ಬಾಗಲಕೋಟೆ: ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಪಟ್ಟಣವಾದ ಲೋಕಾಪುರದಲ್ಲಿರುವ(Lokapura) ಹನುಮಂತ ದೇವಸ್ಥಾನದ(Hanumantha Temple) ಬಳಿ ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ.
ದೇವಸ್ಥಾನದ ಪಕ್ಕದಲ್ಲಿರುವ ಚರಂಡಿಯ(Drainage) ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಇಡೀ ಪರಿಸರದಲ್ಲಿ ದುರ್ವಾಸನೆ ಹರಡುತ್ತಿದ್ದು, ಸ್ಥಳೀಯ ನಿವಾಸಿಗಳು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆ ಬಂದಾಗಲೆಲ್ಲ ಊರಿನ ಚರಂಡಿಯ ಗಲೀಜು ನೀರು ನೇರವಾಗಿ ದೇವಾಲಯದ ಆವರಣಕ್ಕೆ ನುಗ್ಗುತ್ತಿದೆ. ಅತ್ಯಂತ ಪವಿತ್ರವಾದ ಧಾರ್ಮಿಕ ಸ್ಥಳ ಹೀಗೆ ಅಶುಚಿತ್ವದ ಕೂಪವಾಗಿ ಮಾರ್ಪಡುತ್ತಿರುವುದರಿಂದ ಭಕ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ದೇವರ ದರ್ಶನಕ್ಕೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು, ಗಲೀಜು ನೀರಿನಲ್ಲೇ ನಡೆದುಕೊಂಡು ಹೋಗಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ಐತಿಹಾಸಿಕ ಮಹತ್ವವಿರುವ ಈ ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕರ್ತವ್ಯ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾರೊಬ್ಬರೂ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಗೆ ಬಿದ್ದ ಟಿಪ್ಪರ್ – ಮುಳುಗುತ್ತಿದ್ದ ಲಾರಿ ಮೇಲೆ ಕುಳಿತು ಪ್ರಾಣ ಉಳಿಸಿಕೊಂಡ ಚಾಲಕ
ಸ್ಥಳೀಯ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದಾದರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.
