ತೆಲುಗು ಚಿತ್ರರಂಗದ ‘ನ್ಯಾಚುರಲ್ ಸ್ಟಾರ್’ ಖ್ಯಾತಿಯ ನಟ ನಾನಿ (Nani) ʻಬೆಂಗಳೂರು (Bengaluru) ಸ್ವಂತ ಮನೆಯಂತೆ ಭಾಸವಾಗುತ್ತೆʼ ಎಂದು ಹೇಳಿದ್ದಾರೆ.
ತಮ್ಮ ಅಭಿನಯದ ಆ್ಯಕ್ಷನ್ ಡ್ರಾಮಾ ʻThe Paradiseʼ ಚಿತ್ರದ ಪ್ರಚಾರಕ್ಕಾಗಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಅವರು ಕನ್ನಡದಲ್ಲೇ ಪ್ರೀತಿಯಿಂದ ಮಾತು ಆರಂಭಿಸಿದರು. ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ಇನ್ನಷ್ಟು ಹೆಚ್ಚು ಕನ್ನಡ ಕಲಿಯುವುದಾಗಿ ಭರವಸೆ ನೀಡಿ ನೆರೆದಿದ್ದ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ನಗರಕ್ಕೆ ಭೇಟಿ ನೀಡಿದಾಗಲೆಲ್ಲ ತಮಗೆ ಸಿಗುವ ಅದ್ಭುತ ಆತಿಥ್ಯ ಹಾಗೂ ಕನ್ನಡಿಗರ ವಿಶಾಲ ಮನೋಭಾವವನ್ನು ಅವರು ಸ್ಮರಿಸಿದರು. ಇದನ್ನೂ ಓದಿ: ಆಸಿಯಾ ವಿರುದ್ಧ ಗೆದ್ದು ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆದ ಸಂಗೀತಾ
ಬೆಂಗಳೂರು ಹಾಗೂ ಕನ್ನಡಿಗರ ಜೊತೆಗಿನ ಬಾಂಧವ್ಯದ ಕುರಿತು ಮಾತನಾಡಿದ ನಾನಿ, “ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಳಿದ ಕ್ಷಣದಿಂದಲೇ ನಾನು ಹೈದರಾಬಾದ್‌ನಲ್ಲಿದ್ದೇನೋ ಅಥವಾ ಎಲ್ಲಿಗೆ ಬಂದೆನೋ ಎನ್ನುವಷ್ಟು ಆತ್ಮೀಯವಾಗಿ ಜನರು ಪ್ರೀತಿಯಿಂದ ಮಾತನಾಡಿಸುತ್ತಾರೆ. ಆದರೆ ಕೇವಲ ಸಿನಿಮಾ ಪ್ರಚಾರದ ಕೆಲಸಗಳಿಗಾಗಿ ಬಂದು ತಕ್ಷಣ ಹಿಂತಿರುಗಬೇಕಾಗುತ್ತಿರುವುದಕ್ಕೆ ಬೇಸರವಿದೆ. ಇಲ್ಲಿನ ಆಹಾರ, ಸಂಸ್ಕೃತಿ ಮತ್ತು ಸಂಭ್ರಮವನ್ನು ಸಂಪೂರ್ಣವಾಗಿ ಆಸ್ವಾದಿಸಲು ಇನ್ನೆರಡು ದಿನ ಉಳಿದುಕೊಳ್ಳಬೇಕು ಎನಿಸುತ್ತದೆ. ಮುಂದೊಮ್ಮೆ ಬೆಂಗಳೂರಿಗೆ ಕೇವಲ ವಿಶ್ರಾಂತಿಗಾಗಿ ಪ್ರತ್ಯೇಕ ಟ್ರಿಪ್ ಪ್ಲಾನ್ ಮಾಡುತ್ತೇನೆ. ಯಾವುದೇ ಭಾಷೆಯ ಉತ್ತಮ ಚಿತ್ರ ಬಂದರೂ ಪ್ರೀತಿಯಿಂದ ಬೆಂಬಲಿಸುವ ಕನ್ನಡಿಗರ ಹೃದಯವೈಶಾಲ್ಯಕ್ಕೆ ನಾನು ಸದಾ ಚಿರಋಣಿ” ಎಂದರು.

ಇದಕ್ಕೆ ಪ್ರತಿಯಾಗಿ ನಿರೂಪಕಿ “ನೀವು ನೆರೆಯ ರಾಜ್ಯದ ನಟರಲ್ಲ, ನಮ್ಮ ನಟರು” ಎಂದಾಗ, “ನನಗೂ ಅಷ್ಟೇ, ಬೆಂಗಳೂರಿಗೆ ಬಂದರೆ ನನ್ನ ಮನೆಗೆ ಬಂದಂತೆ ಭಾಸವಾಗುತ್ತದೆ” ಎಂದು ನಾನಿ ಭಾವುಕರಾಗಿ ನುಡಿದರು.
ತಮ್ಮ ಮುಂಬರುವ ಚಿತ್ರದ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ ನಟ, “ಇದು ನನ್ನ ಇಡೀ ವೃತ್ತಿಜೀವನದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಪ್ರತಿಷ್ಠಿತ ಚಿತ್ರ. ನನ್ನ ಕೆರಿಯರ್‌ನಲ್ಲಿ ನಾನು ಅತಿ ಹೆಚ್ಚು ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದು ಈ ಚಿತ್ರಕ್ಕಾಗಿಯೇ. ಇದೊಂದು ಪಕ್ಕಾ ತಾಯಿ ಮತ್ತು ಮಗನ ಬಾಂಧವ್ಯದ ಕಥೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಭಾವನೆಯಾದ ತಾಯಿ-ಮಗನ ಪ್ರೀತಿಯನ್ನು ಒಂದು ಅದ್ಭುತ ಆ್ಯಕ್ಷನ್ ಎನರ್ಜಿ ಹಾಗೂ ದೃಶ್ಯ ವೈಭವದೊಂದಿಗೆ ತೆರೆಯ ಮೇಲೆ ಕಟ್ಟಿಕೊಡಲಾಗಿದೆ. ಅನಿರುದ್ಧ್ ಸಂಗೀತ ಮತ್ತು ಶ್ರೀಕಾಂತ್ ಅವರ ನಿರ್ದೇಶನ ಅದ್ಭುತವಾಗಿ ಮೂಡಿಬಂದಿದೆ. ಮೋಹನ್ ಬಾಬು, ಸೊನಾಲಿ ಕುಲಕರ್ಣಿ, ರಾಘವ್ ಜುಯಲ್ ಹಾಗೂ ಕಾಯಾಡು ಅವರಂತಹ ಅದ್ಭುತ ತಾರಾಗಣದೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದು ನನ್ನ ಸೌಭಾಗ್ಯ. ಸೆಪ್ಟೆಂಬರ್ 24ರಂದು ಸಿನಿಮಾ ಬಿಗ್ ಸ್ಕ್ರೀನ್‌ನಲ್ಲಿ ಅದ್ಭುತ ಸಿನಿಮೀಯ ಅನುಭವ ನೀಡಲಿದೆ” ಎಂದು ತಿಳಿಸಿದರು.
ಇದೇ ವೇಳೆ ಪೋಸ್ಟರ್‌ನಲ್ಲಿ ಗಮನಸೆಳೆದಿರುವ ವಿಶಿಷ್ಟ ಜಡೆ ಹೇರ್‌ಸ್ಟೈಲ್ ಕುರಿತು ಉತ್ತರಿಸಿದ ಅವರು, “ಇದು ಕೇವಲ ವಿಭಿನ್ನ ಲುಕ್‌ಗಾಗಿ ಮಾಡಿದ್ದಲ್ಲ; ಕಥೆಯಲ್ಲಿ ಅದಕ್ಕೆ ಅತ್ಯಂತ ಮಹತ್ವದ ಮತ್ತು ಆಳವಾದ ಕಾರಣವಿದೆ. ಅದನ್ನು ಚಿತ್ರಮಂದಿರದಲ್ಲೇ ನೋಡಿ ತಿಳಿದುಕೊಳ್ಳಬೇಕು” ಎಂದು ಕುತೂಹಲ ಕಾಯ್ದಿರಿಸಿದರು. ಇದನ್ನೂ ಓದಿ: ಹಿರಿಯ ನಟ ಅನಂತ್ ನಾಗ್ ಭೇಟಿಯಾದ ಕೇಂದ್ರ ಸಚಿವ ಸೋಮಣ್ಣ

