ಕಾರವಾರ: ಕೂಲಿ ಹಣ ಕೇಳಲು ಹೋದ ಕಾರ್ಮಿಕನ ಮೇಲೆ ತೋಟದ ಮಾಲೀಕ ಏರ್ ಗನ್ನಿಂದ ಗುಂಡು ಹಾರಿಸಿ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದೆ.
ಏರ್ ಗನ್ ದಾಳಿಗೆ ಒಳಗಾದ ಕಾರ್ಮಿಕ ನಾಗರಾಜ ಮನೋಹರ ಬಾಂದೇಕರ್. ಹಲ್ಲೆ ನಡೆಸಿದ ಆರೋಪಿ ಗುಳ್ಳಾಪುರದ ಸುಬ್ರಹ್ಮಣ್ಯ ಗಾಂವ್ಕರ್. ಮೂರು ತಿಂಗಳ ಹಿಂದೆ ಸುಬ್ರಹ್ಮಣ್ಯ ಗಾಂವ್ಕರ್ ಅವರ ತೋಟದಲ್ಲಿ ನಾಗರಾಜ ಬಾಂದೇಕರ್ ಕೂಲಿ ಕೆಲಸ ಮಾಡಿದ್ದರು. ಈ ಕೆಲಸದ ಬಾಕಿ ಹಣ ಕೇಳಲು ನಾಗರಾಜ ಅವರು ಮಾಲೀಕರ ಮನೆಗೆ ತೆರಳಿದ್ದರು. ಈ ವೇಳೆ ಅಡಿಕೆ ತೋಟದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಸುಬ್ರಹ್ಮಣ್ಯ ಗಾಂವ್ಕರ್ ತಗಾದೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ಸುಬ್ರಹ್ಮಣ್ಯ ಗಾಂವ್ಕರ್ ಮನೆಯಲ್ಲಿದ್ದ ಏರ್ ಗನ್ನಿಂದ ನಾಗರಾಜ ಅವರ ತಲೆಯನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ನಾಗರಾಜ ಅವರು ಕೈಯನ್ನು ಅಡ್ಡ ಹಿಡಿದ ಪರಿಣಾಮ ಏರ್ ಗನ್ನ ಗುಂಡು ಕೈಗೆ ತಗುಲಿ ಗಾಯವಾಗಿದೆ. ಇದರಿಂದಾಗಿ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ ನಾಗರಾಜ ಅವರನ್ನು ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.
