಣ ಪರಿಶೀಲನೆಗೆ ಇಳಿದಿದೆ. ಸರ್ಕಾರ ಇಷ್ಟೊಂದು ದೊಡ್ಡ ಜವಾಬ್ದಾರಿಯನ್ನು ಸಿಬ್ಬಂದಿ ಹೆಗಲಿಗೆ ಹಾಕಿದ್ದರೂ, ಅದಕ್ಕೆ ಪೂರಕವಾದ ತಾಂತ್ರಿಕ ವ್ಯವಸ್ಥೆ ಕಲ್ಪಿಸದಿರುವುದು ಜೆಸ್ಕಾಂ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.
ತಕ್ಷಣವೇ ಸಾಫ್ಟ್‌ವೇರ್ ದೋಷವನ್ನು ಸರಿಪಡಿಸದಿದ್ದರೆ ನಿಗದಿತ ಸಮಯದೊಳಗೆ ಸರ್ವೇ ಮುಗಿಸುವುದು ಅಸಾಧ್ಯ ಎಂದು ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.
