– ತಳ್ಳುವಾಗ ತಾನು ಬಚಾವಾಗಲು ಸಿಯಾ ಮಾಡಿದ್ದ ಪ್ಲ್ಯಾನ್ ಏನು?
ಮುಂಬೈ: ಭಾವಿ ಪತಿ ಕೇತನ್‌ನನ್ನು (Ketan Agarwal) ಕೊಲೆಗೈದು ಬಂಧನಕ್ಕೊಳಗಾಗಿರುವ ಸಿಯಾಳ (Siya Goyal) ಕರಾಳ ಮುಖಗಳು ತನಿಖೆ ವೇಳೆ ಒಂದೊಂದಾಗಿ ಹೊರಬರುತ್ತಿದೆ. ಇದೀಗ ಮದುವೆ ಶಾಪಿಂಗ್‌ಗಾಗಿ ಸಿಯಾ, ಕೇತನ್ ಬಳಿ 1 ಕೋಟಿ ರೂ. ಹಣ ಪಡೆದು, ಅದನ್ನು ಪ್ರಿಯಕರ ಚೇತನ್‌ಗೆ ಕೊಟ್ಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕೇತನ್ ಅಗರ್ವಾಲ್ ಸಿಯಾ ಗೋಯಲ್‌ಗೆ ಮದುವೆಯ ಸಿದ್ಧತೆಗಳಿಗಾಗಿ 1 ಕೋಟಿ ರೂ.ಗಳನ್ನು ನೀಡಿದ್ದರು. ಅದನ್ನು ತನ್ನ ಪ್ರೇಮಿ ಚೇತನ್ ಚೌಧರಿಗೆ ನೀಡಿ ಉದ್ಯೋಗ ಹಾಗೂ ವ್ಯವಹಾರಕ್ಕಾಗಿ ಬಳಸುವಂತೆ ಹೇಳಿದ್ದಳು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕ್ರೈಮ್ ಪಾರ್ಟ್ನರ್ ಜೊತೆ ಕುಳಿತು ಖುಷಿ ಖುಷಿಯಾಗಿ ಕ್ರಿಕೆಟ್ ಮ್ಯಾಚ್ ವೀಕ್ಷಿಸಿದ್ದ ಸಿಯಾ – ವಿಡಿಯೋ ವೈರಲ್
ಮೂರು ವರ್ಷಗಳ ಬಳಿಕ ಮದುವೆ ಪ್ಲ್ಯಾನ್
ಚೇತನ್ ಆರ್ಥಿಕವಾಗಿ ದುರ್ಬಲ ಹಿನ್ನೆಲೆಯುಳ್ಳವನಾಗಿದ್ದಾನೆ. ಆತ ಆರ್ಥಿಕವಾಗಿ ಸ್ಥಿರವಾಗಲು ಕನಿಷ್ಠ ಮೂರು ವರ್ಷಗಳು ತಗಲುತ್ತದೆ. ಇದೇ ಕಾರಣಕ್ಕೆ ಇಬ್ಬರೂ 3 ವರ್ಷಗಳ ಬಳಿಕ ಮದುವೆಯಾಗಲು ಯೋಜನೆ ರೂಪಿಸಿದ್ದರು.
ಈ ವೇಳೆಗಾಗಲೇ ಜನರ ಗಮನದಿಂದ ಕೇತನ್ ಸಾವಿನ ವಿಚಾರ ಅಳಿಸಿ ಹೋಗಿರುತ್ತದೆ. ತನಿಖೆಯೂ ಮುಗಿದು ಹೋಗಿರುತ್ತದೆ ಎಂಬುದು ಕ್ರಿಮಿನಲ್ ಜೋಡಿಯ ಪ್ಲ್ಯಾನ್ ಆಗಿತ್ತು.
ತಳ್ಳುವಾಗ ತಾನು ಬಚಾವಾಗಲು ಸಿಯಾ ಮಾಡಿದ್ದ ಪ್ಲ್ಯಾನ್ ಏನು?
ಕೇತನ್‌ನನ್ನು ಕೋಟೆಯಿಂದ ತಳ್ಳುವಾಗ ಸಿಯಾ ನೀರು ಕುಡಿಯಲು ಅಥವಾ ಶೂಲೇಸ್‌ಗಳನ್ನು ಕಟ್ಟುವ ನೆಪದಲ್ಲಿ ಕುಳಿತುಕೊಳ್ಳಬೇಕೆಂದು ಮೊದಲೇ ಪ್ಲ್ಯಾನ್ ಮಾಡಲಾಗಿತ್ತು. ಕೋಟೆಯಿಂದ ತಳ್ಳುವ ಸಮಯದಲ್ಲಿ ಸಿಯಾ, ಕೇತನ್ ಕೈಗೆಟುಕದಂತೆ ಮಾಡಲು ಈ ನಿರ್ಧಾರ ಮಾಡಲಾಗಿತ್ತು. ಹಾಗೇನಾದರೂ ಕೈಗೆ ಎಟುಕಿದರೆ ಆಕೆಯನ್ನು ಕೇತನ್ ಎಳೆದುಕೊಂಡು ಕಮರಿಗೆ ಬೀಳಬಹುದಾದ ಸಾಧ್ಯತೆ ಇತ್ತು. ಅದಕ್ಕಾಗಿ ಭಾರೀ ಬುದ್ದಿವಂತಿಕೆಯಿಂದ ಈ ಸಂಚು ರೂಪಿಸಿದ್ದರು.
ಜೂನ್ 18 ರಂದು ಲೋಹಗಡ (Lohagad Fort) ಕೋಟೆಯ ಎತ್ತರದ ಪ್ರದೇಶದಿಂದ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರಿಯಕರ ಚೇತನ್ ಚೌಧರಿ (22) ತಳ್ಳಿ ಕೊಲೆಗೈದಿದ್ದರು. ಈ ಹತ್ಯೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರ ದೃಢಪಟ್ಟಿದೆ. ಇದನ್ನೂ ಓದಿ: ಕೇತನ್ ಕೊಲೆಗೆ ಸಿಯಾಳೇ ಪ್ಲ್ಯಾನ್ ಮಾಡಿದ್ದು.. ಹತ್ಯೆಗೆ ಪ್ರಿಯಕರ ಒತ್ತಾಯಿಸಿದ್ದ: ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪ
