– ಕುಟುಂಬಸ್ಥರಿಂದ ಸಮಾಧಿಗೆ ಪೂಜೆ, ಗಣ್ಯಾತಿಗಣ್ಯರ ಆಗಮನ
ಹಾಸನ: ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ (HD Deve Gowda) ಧರ್ಮಪತ್ನಿ ದಿ.ಚೆನ್ನಮ್ಮ (Chennamma Deve Gowda) ಅವರ ಹನ್ನೊಂದನೇ ದಿನದ ತಿಥಿ ಕಾರ್ಯ ಇಂದು ನೆರವೇರಿತು.
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿರುವ ಸಮಾಧಿಗೆ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಸೇರಿದಂತೆ ಇಡೀ ಕುಟುಂಬಸ್ಥರು ಆಗಮಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಸಮಾಧಿ ಸ್ಥಳದಲ್ಲಿದ್ದ ಹೆಚ್‌ಡಿ ದೇವೇಗೌಡರು ಪತ್ನಿಯನ್ನು ನೆನದು ಭಾವುಕರಾದರು. ಇದಕ್ಕೂ ಮುನ್ನ ಹೊಳೆನರಸೀಪುರದ ಹೆಚ್‌ಡಿ ರೇವಣ್ಣ ಅವರ ನಿವಾಸದಲ್ಲಿ ನಡೆದ ವಿಧಿ-ವಿಧಾನದ ವೇಳೆಯೂ ದೇವೇಗೌಡರು ಕಣ್ಣೀರಿಟ್ಟರು.

ಕೇಂದ್ರ ಸಚಿವ ವಿ.ಸೋಮಣ್ಣ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ, ಮಾಜಿಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿಸಚಿವರುಗಳಾದ ಸಿ.ಟಿ.ರವಿ, ಅಶ್ವಥ್ ನಾರಾಯಣ್, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿಗಳು ಆಗಮಿಸಿ ಸಮಾಧಿಗೆ ಹೂವಿನ ಹಾರ ಹಾಕಿ ನಮನ ಸಲ್ಲಿಸಿದರು.

ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಿಂತ ಹೆಚ್ಚು ಜನರು ಆಗಮಿಸಿ ಭೋಜನ ಸವಿದರು. ಯಾವುದೇ ನೂಕುನುಗ್ಗಲು ಆಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
