ಪುಣೆ: ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿರುವ ಕೇತನ್ ಅಗರ್ವಾಲ್(Ketan Agarwal) ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಳತಿ ಸಿಯಾಳಿಗೆ(Siya) ಸುಳ್ಳು ಪತ್ತೆ (Lie Detector Test) ಪರೀಕ್ಷೆ ನಡೆಸಲು ಅನುಮತಿ ನೀಡಬೇಕೆಂದು ಪೊಲೀಸರು ನ್ಯಾಯಾಲಯವನ್ನು ಕೋರಿದ್ದಾರೆ.
ಲೋಹಗಡ ಕೋಟೆಯಿಂದ (Lohagad Fort) ಬಿದ್ದು ಸಾವನ್ನಪ್ಪಿದ್ದ ಕೇತನ್ ಅಗರ್ವಾಲ್‌ನನ್ನು ಕೆಳಗೆ ತಳ್ಳಿದ್ದು ಯಾರು ಎನ್ನುವುದಕ್ಕೆ ಸದ್ಯಕ್ಕೆ ಯಾವುದೇ ನಿಖರ ಹಾಗೂ ನಿರ್ಣಾಯಕ ಪುರಾವೆಗಳು ಸಿಕ್ಕಿಲ್ಲ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ.
ಕೇತನ್ ಬಿದ್ದಾಗ ಅಲ್ಲಿ ಯಾರು ಉಪಸ್ಥಿತರಿದ್ದರು ಮತ್ತು ಆತನನ್ನು ಯಾರು ತಳ್ಳಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಿಸಿಟಿವಿ ದೃಶ್ಯಾವಳಿಗಳಾಗಲಿ ಅಥವಾ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯವಾಗಲಿ ಸದ್ಯಕ್ಕೆ ಲಭ್ಯವಾಗಿಲ್ಲ. ಘಟನೆಯ ವೇಳೆ ಸ್ಥಳದಲ್ಲಿದ್ದ ಸಿಯಾ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ಆಕೆ ನೀಡುತ್ತಿರುವ ಹೇಳಿಕೆಗಳಲ್ಲಿ ಸಾಕಷ್ಟು ಗೊಂದಲಗಳಿವೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ.
ಸಿಯಾ ಘಟನೆಯ ನಿಜಾಂಶವನ್ನು ಮರೆಮಾಚುತ್ತಿದ್ದಾಳೆ ಎಂದು ಶಂಕಿಸಿರುವ ಪೊಲೀಸರು, ಆಕೆಗೆ ಸುಳ್ಳು ಪತ್ತೆ ಹಾಗೂ ಮಂಪರು ಪರೀಕ್ಷೆ (Narco Analysis) ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾರೆ. ಈ ವೈಜ್ಞಾನಿಕ ಪರೀಕ್ಷೆಗಳಿಂದ ಮಾತ್ರವೇ ಕೇತನ್ ಅಗರ್ವಾಲ್ ಸಾವಿನ ಹಿಂದಿನ ಅಸಲಿ ರಹಸ್ಯ ಹೊರಬರಲು ಸಾಧ್ಯ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಕ್ರಿಮಿನಲ್ ಚೆಲುವೆಯ ಕರಾಳ ಮುಖ – ಕೇತನ್ ಬಳಿ 1 ಕೋಟಿ ಪಡೆದು ಪ್ರಿಯಕರನಿಗೆ ಕೊಟ್ಟಿದ್ದ ಸಿಯಾ
ನ್ಯಾಯಾಲಯವು ಪೊಲೀಸರ ಈ ಮನವಿಯನ್ನು ಪರಿಶೀಲಿಸುತ್ತಿದ್ದು ಸಿಯಾಳ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ನೀಡಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ.

ಏನಿದು ಸುಳ್ಳು ಪತ್ತೆ ಪರೀಕ್ಷೆ?
ವ್ಯಕ್ತಿಯು ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದಾಗ ಆತನ ದೇಹದಲ್ಲಿ ಉಂಟಾಗುವ ಜೈವಿಕ ಬದಲಾವಣೆಗಳನ್ನು ಆಧರಿಸಿ ಪರೀಕ್ಷೆ ನಡೆಸಲಾಗುತ್ತದೆ. ವ್ಯಕ್ತಿಯು ಸುಳ್ಳು ಹೇಳುವಾಗ ಆತನ ಮನಸ್ಸಿನಲ್ಲಿ ಸಣ್ಣದೊಂದು ಭಯ ಅಥವಾ ಆತಂಕ ಸೃಷ್ಟಿಯಾಗುತ್ತದೆ. ಇದನ್ನು ತಡೆಯಲು ಮಿದುಳು ಪ್ರಯತ್ನಿಸಿದಾಗ ದೇಹದಲ್ಲಿ ತಾನಾಗಿಯೇ ಕೆಲವು ಸ್ವಯಂಚಾಲಿತ ಬದಲಾವಣೆಗಳು ಸಂಭವಿಸುತ್ತವೆ. ಇದನ್ನೂ ಓದಿ: ಕೇತನ್ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ್ದ ದಂತ ವೈದ್ಯೆ 5 ವರ್ಷ ಅಮಾನತು
ಏನಿದು ಮಂಪರು ಪರೀಕ್ಷೆ?
ವ್ಯಕ್ತಿಯನ್ನು ಅರೆನಿದ್ರಾವಸ್ಥೆಗೆ ದೂಡಿ ಆತನ ನಿಯಂತ್ರಣವನ್ನು ತಪ್ಪಿಸಿ ಪರೀಕ್ಷೆ ಮಾಡಲಾಗುತ್ತದೆ. ವ್ಯಕ್ತಿಗೆ ಸೋಡಿಯಂ ಪೆಂಟೊಥಾಲ್’(Sodium Pentothal) ಎನ್ನುವ ರಾಸಾಯನಿಕವನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ವೈದ್ಯಕೀಯ ಲೋಕದಲ್ಲಿ ಇದನ್ನು ‘ಟ್ರುತ್ ಸೀರಮ್’ ಎಂದೂ ಕರೆಯುತ್ತಾರೆ.
ಈ ಔಷಧಿಯು ದೇಹ ಸೇರಿದ ತಕ್ಷಣ ವ್ಯಕ್ತಿಯು ಮಾತು ಮರೆತು ಸಂಪೂರ್ಣ ಅರೆನಿದ್ರಾವಸ್ಥೆಗೆ ಜಾರುತ್ತಾನೆ. ಈ ಸ್ಥಿತಿಯಲ್ಲಿ ಆತನ ಮಿದುಳಿನ ತಾರ್ಕಿಕ ಆಲೋಚನಾ ಶಕ್ತಿ ಸಂಪೂರ್ಣವಾಗಿ ಕುಗ್ಗಿಹೋಗುತ್ತದೆ.
ಸಾಮಾನ್ಯವಾಗಿ ಸುಳ್ಳು ಹೇಳಲು ಮಿದುಳಿಗೆ ಹೆಚ್ಚಿನ ಕಲ್ಪನಾ ಶಕ್ತಿ ಮತ್ತು ಯೋಚನೆ ಬೇಕಾಗುತ್ತದೆ. ಆದರೆ ಈ ಮಂಪರಿನ ಸ್ಥಿತಿಯಲ್ಲಿ ಕಲ್ಪನೆ ಮಾಡಿಕೊಳ್ಳುವ ಶಕ್ತಿಯೇ ಇಲ್ಲದ ಕಾರಣ, ಕೇಳುವ ಪ್ರಶ್ನೆಗಳಿಗೆ ವ್ಯಕ್ತಿಯು ತನಗೆ ಗೊತ್ತಿರುವ ಸತ್ಯವನ್ನೇ ನೇರವಾಗಿ ಹೊರಹಾಕುತ್ತಾನೆ.
