‘ರಿಯಲ್ ಸ್ಟಾರ್’ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ ವಿಶಿಷ್ಟ ಆಲೋಚನೆ ಹಾಗೂ ಚಿತ್ರಕಥೆಗಳ ಮೂಲಕ ದಕ್ಷಿಣ ಭಾರತದಲ್ಲೇ ಹೊಸ ಅಲೆ ಸೃಷ್ಟಿಸಿದ ನೆಚ್ಚಿನ ನಟನ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರ ‘ನೆಕ್ಸ್ಟ್ ಲೆವೆಲ್’ ಸಿನಿಮಾದ ಆಕರ್ಷಕ ಫಸ್ಟ್ ಲುಕ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಪ್ಯಾನ್-ಇಂಡಿಯಾ ಚಿತ್ರಕ್ಕೆ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಹುಟ್ಟುಹಬ್ಬದ ಅಂಗವಾಗಿ ಹೊರಬಂದಿರುವ ಫಸ್ಟ್ ಲುಕ್ ಪೋಸ್ಟರ್ ವಿಭಿನ್ನ ವಿನ್ಯಾಸದಿಂದ ಕೂಡಿದ್ದು, ಸಿನಿಪ್ರಿಯರಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಚಿತ್ರದ ಪೋಸ್ಟರ್ ಶೈಲಿಯನ್ನು ಗಮನಿಸಿದರೆ ಇದೊಂದು ಫ್ಯಾಂಟಸಿ ಜಾನರ್ನ ಕಥೆಯೇ ಅಥವಾ ಇಂದಿನ ತಂತ್ರಜ್ಞಾನ ಆಧಾರಿತ ಗೇಮಿಂಗ್ ಹಿನ್ನೆಲೆಯುಳ್ಳ ಸಿನಿಮಾವೇ ಎಂಬ ನಾನಾ ಬಗೆಯ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿವೆ. ಇತ್ತೀಚೆಗಷ್ಟೇ ಬೆಂಗಳೂರಿನ ಪ್ರಸಿದ್ಧ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಸದ್ಯ ಫಸ್ಟ್ ಲುಕ್ ಮೂಲಕ ಚಿತ್ರತಂಡ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದನ್ನೂ ಓದಿ: ‘ಅಗ್ನಿ ಬಾಯ್ಸ್’ ಗುಂಪುಗಾರಿಕೆಗೆ ಬಿಸಿ – ವಾರದ ಪಂಚಾಯಿತಿಯಲ್ಲಿ ಸುದೀಪ್ ಖಡಕ್ ಕ್ಲಾಸ್
‘ಕಾಟೇರ’ ಚಿತ್ರದಲ್ಲಿ ಲಂಗ-ದಾವಣಿ ತೊಟ್ಟು ಅಚ್ಚಹಳ್ಳಿ ಹುಡುಗಿಯ ಮುಗ್ಧ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ನಟಿ ಆರಾಧನಾ, ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ಜೋಡಿಯಾಗಿದ್ದಾರೆ. ಮೊದಲ ಚಿತ್ರಕ್ಕೆ ತದ್ವಿರುದ್ಧವಾಗಿ, ಈ ಸಿನಿಮಾದಲ್ಲಿ ಅವರು ಅತ್ಯಂತ ಗ್ಲಾಮರಸ್ ಹಾಗೂ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮುಖ್ಯಮಂತ್ರಿಯ ಮಗಳ ಪ್ರಭಾವಿ ಪಾತ್ರಕ್ಕೆ ಜೀವ ತುಂಬುತ್ತಿರುವುದು ವಿಶೇಷ. ಇದರ ಜೊತೆಗೆ ಉಪೇಂದ್ರ ಅವರ ಅಣ್ಣನ ಪುತ್ರ, ಪ್ರತಿಭಾವಂತ ಯುವ ನಟ ನಿರಂಜನ್ ಸುಧೀಂದ್ರ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಚಿಕ್ಕಪ್ಪನ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲಿ ‘ವಿಕ್ಟರಿ-2’ ಹಾಗೂ ‘ಛೂ ಮಂತರ್’ ನಂತಹ ಯಶಸ್ವಿ ಮತ್ತು ವಿಭಿನ್ನ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ತರುಣ್ ಶಿವಪ್ಪ ಹಾಗೂ ಮಾನಸಾ ತರುಣ್, ತಮ್ಮ ‘ತರುಣ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಉಪೇಂದ್ರ ಅವರ ಸಾರ್ವಕಾಲಿಕ ಕ್ಲಾಸಿಕ್ ಸಿನಿಮಾಗಳಾದ ‘ಎ’, ‘ಉಪೇಂದ್ರ’ ಹಾಗೂ ‘ರಕ್ತಕಣ್ಣೀರು’ ಚಿತ್ರಗಳ ಸಾರ, ತತ್ವ ಹಾಗೂ ಆಲೋಚನಾ ಶೈಲಿಯನ್ನು ಹೊತ್ತಿರುವ ಈ ಕಥೆಯನ್ನು, ಇಂದಿನ ಜನರೇಷನ್ ಉಪ್ಪಿ ಹುಟ್ಟು ಹಬ್ಬಕ್ಕೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ವಿಶಿಷ್ಟವಾಗಿ ಹೆಣೆಯಲಾಗಿದೆ. ನಾಯಕನ ಜನ್ಮದಿನದಂದೇ ಹೊರಬಿದ್ದಿರುವ ಈ ‘ನೆಕ್ಸ್ಟ್ ಲೆವೆಲ್’ ಅಪ್ಡೇಟ್ ಉಪ್ಪಿ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.ಇದನ್ನೂ ಓದಿ: ದೇಶದ ಕಡಲ ರಕ್ಷಣೆಯಲ್ಲಿ 20 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದ ಸಾವಿತ್ರಿಬಾಯಿ ಫುಲೆ ನೌಕೆ ನಿವೃತ್ತಿ

