ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ವಲಸೆ ವ್ಯವಸ್ಥೆಯನ್ನು ಹಲವು ಆಯಾಮಗಳಲ್ಲಿ ಬಿಗಿಗೊಳಿಸುತ್ತಿದ್ದಾರೆ. ಕಾನೂನು ಸವಾಲುಗಳ ನಡುವೆಯೂ H-1B ವೀಸಾಗಳ ಮೇಲಿನ 1 ಲಕ್ಷ ಡಾಲರ್ ಶುಲ್ಕವನ್ನು ಮತ್ತೊಂದು ವರ್ಷದ ಅವಧಿಗೆ ವಿಸ್ತರಿಸಿದ್ದಾರೆ.
ಹೆಚ್1ಬಿ ವೀಸಾ ಅಡಿ ಉದ್ಯೋಗಿಗಳನ್ನು ಕರೆತರುವ ಕಂಪನಿಗಳಿಗೆ ಈಗಾಗಲೇ 1 ಲಕ್ಷ ಡಾಲರ್ ಶುಲ್ಕವನ್ನು ಟ್ರಂಪ್ ವಿಧಿಸಿದ್ದಾರೆ. ಈಗ ಈ ಅವಧಿಯನ್ನು ವಿಸ್ತರಿಸಿದ್ದಾರೆಂದು ಶ್ವೇತಭವನ ತಿಳಿಸಿದೆ. ಈ ಕ್ರಮ ಅಮೆರಿಕದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ (ಲೇ-ಆಫ್ ಮಾಡುವ) ಉದ್ಯೋಗದಾತರನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಿದೆ. ಅಮೆರಿಕದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವ ಅಥವಾ ಸಮಾನ ಹುದ್ದೆಯಲ್ಲಿರುವ ಅಮೆರಿಕದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದಾದ ರೀತಿಯಲ್ಲಿ ಉದ್ಯೋಗ ಕಡಿತಗೊಳಿಸಲು ಯೋಜಿಸುತ್ತಿರುವ ಕಂಪನಿಗಳ H-1B ವೀಸಾ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಈ ಆದೇಶವು ಫೆಡರಲ್ ಸಂಸ್ಥೆಗಳಿಗೆ ನಿರ್ದೇಶನ ನೀಡುತ್ತದೆ.
ಈ ಎರಡೂ ಕ್ರಮಗಳು H-1B ವೀಸಾ ಕಾರ್ಯಕ್ರಮದಲ್ಲಿ ಪ್ರಬಲ ಸ್ಥಾನ ಹೊಂದಿರುವ ಭಾರತ ಮೂಲದ ಐಟಿ ಉದ್ಯೋಗಿಗಳ ಮೇಲೆ ಪರೋಕ್ಷ ಪರಿಣಾಮ ಬೀರಲಿವೆ. ಈ ವೀಸಾದ ಮೂಲಕ ಅಮೆರಿಕದ ಉದ್ಯೋಗದಾತರು ವಿಶೇಷ ಕೌಶಲ ಅಗತ್ಯವಿರುವ ಹುದ್ದೆಗಳಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶವಿರುತ್ತದೆ. ಅನುಮೋದನೆಗೊಂಡ ಪ್ರತಿ ನಾಲ್ಕು H-1B ವೀಸಾಗಳ ಪೈಕಿ ಸುಮಾರು ಮೂರು ವೀಸಾಗಳು ಭಾರತೀಯರ ಪಾಲಾಗುತ್ತವೆ. ಹೀಗಾಗಿ, ಅವರು ಅಮೆರಿಕದ ತಂತ್ರಜ್ಞಾನ ವಲಯ ಹಾಗೂ ಸಿಲಿಕಾನ್ ವ್ಯಾಲಿಯ ಕೆಲವು ಅತಿದೊಡ್ಡ ಕಂಪನಿಗಳ ಬೆನ್ನೆಲುಬಾಗಿದ್ದಾರೆ.
ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ಅಮೆರಿಕದ ನಾಗರಿಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಪ್ರಯತ್ನದ ಭಾಗವಾಗಿ H-1B ವೀಸಾಗಳ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸಿದ್ದಾರೆ.
ಕಳೆದ ತಿಂಗಳು, ಉದ್ಯೋಗ ಕಳೆದುಕೊಂಡ H-1B ಮತ್ತು ಇತರ ವಲಸೆಯೇತರ ವೀಸಾ ಹೊಂದಿರುವವರಿಗೆ ನೀಡಲಾಗುವ 60 ದಿನಗಳ ರಿಯಾಯಿತಿ ಅವಧಿಯನ್ನು (ಗ್ರೇಸ್ ಪಿರಿಯಡ್) ರದ್ದುಗೊಳಿಸುವ ಹೊಸ ನಿಯಮವೊಂದನ್ನು ‘ಹೋಮ್‌ಲ್ಯಾಂಡ್ ಸೆಕ್ಯುರಿಟಿ’ ಪ್ರಸ್ತಾಪಿಸಿತು. ಪರಿಣಾಮವಾಗಿ, ಅಮೆರಿಕದಲ್ಲಿ ಉಳಿದುಕೊಳ್ಳಲು ಮತ್ತೊಂದು ಕಾನೂನುಬದ್ಧ ಮಾರ್ಗವನ್ನು ಕಂಡುಕೊಳ್ಳಲು ಈ ಉದ್ಯೋಗಿಗಳಿಗೆ ಅತ್ಯಂತ ಕಡಿಮೆ ಸಮಯಾವಕಾಶ ಲಭ್ಯವಾಗಲಿದೆ.

