ವಾಷಿಂಗ್ಟನ್: ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ! ಜಗತ್ತಿಗೆ ರಷ್ಯಾದ(Russia) ತೈಲ ನಿರ್ಬಂಧದ ಪಾಠ, ತನಗೆ ಮಾತ್ರ ಪುಷ್ಟೀಕರಿಸಿದ ಯುರೇನಿಯಂ(Enriched Uranium) ವಿನಾಯಿತಿಯ ಆಟ. ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ದೇಶಗಳಿಗೆ ದಂಡದ ಬೆದರಿಕೆಯೊಡ್ಡಿರುವ ಅಮೆರಿಕದ ಇಬ್ಬಗೆ ನೀತಿ ಮತ್ತೆ ಜಗಜ್ಜಾಹೀರಾಗಿದೆ.
ಹೌದು. ಇತರರು ರಷ್ಯಾದಿಂದ ತೈಲ ಕೊಂಡರೆ ದಂಡ. ತಾನು ರಷ್ಯಾದಿಂದ ಯುರೇನಿಯಂ ಕೊಂಡರೆ ಅನಿವಾರ್ಯ ಎಂಬ ನೀತಿಯನ್ನು ಅಮೆರಿಕ ಅಳವಡಿಸಿಕೊಂಡಿದೆ.
ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲ ಖರೀದಿಸುವ ಭಾರತ(India), ಚೀನಾ(China) ಸೇರಿದಂತೆ ಜಾಗತಿಕ ರಾಷ್ಟ್ರಗಳ ಮೇಲೆ ಶೇ.100ರಷ್ಟು ಭಾರಿ ಸುಂಕ ಹಾಗೂ ಹೊಸ ನಿರ್ಬಂಧಗಳನ್ನು ವಿಧಿಸಲು ಸಜ್ಜಾಗಿರುವ ಅಮೆರಿಕ ತನ್ನ ಸ್ವಂತ ಪರಮಾಣು ಇಂಧನದ ಅಗತ್ಯಗಳಿಗೆ ವಿನಾಯಿತಿ ನೀಡುವ ಮೂಲಕ ಜಾಣತನ ತೋರಿದೆ.
ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಅನುಮೋದನೆ ಪಡೆದಿರುವ ‘ಲಿಂಡ್ಸೆ ಒ. ಗ್ರಹಾಂ ರಷ್ಯಾ ಮತ್ತು ಇರಾನ್ ನಿರ್ಬಂಧ ಕಾಯ್ದೆ 2026’ ಈ ಇಬ್ಬಗೆಯ ನೀತಿಯನ್ನು ಬಯಲು ಮಾಡಿದೆ. ಇದನ್ನೂ ಓದಿ: ಭಾರತವನ್ನು ಬೆಂಬಲಿಸಿ ಟ್ರಂಪ್ ಬೂಟಾಟಿಕೆಯನ್ನು ಬಯಲು ಮಾಡಿದ ಪುಟಿನ್

ಈ ಮಸೂದೆಯು ರಷ್ಯಾದಿಂದ ಇಂಧನ ಖರೀದಿಸುವ ದೇಶಗಳ ಸರಕುಗಳ ಮೇಲೆ ಶೇ. 100ರಷ್ಟು ಆಮದು ಸುಂಕ ಹೇರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ(Donald Trump) ಅಧಿಕಾರ ನೀಡುತ್ತದೆ. ಆದರೆ ಇದೇ ಮಸೂದೆಯಲ್ಲಿ ರಷ್ಯಾದಿಂದ ಯುರೇನಿಯಂ ಆಮದು ಮಾಡಿಕೊಳ್ಳಲು ಅನುಮತಿ ನೀಡುತ್ತದೆ.
ಉಕ್ರೇನ್ ಯುದ್ಧಕ್ಕೆ ನೆರವಾಗುತ್ತಿರುವ ರಷ್ಯಾದಿಂದ ಕಚ್ಚಾ ತೈಲ, ನೈಸರ್ಗಿಕ ಅನಿಲ ಖರೀದಿಸುವ ಅಥವಾ ನಿರ್ಬಂಧಗಳನ್ನು ತಪ್ಪಿಸಲು ಮಾಸ್ಕೋಗೆ ಸಹಕರಿಸುವ ರಾಷ್ಟ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ಕಾಯ್ದೆ ಅನುವು ಮಾಡಿಕೊಡುತ್ತದೆ.
ರಷ್ಯಾದ ಪರಮಾಣು ಶಕ್ತಿ ನಿಗಮವಾದ ‘ರೊಸಾಟಮ್’ ಮೇಲೆ ನಿರ್ಬಂಧಗಳ ನಿಯಮ ಜಾರಿಯಲ್ಲಿದ್ದರೂ, ಕಾಯ್ದೆಯ ಸೆಕ್ಷನ್ 114ರ ಅಡಿಯಲ್ಲಿ ಯುಎಸ್-ರಷ್ಯಾ ನಾಗರಿಕ ಪರಮಾಣು ಸಹಕಾರ ಒಪ್ಪಂದಗಳಿಗೆ ರಕ್ಷಣೆ ಒದಗಿಸಲಾಗಿದೆ.
ಅಮೆರಿಕದ ಪರಮಾಣು ರಿಯಾಕ್ಟರ್ಗಳಿಗೆ ಅಗತ್ಯವಿರುವ ಸಂಸ್ಕರಿತ ಕಡಿಮೆ-ಪುಷ್ಟೀಕರಿಸಿದ ಯುರೇನಿಯಂ (Low-enriched uranium) ಮತ್ತು ವೈದ್ಯಕೀಯ ಐಸೊಟೋಪ್ಗಳ ಆಮದಿಗೆ ನಿರ್ಬಂಧಗಳಿಂದ ವಿಶೇಷ ವಿನಾಯಿತಿ (Waiver) ನೀಡಲಾಗಿದೆ.
ಕಚ್ಚಾ ತೈಲಕ್ಕಿಂತ ಭಿನ್ನವಾಗಿ ಪರಮಾಣು ಇಂಧನವನ್ನು ಸಿದ್ಧಪಡಿಸುವುದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಜಾಗತಿಕ ಯುರೇನಿಯಂ ಪುಷ್ಟೀಕರಣ (Enrichment) ಮಾರುಕಟ್ಟೆಯಲ್ಲಿ ರಷ್ಯಾ ಅಗ್ರಸ್ಥಾನದಲ್ಲಿದೆ. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಶೇ.100 ಸುಂಕ ವಿಧಿಸುವ ಮಸೂದೆಗೆ ಒಪ್ಪಿಗೆ
ರಷ್ಯಾದ ತೈಲ ಖರೀದಿದಾರರನ್ನು ಕಟ್ಟಿಹಾಕಲು ರೂಪಿಸಲಾಗಿರುವ ಈ ಮಸೂದೆಯನ್ನು ಯುಎಸ್ ಸೆನೆಟ್ 86-11 ಮತಗಳಿಂದ ಹಾಗೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ 262-159 ಮತಗಳಿಂದ ಅಂಗೀಕರಿಸಿದೆ. ರಿಪಬ್ಲಿಕನ್ ಸದಸ್ಯರ ಜೊತೆಗೆ 58 ಡೆಮಾಕ್ರಟ್ಗಳು ಮಸೂದೆಯ ಪರ ಮತ ಚಲಾಯಿಸಿದ್ದಾರೆ. ಪ್ರಸ್ತುತ ಈ ಮಸೂದೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗೆ ರವಾನೆಯಾಗಿದ್ದು ಸಹಿ ಬಿದ್ದರೆ ಶೀಘ್ರದಲ್ಲೇ ಕಾನೂನಾಗಿ ಜಾರಿಗೆ ಬರಲಿದೆ.

