ಒಂದು ಸಿನಿಮಾ ಗೆಲ್ಲಬೇಕೆಂದರೆ ಕಥೆ, ಕಲಾವಿದರ ಅಭಿನಯ, ಮೇಕಿಂಗ್ ಜೊತೆಗೆ ಹಾಡುಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಇದೇ ಕಾರಣಕ್ಕೆ ‘ಪಾರ್ಟ್ನರ್’ ಚಿತ್ರದ (Partner Movie) ಮೊದಲ ಹಾಡು (First Song) ಈಗ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಮಳೆ, ಧೈರ್ಯಂ, ದಿಲ್ ಪಸಂದ್ ಚಿತ್ರಗಳ ಬಳಿಕ ನಿರ್ದೇಶಕ ಶಿವತೇಜಸ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಅಜಯ್ ರಾವ್ (Ajay Rao) ಮತ್ತು ಬೃಂದಾ ಆಚಾರ್ಯ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಇಂದಿನ ಜನರೇಷನ್‌ನ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ರೀತಿಯ ವಿಷಯಗಳನ್ನು ಆಧರಿಸಿ, ಜೀವನ ಎಂದರೆ ಇದಷ್ಟೇ ಅಲ್ಲ, ಅದರಾಚೆಯೂ ಸಾಕಷ್ಟು ಭಾವನೆಗಳಿವೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲು ಚಿತ್ರತಂಡ ಮುಂದಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಫಸ್ಟ್ ಲುಕ್ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಚಿತ್ರದ ಮೊದಲ ಹಾಡು ‘ಅಮೋರಾ’ ಬಿಡುಗಡೆಯಾಗಿದೆ. ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿರುವ ಈ ಹಾಡಿಗೆ ಕುನಾಲ್ ಗಂಜಾವಾಲಾ ಧ್ವನಿಯಾಗಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಹರೀಶ್ ದೇವಿತಂದ್ರೆ ಅವರ ಗುರುಗಳಾದ ನಾಗಭೂಷಣ್ ದಂಪತಿ ಹಾಡನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ನಟ ಅಜಯ್ ರಾವ್, ಈ ಸಿನಿಮಾ ನನ್ನ ಮನಸಿಗೆ ತುಂಬಾ ಹತ್ತಿರವಾಗಿದೆ. ನನ್ನ ಹೃದಯದ ಒಂದು ಭಾಗವನ್ನೇ ಈ ಚಿತ್ರದಲ್ಲಿ ಹಾಕಿದ್ದೇನೆ. ಕೆಲ ಸಿನಿಮಾಗಳು ಆರಂಭದಿಂದಲೇ ಏನೋ ಒಂದು ಮ್ಯಾಜಿಕ್ ಮಾಡುತ್ತವೆ. ಈ ಸಿನಿಮಾ ಕೂಡ ಅಂತಹದ್ದೇ. ಈ ಚಿತ್ರದ ಮೇಲೆ ನನಗೆ ತುಂಬಾ ನಂಬಿಕೆ ಇದೆ. ಹ್ಯೂಮನ್ ವ್ಯಾಲ್ಯೂಸ್ ಮತ್ತು ಎಮೋಷನ್ಸ್ ತುಂಬಾ ಚೆನ್ನಾಗಿ ಮೂಡಿಬಂದಿವೆ ಎಂದು ಹೇಳಿದರು.ಇದನ್ನೂ ಓದಿ: ಶೀಘ್ರದಲ್ಲೇ ನಟ ಧನುಷ್ ರಾಜಕೀಯಕ್ಕೆ ಎಂಟ್ರಿ?
ನಿರ್ದೇಶಕ ಶಿವತೇಜಸ್ ಮಾತನಾಡಿ, ದಿಲ್ ಪಸಂದ್ ಚಿತ್ರದ ವೇಳೆ ನಿರ್ಮಾಪಕ ಹರೀಶ್ ಅವರೊಂದಿಗೆ ಸ್ನೇಹ ಶುರುವಾಯಿತು. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ಪಾರ್ಟ್ನರ್ ಇರುತ್ತಾರೆ. ಅದನ್ನೇ ಆಧರಿಸಿ ಈ ಸಿನಿಮಾ ಮಾಡಿದ್ದೇವೆ. ‘ಅಮೋರಾ’ ಹಾಡು ಕೂಡ ಯುವಜನರಿಗೆ ಇಷ್ಟವಾಗುವ ರೀತಿಯಲ್ಲಿ ಮೂಡಿಬಂದಿದೆ ಎಂದರು.

ನಿರ್ಮಾಪಕ ಹರೀಶ್ ದೇವಿತಂದ್ರೆ ಮಾತನಾಡಿ, ನಾನು ಇಂದು ಇಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ನನ್ನ ತಾಯಿ ಮತ್ತು ಪತ್ನಿಯೇ ಕಾರಣ. ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಕುಳಿತು ನೋಡುವಂತಹ ಸಿನಿಮಾವನ್ನು ನಿರ್ಮಿಸಿದ್ದೇವೆ. ಚಿತ್ರದ ಆಡಿಯೋ ಹಕ್ಕುಗಳಿಗೆ ಆನಂದ್ ಆಡಿಯೋ ಉತ್ತಮ ಮೊತ್ತ ನೀಡಿದೆ ಎಂದು ಹೇಳಿದರು.
ನಾಯಕಿ ಬೃಂದಾ ಆಚಾರ್ಯ ಮಾತನಾಡಿ, ‘ಅಮೋರಾ’ ನನ್ನ ಸಿನಿಮಾ ಜೀವನದ ಅತ್ಯುತ್ತಮ ಹಾಡುಗಳಲ್ಲಿ ಒಂದು. ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಸಂತೋಷ ಇದೆ ಎಂದರು. ಸಂಗೀತ ನಿರ್ದೇಶಕ ನಕುಲ್ ಅಭಯಂಕರ್, ಸಾಹಿತಿ ನಾಗಾರ್ಜುನ ಶರ್ಮಾ, ಕೊರಿಯೋಗ್ರಾಫರ್ ಮುರಳಿ ಹಾಗೂ ನಟ ಅರವಿಂದ್ ರಾವ್ ಕೂಡ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಚಿತ್ರದ ಬಹುತೇಕ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಲಾಗಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. HPR Enterprises ಬ್ಯಾನರ್ ಅಡಿಯಲ್ಲಿ ಹರೀಶ್ ದೇವಿತಂದ್ರೆ ಚಿತ್ರವನ್ನು ನಿರ್ಮಿಸಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಕವಿರಾಜ್, ಪ್ರಮೋದ್ ಮರವಂತೆ ಮತ್ತು ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ.ಇದನ್ನೂ ಓದಿ: ರಿಷಬ್ ಶೆಟ್ಟಿಯ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾಗೆ ನಟಿ ಭೂಮಿ ಪೆಡ್ನೇಕರ್ ಎಂಟ್ರಿ
