ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದೊಂದಿಗೆ ಮರಳಿದ್ದಾರೆ. ಸರ್ಚ್ ಹೆಸರಿನ ಈ ಚಿತ್ರದ ಮುಹೂರ್ತ ಸಮಾರಂಭ ನಾಗರಬಾವಿ ಮುದ್ದಿನ ಪಾಳ್ಯದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರದ ನಾಯಕ ಪಂಕಜ್ ಮಾತನಾಡಿ, ಉಗ್ರಂ ಮುರಳಿ ಅವರು ಈಗಾಗಲೇ ಚಿತ್ರದ ಟೈಟಲ್ ಲಾಂಚ್ ಮಾಡಿಕೊಟ್ಟರು. ಇದೀಗ ಗಣ್ಯರ ಸಮ್ಮುಖದಲ್ಲಿ ಮುಹೂರ್ತ ನೆರವೇರಿದೆ. ಮೊದಲನೆಯದಾಗಿ ಕಥೆಯೇ ನಾನು ಈ ಚಿತ್ರ ಒಪ್ಪಲು ಪ್ರಮುಖ ಕಾರಣ. ಇದು ಒಂದೇ ವಿಷಯವನ್ನು ತಲೆಯಲ್ಲಿಟ್ಟುಕೊಂಡು ಚಾಲೆಂಜ್ ಆಗಿ ಹುಡುಕಾಟ ನಡೆಸುವ ವಿಭಿನ್ನ ವ್ಯಕ್ತಿಯ ಪಾತ್ರ. ಗ್ಯಾಪ್ ಬಳಿಕ ಚಿತ್ರ ಮಾಡುತ್ತಿರುವುದೇನೋ ನಿಜ. ನಮ್ಮ ತಂದೆಯ ಮಾತಿನಂತೆ ಪ್ರತಿ ಸಿನಿಮಾಗಾಗಿ ಕೂಡ ನಾನು ಸಮರ್ಪಣಾಭಾವದಿಂದ ಕೆಲಸ ಮಾಡುತ್ತೇನೆ. ಆದರೆ, ಈ ಬಾರಿ ಈ ಹಿಂದೆಂದೂ ಮಾಡಿರದಂಥ ಪಾತ್ರ ಲಭಿಸಿರುವುದು ಮಾತ್ರ ನಿಜ. ಅದರಲ್ಲೂ ನಿರ್ದೇಶಕ ರಮೇಶ್ ಅವರು ಕಲಾವಿದರಿಂದ ಇದೇ ಬೇಕು ಅಂತ ಹೇಳಿ ಕೆಲಸ ತೆಗೆಯಬಲ್ಲವರು. ಹಾಗಾಗಿ ಸಹಜವಾಗಿಯೇ ನಿರೀಕ್ಷೆಗಳಿವೆ ಎಂದರು. ಜನಪ್ರಿಯ ಚಿತ್ರ ‘ದಿಗ್ಗಜರು’ ಸಿನೆಮಾ ಕಾಲದಿಂದಲೇ ಚಿತ್ರರಂಗದೊಂದಿಗೆ ಸಂಬಂಧ ಇರಿಸಿದವರು ನಿರ್ದೇಶಕ ವೈ.ಬಿ.ರಮೇಶ್ ಕೋಟೆ. ಸಿನಿಮಾ, ಧಾರಾವಾಹಿ ಕ್ಷೇತ್ರದಲ್ಲಿ ಸಹ ನಿರ್ದೇಶಕರಾಗಿ ಅನುಭವ ಹೊಂದಿರುವ ರಮೇಶ್ ಅವರ ನಿರ್ದೇಶನದ ಪ್ರಥಮ ಚಿತ್ರ ಇದು. ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಅದನ್ನು 25 ರಾತ್ರಿಗಳಲ್ಲಿ ಚಿತ್ರೀಕರಿಸಲಿದ್ದೇವೆ.
ಚಿತ್ರವನ್ನು ಹುಬ್ಬಳ್ಳಿ ಭಾಷೆಯಲ್ಲಿ ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌ನಲ್ಲೇ ಚಿತ್ರೀಕರಿಸುವ ಯೋಜನೆ ಇತ್ತು. ಆದರೆ, ಅಲ್ಲಿಗೆ ಹೋಗಿ ನೋಡಿದಾಗ ಜಾಗ ತುಂಬ ಬದಲಾಗಿತ್ತು. ಹಾಗಾಗಿ, ಬೆಂಗಳೂರಲ್ಲೇ ಸರ್ಕಲ್ ಸೆಟ್ ಹಾಕಿ, ಬೆಂಗಳೂರಿನ ಕಥೆಯಾಗಿ ಚಿತ್ರ ಮಾಡಲಿದ್ದೇವೆ ಎಂದರು. ಚಿತ್ರದಲ್ಲಿ ನಾಯಕನ ಕಣ್ಣ ಮುಂದೆಯೇ ಮಿಸ್ ಆಗುವ ಹುಡುಗಿಯ ಹುಡುಕಾಟವಿದೆ. ಇದೇ ಸಂದರ್ಭದಲ್ಲಿ ಮತ್ತೊಂದೆಡೆ ಸಾಫ್ಟ್‌ವೇರ್ ಹುಡುಗನ ಲಗೇಜ್, ಲ್ಯಾಪ್‌ಟಾಪ್ ಹುಡುಕಾಟವೂ ನಡೆದಿರುತ್ತದೆ. ಸಿನಿಮಾ ಪ್ರೇಕ್ಷಕರನ್ನು ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ ಎಂದು ಭರವಸೆ ನೀಡಿದರು. ಸರ್ಚ್ ಸಿನಿಮಾದಲ್ಲಿ ಪಂಕಜ್ ಅವರ ಜೋಡಿಯಾಗಿ ನಟಿಸುತ್ತಿರುವುದು ಧಾಮಿನಿ. ನನ್ನದು ಮೂಲತಃ ಕೊಡಗು. ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಾಂಗಲ್ಯ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ ಎಂದರು.

ನಟಿ ಕೃತ್ತಿಕಾ ಗೌಡ ಮಾತನಾಡಿ, ಈ ಚಿತ್ರದಲ್ಲಿನ ಪ್ರತಿಯೊಂದು ಪಾತ್ರವೂ ನನ್ನ ಪಾತ್ರದ ಸುತ್ತವೇ ಸುತ್ತುತ್ತಿರುತ್ತದೆ. ಅದರ ಕಾರಣ ತಿಳಿಯಬೇಕಾದರೆ ನೀವು ಸಿನೆಮಾ ನೋಡಬೇಕು. ನನಗೆ ನಿರ್ದೇಶಕ ರಮೇಶ್ ಅವರು ಕಿರುಚಿತ್ರವೊಂದರ ನಿರ್ದೇಶಕರಾಗಿ ಪರಿಚಯವಾದರು. ಈಗ ಅವರ ನಿರ್ದೇಶನದ ಸರ್ಚ್‌ನಲ್ಲಿ ಪ್ರಧಾನ ಪಾತ್ರ ದೊರಕಿರುವುದು ಖುಷಿಯಾಗಿದೆ ಎಂದರು. ಇದು ತಾವು ನಟಿಸುತ್ತಿರುವ ಐದನೇ ಚಿತ್ರ ಎಂದರು.
ಚಿತ್ರದ ಮತ್ತೊಂದು ಪ್ರಧಾನ ಪಾತ್ರವನ್ನು ನಟ ಸುಭಾನ್ ಅವರು ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸಣ್ಣಪುಟ್ಟ ಪಾತ್ರದಲ್ಲಿ ನಟಿಸಿದ್ದ ಸುಭಾನ್ ಅವರು ಈ ಚಿತ್ರದ ಸಹನಿರ್ಮಾಪಕರೂ ಹೌದು. ಜನಪ್ರಿಯ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಕ್ಲ್ಯಾಪ್ ಮಾಡಿದರು. ಕ್ಯಾಮೆರಾ ಆನ್ ಮಾಡಿದ ನಟ ಶ್ರೀನಗರ ಕಿಟ್ಟಿ, ಎಸ್.ನಾರಾಯಣ್ ನನ್ನ ಗುರುಗಳು. ಪಂಕಜ್ ಆ ಗುರುಗಳ ಮಗ. ರಮೇಶ್ ಚಿಕ್ಕದಾಗಿ ಚೊಕ್ಕದಾಗಿ ಈ ಚಿತ್ರವನ್ನು ಮಾಡಿ ಮುಗಿಸಲಿ ಎಂದು ಶುಭ ಕೋರಿದರು. ಯುವ ನಿರ್ಮಾಪಕ ಯೋಗೇಶ್ .ಎನ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿರುವ ಯೋಗೇಶ್‌ಗೆ ತಂದೆ ಪತ್ರಕರ್ತ ಸೌರಭ ನಾಗರಾಜ್ ಅವರ ಬೆಂಬಲವೂ ಇದೆ. ಚಿತ್ರ ಒಂದು ಒಳ್ಳೆಯ ಕಥಾವಸ್ತು ಹೊಂದಿದೆ. ಕಥೆ ಕೇಳುವಾಗಲೇ ನನಗೆ ಮಲಯಾಳಂ ಸಿನಿಮಾ ಫೀಲ್ ಕೊಡ್ತು. ಹಾಗಾಗಿ ನಿರ್ಮಾಣಕ್ಕೆ ಒಪ್ಪಿದೆ ಎಂದು ಯೋಗೇಶ್ ಹೇಳಿದರು. ಅಶೋಕ್.ಕೆ ರಾಜ್ ಛಾಯಾಗ್ರಹಣ ಇರುವ ಸರ್ಚ್ ಚಿತ್ರಕ್ಕೆ ಶ್ರೀ ಅಂಜನ್ ಸಂಗೀತ ಸಂಯೋಜಕರು. ಸೆಪ್ಟೆಂಬರ್ 15ರಿಂದ ಚಿತ್ರೀಕರಣ ಶುರುವಾಗಲಿದೆ.

