ಕಾಮಿಡಿ ಕಿಲಾಡಿ ಖ್ಯಾತಿಯ ಹರೀಶ್ ಹಿರಿಯೂರು (Chandrahasa Movie) ಅಭಿನಯದ ‘ಚಂದ್ರಹಾಸ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಶೈಲಜಾ ನಾಗ್ ಹಾಡನ್ನು ಬಿಡುಗಡೆ ಮಾಡಿದರು. ಹೊಸ ಪ್ರತಿಭೆಗಳ ತಂಡ ಸೇರಿ ನಿರ್ಮಿಸಿರುವ ಈ ಚಿತ್ರವನ್ನು ಆನಂದ್ ಎಸ್. ಕಲಕಬಂಡಿ ನಿರ್ದೇಶಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಮೊದಲ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ‘ಚಡ್ಡಿ ಬಡ್ಡಿ’ ಎಂಬ ಈ ಹಾಡು ಸ್ನೇಹಿತರ ನಡುವಿನ ಬಾಂಧವ್ಯವನ್ನು ಮನಮುಟ್ಟುವಂತೆ ಹೇಳುತ್ತದೆ. ಈ ಹಾಡಿನ ಮತ್ತೊಂದು ವಿಶೇಷವೆಂದರೆ, ನಟ ಶರಣ್ (Sharan) ಮತ್ತು ಗಾಯಕ ನವೀನ್ ಸಜ್ಜು ಮೊದಲ ಬಾರಿಗೆ ಜೊತೆಯಾಗಿ ಹಾಡಿದ್ದಾರೆ.
ಬಸವಂತಗೌಡ ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ಬಸಣ್ಣ ಕಮತ್ತರ್ ಸಹ ನಿರ್ಮಾಪಕರಾಗಿದ್ದಾರೆ. ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ‘ಚಡ್ಡಿ ಬಡ್ಡಿ’ ಹಾಡು ಬಿಡುಗಡೆಯಾಗಿದೆ.
ಚಿತ್ರದಲ್ಲಿ ಹರೀಶ್ ಹಿರಿಯೂರು ನಾಯಕನಾಗಿ ಅಭಿನಯಿಸಿದ್ದು, ಛಾಯಾಶ್ರೀ ಉಮೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿಂಗರಾಜು ಮಂಡ್ಯ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದು, ಸಂತೋಷ್ ಕೆರಿ, ಸೂರ್ಯಕಲಾ, ಜ್ಯೋತಿ ಮಂಗಳೂರು, ಕಳಕಪ್ಪ ತಲವಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ರಾಮಾಯಣ ಪ್ಯಾನ್ ವರ್ಲ್ಡ್ ಟ್ರೈಲರ್ ಬಿಡುಗಡೆಯ ಪ್ರಥಮ ಸಂಕಲ್ಪ
‘ಚಂದ್ರಹಾಸ ಧ್ವನಿ ಸುರಳಿ’ ಕಾರ್ಯಕ್ರಮಕ್ಕೆ ಕಾಮಿಡಿ ಕಿಲಾಡಿ ಶೋ ಖ್ಯಾತಿಯ ಅಪ್ಪಣ್ಣ, ಜಗಪ್ಪ, ಸುಷ್ಮಿತಾ, ನಯನಾ ಸೇರಿದಂತೆ ಹಲವು ಕಲಾವಿದರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚೇತನ್ ಶರ್ಮಾ ಛಾಯಾಗ್ರಹಣ, ವಿ. ಗಿರೀಶ್ ಎಂ.ಸಿ. ಹಳ್ಳಿ ಸಂಕಲನ ಮಾಡಿರುವ ‘ಚಂದ್ರಹಾಸ’ ಸಿನಿಮಾ ಮೊದಲ ಹಾಡಿನ ಮೂಲಕ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದ್ದು, ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಕಿರುಕುಳಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಐಶ್ವರ್ಯಾ ಸಿಂಧೋಗಿ
