ಈ ಬಾರಿ ದಸರಾ (Mysuru Dasara) ಉತ್ಸವದಿಂದ ಚಿತ್ರೋತ್ಸವಕ್ಕೆ (Dasara Film Festival) ಕೊಕ್ ನೀಡಲಾಗಿದೆ. ಈ ವಿಚಾರವಾಗಿ ಕನ್ನಡ ಚಿತ್ರೋದ್ಯಮದ (Sandalwood) ಗಣ್ಯರು ಬೇಸರ ಹೊರಹಾಕಿದ್ದಾರೆ. ಪ್ರೇಕ್ಷಕರ ಕೊರತೆಯೇ ಚಿತ್ರೋತ್ಸವ ಕೈಬಿಡಲು ಕಾರಣ ಎಂದು ಜಿಲ್ಲಾಡಳಿತ ಹೇಳಿದ್ದರೂ ಹಲವು ನಿರ್ದೇಶಕರು ಅಸಮಾಧಾನ ಹೊರಹಾಕಿದ್ದಾರೆ.
45 ಲಕ್ಷ ರು. ವರೆಗೂ ಖರ್ಚು ಮಾಡಿದರೂ ಕೆಲವೊಂದು ಸಿನಿಮಾಗಳಿಗೆ ಕೇವಲ 5-6 ಜನ ಮಾತ್ರ ಬರ್ತಾರೆ ಎಂದು ಪ್ರೇಕ್ಷಕರ ಕೊರತೆ ನೆಪವೊಡ್ಡಿ ಪ್ರಮುಖ ಆಕರ್ಷಣೆಯನ್ನು ಏಕಾಏಕಿ ಕೈಬಿಟ್ಟಿರುವುದು ಸಿನಿಪ್ರೇಮಿಗಳು ಹಾಗೂ ಸ್ಯಾಂಡಲ್‌ವುಡ್ ನ ಸಿನಿಗಣ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕಾಕನಕೋಟೆಯಲ್ಲಿ ಆಪರೇಷನ್ ʻಖೆಡ್ಡಾʼ – ಕಾಡಿನಿಂದ ಅರಮನೆಯ ಅಂಬಾರಿವರೆಗೆ; ದಸರಾ ಆನೆಗಳ ಇತಿಹಾಸವೇ ರೋಚಕ!
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನಿರ್ದೇಶಕ ಮಂಸೋರೆ, ಸದಾಭಿರುಚಿಯ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಲು ಇರುವ ಸೀಮಿತ ಅವಕಾಶಗಳನ್ನು ಸರ್ಕಾರ ಕೈಬಿಡುವ ನಿರ್ಧಾರವನ್ನು ಒಪ್ಪತಕ್ಕದ್ದಲ್ಲ. ಹೆಚ್ಚು ಪ್ರೇಕ್ಷಕರನ್ನು ತಲುಪಲು ವಿಫಲವಾಗಿದ್ದ ಅದೆಷ್ಟೋ ಕನ್ನಡ ಸಿನಿಮಾಗಳು ದಸರಾ ಚಿತ್ರೋತ್ಸವದ ಮೂಲಕ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿತ್ತು. ನಿರ್ಧಾರನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ದಸರಾ ಚಿತ್ರೋತ್ಸವದಲ್ಲಿ ಹಲವು ಭಾರತೀಯ ಚಿತ್ರಗಳು ಸೇರಿದಂತೆ ಹೆಚ್ಚು ಪ್ರಾದೇಶಿಕ ಚಿತ್ರಗಳೂ ಹಾಗೂ ಕಿರುಚಿತ್ರಗಳ ಪ್ರದರ್ಶನ, ಸ್ಪರ್ಧೆಯನ್ನೂ ಏರ್ಪಡಿಲಾಗುತ್ತಿತ್ತು. ಈ ಬಾರಿ ಹಿಂದಿನ ವರ್ಷಗಳಲ್ಲಾದ ನೀರಸ ಪ್ರತಿಕ್ರಿಯೆಯಿಂದಾಗಿ ಕೈಬಿಡಲಾಗಿದೆ ಎಂದು ಜಿಲ್ಲಾಡಳಿತ ಅಭಿಪ್ರಾಯ ಪಟ್ಟಿದೆ.
ಚಿತ್ರೋತ್ಸವಕ್ಕಾಗಿ ಸುಮಾರು 40 ಲಕ್ಷದಷ್ಟು ಖರ್ಚಾಗುತ್ತದೆ ಎಂಬ ಮಾಹಿತಿ ಇದೆ. ಆದರೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಅನೇಕ ವರ್ಷಗಳ ಇತಿಹಾಸವುಳ್ಳ ಚಿತ್ರೋತ್ಸವ ಕೈಬಿಡಲಾಗಿದೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಅನೇಕರು ಈ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ʻಚಿತ್ರನಗರಿ’ ಸ್ಥಾಪನೆಯಾಗುತ್ತಿರುವ ಈ ಸಮಯದಲ್ಲಿ ದಸರೆ ಚಲನ ಚಿತ್ರೋತ್ಸವಕ್ಕೆ ಕೊಕ್ ನೀಡಿರುವುದು ಬೇಸರದ ಸಂಗತಿಯಾಗಿದೆ. ಇದು ಕನ್ನಡ ಚಿತ್ರೋದ್ಯಮಕ್ಕೆ ಮಾಡಿದ ಅಪಮಾನವಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕಿದೆ ಎಂದು ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್‌ಬಾಬು ಅವರು ಹೇಳಿದ್ದಾರೆ.
ಮೈಸೂರು ಕನ್ನಡ ಚಿತ್ರೋದ್ಯಮದ ತವರು ಭೂಮಿ. 1945ರಲ್ಲಿ ಕರ್ನಾಟಕದ ಮೊಟ್ಟ ಮೊದಲ ಸ್ಟುಡಿಯೋ ಎನಿಸಿದ ನವಜ್ಯೋತಿ ಸ್ಟುಡಿಯೋ ಮೈಸೂರಿನಲ್ಲೇ ಸ್ಥಾಪಿತವಾಗಿತ್ತು. ಪ್ರೀಮಿಯರ್ ಸ್ಟುಡಿಯೋ ಏಷ್ಯಾದಲ್ಲೇ ಅತಿ ದೊಡ್ಡ ಸ್ಟುಡಿಯೋ ಎಂಬ ಖ್ಯಾತಿ ಪಡೆದಿತ್ತು. ಡಾ.ರಾಜ್ ಕುಮಾರ್ , ಡಾ.ವಿಷ್ಣುವರ್ಧನ್, ಡಾ.ಅಂಬರೀಶ್, ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಎಂ.ಆರ್.ವಿಠಲ್, ವಿ.ಕೆ.ಮೂರ್ತಿಯಂಥ ಪ್ರತಿಭಾವಂತ ನಟರು, ನಿರ್ದೇಶಕರು, ಛಾಯಾ ಗ್ರಾಹಕರು ಹುಟ್ಟಿ ಬೆಳೆದ ಮೈಸೂರಿನಲ್ಲಿ ಚಲನ ಚಿತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಇದನ್ನೂ ಓದಿ: ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ನಟ – ನಟಿಯರು ಭಾಗಿ

