ಬೆಳಗಾವಿ: ನಗರ ಕಾಂಗ್ರೆಸ್ (Congress) ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಸಭೆಯಲ್ಲಿ ಕಾರ್ಯಕರ್ತರು ಎಐಸಿಸಿ (AICC) ವೀಕ್ಷಕರ ಎದುರಲ್ಲೇ ಕೈ-ಕೈ ಮಿಲಾಯಿಸಿಕೊಂಡು ಗಲಾಟೆ ನಡೆಸಿದ ಘಟನೆ ಬೆಳಗಾವಿ (Belagavi) ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದಿದೆ.
ಎಐಸಿಸಿ ವೀಕ್ಷಕ ಮನೋಜ್ ಚವ್ಹಾಣ್ ಹಾಗೂ ಎಐಸಿಸಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ನೂತನ ಮಹಾನಗರ ಅಧ್ಯಕ್ಷರ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹಣೆ ಸಭೆ ನಡೆಯುತ್ತಿತ್ತು. ಪ್ರಸ್ತುತ ಶಾಸಕ ಆಸೀಫ್ ಸೇಠ್ ಅವರು ಮಹಾನಗರ ಅಧ್ಯಕ್ಷರಾಗಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಕುಡಚಿ ಅವರು ತಮ್ಮ ಅಭಿಪ್ರಾಯ ಮಂಡಿಸಲು ಮುಂದಾದಾಗ, ಆಸೀಫ್ ಸೇಠ್ ಹಾಗೂ ರಮೇಶ್ ಕುಡಚಿ ಅವರ ಆಪ್ತರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಇದನ್ನೂ ಓದಿ: ಖರ್ಗೆ ನಂತರ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರೇ ಆಗಬಹುದು: ಶಿವಲಿಂಗೇಗೌಡ ಭವಿಷ್ಯ
ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ರಮೇಶ್ ಕುಡಚಿ ಅವರ ಆಪ್ತ ಹೇಮಂತ್ ಲಿಂಗಾಡೆ ಅವರ ಮೇಲೆ ಹಲ್ಲೆ ನಡೆಸಿ ಥಳಿಸಲಾಗಿದೆ. ಎಐಸಿಸಿ ಕಾರ್ಯದರ್ಶಿಗಳು ಎಷ್ಟೇ ಮನವಿ ಮಾಡಿದರೂ ಕಿವಿಗೊಡದ ಕಾರ್ಯಕರ್ತರು ಎಐಸಿಸಿ ವೀಕ್ಷಕರ ಕಣ್ಣೆದುರಲ್ಲೇ ಹೈಡ್ರಾಮಾ ಸೃಷ್ಟಿಸಿದರು.
ಅಂತಿಮವಾಗಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾರ್ಕೆಟ್ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
