ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ (Shankar Bidari) ವಿರುದ್ಧ ಸಚಿವ ಎಂ.ಬಿ. ಪಾಟೀಲ್ (MB Patil) ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ವಿರುದ್ಧ ಬಿದರಿ ಮಾಡಿರುವ ಆರೋಪಗಳಿಗೆ ಟ್ವೀಟ್ ಮೂಲಕ ಖಾರವಾಗಿ ಪ್ರತಿಕ್ರಿಯಿಸಿರುವ ಪಾಟೀಲ್, ಅಪ್ಪಟ ಸುಳ್ಳುಗಾರ ಮಿಸ್ಟರ್ ಬಿದರಿ, ನಾನು ಜಪಾನ್ ಪ್ರವಾಸ ಮುಗಿಸಿ ಬಂದ ನಂತರ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ನೇರ ಸವಾಲು ಹಾಕಿದ್ದಾರೆ.
ಬಸವಣ್ಣನವರನ್ನು ಹೀಯಾಳಿಸಿದ ವ್ಯಕ್ತಿಯ ಜೊತೆ ಕೈಜೋಡಿಸಿರುವ ಇವರು, ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವ ಕನಿಷ್ಠ ಸೌಜನ್ಯವೂ ಇಲ್ಲದೆ ಅಸಂಬದ್ಧವಾಗಿ ಮಾತನಾಡುತ್ತಾರೆ ಎಂದು ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ. ಮೂರ್ನಾಲ್ಕು ಪಕ್ಷಗಳನ್ನು ಬದಲಾಯಿಸಿ, ಚುನಾವಣೆಗೆ ನಿಂತು ಠೇವಣಿ ಕಳೆದುಕೊಂಡಿರುವ ಇವರಿಂದ ನಮ್ಮ ಸಮಾಜಕ್ಕೆ ಉಪದೇಶ ಬೇಕಿಲ್ಲ ಎಂದಿದ್ದಾರೆ.
ನಮ್ಮ ಪೂರ್ವಜರಾದ ಸಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನು ಶಿಕ್ಷಣಕ್ಕಾಗಿ ದಾನ ನೀಡಿದವರು. ಅದೇ ಲಿಂಗರಾಜ ಫಂಡ್ ಮೂಲಕ ಶಿಕ್ಷಣ ಪಡೆದ ಬಿದರಿಯವರ ಎಲ್ಲಾ ದಾನಗಳೂ ನಮಗೆ ಗೊತ್ತಿವೆ. ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಕುರಿತು ನಾನು ಮಾಡಿರುವ ಕೆಲಸವನ್ನು ಇಡೀ ನಾಡೇ ನೋಡುತ್ತಿದೆ, ಇವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಗಂಭೀರ ಎಚ್ಚರಿಕೆ ನೀಡಿರುವ ಸಚಿವರು, ತಾನು ಸತ್ಯವಂತ, ಬಸವಣ್ಣನ ಅನುಯಾಯಿ ಅಂತ ಬೆನ್ನು ತಟ್ಟಿಕೊಳ್ಳುವ ಬಿದರಿ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಮಾಡಿರುವ ಅನಾಚಾರ, ಅನೈತಿಕ ಅವಾಂತರ ಮತ್ತು ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಜನರ ಮುಂದೆ ಇಡುತ್ತೇನೆ. ಅಷ್ಟೇ ಅಲ್ಲ, ಸಿದ್ದಗಂಗಾ ಹಿರಿಯ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರದ ಸತ್ಯದರ್ಶನವನ್ನೂ ಮಾಡಿಸುತ್ತೇನೆ ಎಂದಿದ್ದಾರೆ.ಇದನ್ನೂ ಓದಿ: ಟೆಕ್ಕಿಯನ್ನು ಕೊಂದು ರಾತ್ರಿಯಿಡೀ ಶವದ ಬಳಿ ಕುಳಿತ ಲಿವ್ ಇನ್ ಪಾರ್ಟ್ನರ್
ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿಸುವಂತೆ ನಾನು ಬಿದರಿ ಆಫೀಸಿಗೆ ಹೋಗಿದ್ದೆ ಅನ್ನೋದು ಅಪ್ಪಟ ಕಟ್ಟುಕಥೆ, ಹಸಿಸುಳ್ಳು. ನಾನು ಯಾರ ಮನೆಯ ಬಾಗಿಲಿಗೂ ಹೋಗಿ ಸ್ವಾಭಿಮಾನ ಬಿಟ್ಟುಕೊಟ್ಟವನಲ್ಲ, ಆತ್ಮಗೌರವ ಬದಿಗಿಟ್ಟು ತಲೆತಗ್ಗಿಸುವ ಪ್ರಶ್ನೆಯೇ ಇಲ್ಲ ಎಂದು ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಕಾವೇರಿ-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆ: ತಡೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಕರ್ನಾಟಕ
