ಮುಂಬೈ: ಶಿವಾಜಿ ಮಹಾರಾಜರ (Shivaji Maharaj) ಶೌರ್ಯಕ್ಕೆ ಸಾಕ್ಷಿಯಾದ ಲೋಹಗಡ ಕೋಟೆಗೆ (Lohagad Fort) ʻಸಿಯಾ ಪಾಯಿಂಟ್ʼ (Siya Point) ಹೆಸರಲ್ಲಿ ಕರೆದು ಕಳಂಕ ತರಲಾಗುತ್ತಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಹಗಡ ಕೋಟೆ ಶತಮಾನಗಳ ಇತಿಹಾಸ ಹೊಂದಿದೆ. ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲಾದ ಕೋಟೆಗಳಲ್ಲಿ ಇದು ಒಂದಾಗಿದೆ. ಅಲ್ಲದೇ ಶಿವಾಜಿ ಮಹಾರಾಜರ ಶೌರ್ಯಕ್ಕೆ ಈ ಕೋಟೆ ಹೆಸರುವಾಸಿಯಾಗಿದೆ. ಇಂತಹ ಕೋಟೆಯ ಪ್ರತಿಷ್ಠೆಗೆ ಕೇತನ್ ಅಗರ್ವಾಲ್ ಹತ್ಯೆಯ ಬಳಿಕ ಕಳಂಕ ಎದುರಾಗಿದೆ. ʻವಿಂಚು ಕಡʼ (Vinchu Kada) ಭಾಗಕ್ಕೆ ʻಸಿಯಾ ಪಾಯಿಂಟ್ʼ ಎಂದು ಕರೆಯಲಾಗುತ್ತಿದೆ. ಈ ರೀತಿಯ ಕಳಂಕ ತರುವುದು ಸರಿಯಲ್ಲ ಎಂದು ಸ್ಥಳೀಯರು ಮಾಧ್ಯಮಗಳ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕೇತನ್ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ್ದ ದಂತ ವೈದ್ಯೆ 5 ವರ್ಷ ಅಮಾನತು

ಈ ಕೊಲೆ ರಾಜ್ಯಾದ್ಯಂತ ಜನರಲ್ಲಿ ಲೋಹಗಡ ಕೋಟೆಯ ಬಗ್ಗೆ ನಕಾರಾತ್ಮಕ ಗ್ರಹಿಕೆಯನ್ನು ಸೃಷ್ಟಿಸುತ್ತಿದೆ. ನಿರ್ದಿಷ್ಟ ವ್ಯಕ್ತಿಗಳು ಈ ಅಪರಾಧವನ್ನು ಮಾಡಿರುವುದರಿಂದ, ಕೋಟೆಯ ಇತಿಹಾಸ ಅಥವಾ ಪರಂಪರೆಯ ಮೇಲೆ ಪರಿಣಾಮ ಬೀರುತ್ತಿದೆ. ಇದು ಸರಿಯಲ್ಲ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
ʻವಿಂಚು ಕಡʼ ಬೋರ್ಡ್ ಅಳವಡಿಸಿ – ಸಂಘಟನೆಗಳ ಆಗ್ರಹ
ಶಿವಾಜಿ ಮಹಾರಾಜರ ಅಭಿಮಾನಿಗಳು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳದ ಪದಾಧಿಕಾರಿಗಳು ಸ್ಥಳೀಯರು, ಮಾರ್ಗದರ್ಶಕರು ಮತ್ತು ಪ್ರವಾಸಿಗರು ಈ ಸ್ಥಳವನ್ನು ‘ವಿಂಚು ಕಡ’ ಎಂದು ಮಾತ್ರ ಕರೆಯಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿ ‘ವಿಂಚು ಕಡ’ ಎಂಬ ಹೆಸರನ್ನು ಪ್ರದರ್ಶಿಸುವ ಬೋರ್ಡ್ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.
ʻವಿಂಚು ಕಡʼ ಹೆಸರು ಬಂದಿದ್ದು ಹೇಗೆ?
ಮರಾಠಿಯಲ್ಲಿ, ‘ವಿಂಚು’ ಎಂದರೆ ‘ಚೇಳು’ ಮತ್ತು ‘ಕಡ’ ಎಂದರೆ ‘ಪರ್ವತ ಶಿಖರ ಅಥವಾ ಬಂಡೆ’ ಎಂದರ್ಥ. ಮೇಲಿನಿಂದ ನೋಡಿದಾಗ, ಈ ಭಾಗದ ಭೌಗೋಳಿಕ ರಚನೆಯು ಚೇಳಿನ ಬಾಲವನ್ನು ಹೋಲುತ್ತದೆ, ಆದ್ದರಿಂದ ಈ ಭಾಗಕ್ಕೆ ‘ವಿಂಚು ಕಡ’ ಎಂಬ ಹೆಸರು ಬಂದಿದೆ. ಇದು ಕೋಟೆಯ ರಕ್ಷಣೆಗೆ ನಿರ್ಮಿಸಲಾದ ಕಾವಲು ಗೋಪುರವಾಗಿದೆ.

ʻಪ್ರೀತಿ ಕೊಂದ ಕೊಲೆಗಾರ್ತಿಗೆʼ ಸುಳ್ಳು ಪತ್ತೆ ಪರೀಕ್ಷೆ ಸಿದ್ಧತೆ
ಜೂನ್ 18 ರಂದು ಲೋಹಗಡ (Lohagad Fort) ಕೋಟೆಯ ಎತ್ತರದ ಪ್ರದೇಶದಿಂದ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರಿಯಕರ ಚೇತನ್ ಚೌಧರಿ (22) ತಳ್ಳಿ ಕೊಲೆಗೈದಿದ್ದರು. ಈ ಹತ್ಯೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರ ದೃಢಪಟ್ಟಿದೆ.
ಕೇತನ್ ಜೊತೆ ನಗುನಗುತ್ತಲೇ ಇದ್ದ ಸಿಯಾ ಒಳಗೊಳಗೆ ಮಸಲತ್ತು ನಡೆಸಿ ಈ ಕೃತ್ಯ ಎಸಗಿದ್ದಳು. ಇನ್ನೂ ಇವಳ ನಗುವನ್ನು ಕುರುಡನಾಗಿ ನಂಬಿದ್ದ ಕೇತನ್, ವಿಷಕನ್ಯೆಯ ಯಾವ ಸಂಚನ್ನೂ ಅರಿಯದೆ ಮದುವೆಯ ಶಾಪಿಂಗ್‌ಗೆ 1 ಕೋಟಿ ರೂ. ಹಣ ಕೊಟ್ಟಿದ್ದ. ಆದರೆ ಆಕೆ ಅದನ್ನು ಪ್ರಿಯಕರನಿಗೆ ಕೊಟ್ಟು ಬ್ಯುಸಿನೆಸ್ ಮಾಡು, ಈ ಘಟನೆಯನ್ನು ಜನ ಮರೆತ ಬಳಿಕ ಮದುವೆಯಾಗೋಣ ಎಂದಿದ್ದಳು.
ಇಬ್ಬರು ಆರೋಪಿಗಳಲ್ಲಿ ಯಾರು ಕೋಟೆಯಿಂದ ಕೇತನ್‌ನನ್ನು ತಳ್ಳಿದ್ದು ಎಂಬುದು ಇನ್ನೂ ಪೊಲೀಸರಿಗೆ ಕಗ್ಗಂಟಾಗಿದೆ. ಈ ಬಗ್ಗೆ ಸಿಯಾ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಆಕೆಗೆ ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮಂಪರು ಪರೀಕ್ಷೆ ನಡೆಸಲು ಪೊಲೀಸರು ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಮೇಲುಗಡೆಯಿಂದ ತಳ್ಳಿದ್ದು ಯಾರು? – ಸಿಯಾ ಸುಳ್ಳು ಪತ್ತೆ ಪರೀಕ್ಷೆಗೆ ಪೊಲೀಸರ ಪಟ್ಟು
