ಮೈಸೂರು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಮೂಡುವುದು ವೈಭವಪೂರ್ಣ ದಸರಾ. ದಸರಾ ಎಂದರೆ ಅರಮನೆಯ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳು, ವಾದ್ಯಗಳ ನಾದ. ಇವೆಲ್ಲದರ ನಡುವೆ ಜನರನ್ನ ಅತ್ಯಂತ ಹೆಚ್ಚು ಆಕರ್ಷಿಸುವುದು ಜಂಬೂಸವಾರಿ. ಅದರಲ್ಲೂ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವ ಆನೆಯನ್ನ ನೋಡುವುದೇ ಒಂದು ಅಪೂರ್ವ ಅನುಭವ. ಆದ್ರೆ ಇಂದು ಜಂಬೂಸವಾರಿಯ ಅವಿಭಾಜ್ಯ ಅಂಗವಾಗಿರುವ ಈ ದಸರಾ ಆನೆಗಳ ಹಿಂದೆ ಶತಮಾನಗಳ ಇತಿಹಾಸವಿದೆ. ಕಾಡಿನ ಆಳದಿಂದ ಅರಮನೆಯ ಅಂಗಳದವರೆಗೆ, ಕಾಡುಪ್ರಾಣಿಯಿಂದ ಪಳಗಿದ ಗಜವೀರನಾಗುವವರೆಗೆ ಸಾಗಿದ ಈ ಪಯಣವೇ ಒಂದು ರೋಚಕ ಗಜಗಾಥೆ.
ಆನೆಗಳನ್ನ ಕಾಡಿನಿಂದ ಹಿಡಿದು ಪಳಗಿಸುವ ವಿಶಿಷ್ಟ ವಿಧಾನವೇ ʻಖೆಡ್ಡಾʼ. ‘ಖೆಡ್ಡಾ’ ಎಂಬುದು ಹಿಂದಿ ಶಬ್ದವಾಗಿದ್ದು, ಆನೆಗಳನ್ನ ಬೋನಿಗೆ ತಳ್ಳುವ ಕಾರ್ಯಾಚರಣೆಯ ಹೆಸರಾಗಿದೆ. ಈ ವಿಧಾನ ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಇದ್ದಿರಬಹುದು ಎನ್ನಲಾಗುತ್ತೆ. ಆದರೆ ಮೈಸೂರು ಸಂಸ್ಥಾನದಲ್ಲಿ ಅನುಸರಿಸಲಾದ ಖೆಡ್ಡಾ ವಿಧಾನವೇ ನಂತರ ದೇಶದ ಗಮನ ಸೆಳೆದ ವಿಶಿಷ್ಟ ಪರಂಪರೆಯಾಗಿ ರೂಪುಗೊಂಡಿತು.

ಕರಡಿಹಳ್ಳದಲ್ಲಿ ಯಶಸ್ವಿ ಖೆಡ್ಡಾ ಕಾರ್ಯಾಚರಣೆ
17ನೇ ಶತಮಾನದಲ್ಲಿ ಹೈದರಾಲಿ ನಂತರ ಟಿಪ್ಪು ಸುಲ್ತಾನ್ ಕೂಡ ಆನೆಗಳನ್ನ ಸೆರೆಹಿಡಿಯಲು ಈ ವಿಧಾನವನ್ನ ಪ್ರಯೋಗಿಸಿದ್ದರು. ಆದರೆ ಬ್ರಿಟಿಷರ ಕಾಲದಲ್ಲಿ ಖೆಡ್ಡಾ ವ್ಯವಸ್ಥಿತ ಹಾಗೂ ದೊಡ್ಡ ಪ್ರಮಾಣದ ಕಾರ್ಯಾಚರಣೆಯಾಗಿ ರೂಪುಗೊಂಡಿತು. ಜಿ.ಪಿ ಸ್ಯಾಂಡರ್ಸನ್ ಅವರ ನೇತೃತ್ವದಲ್ಲಿ ಚಾಮರಾಜನಗರದ ಕರಡಿಹಳ್ಳದಲ್ಲಿ 1874ರ ಜೂನ್‌ನಲ್ಲಿ ನಡೆದ ಮೊದಲ ಯಶಸ್ವಿ ಖೆಡ್ಡಾದಲ್ಲಿ ಬರೋಬ್ಬರಿ 55 ಆನೆಗಳನ್ನ ಸೆರೆಹಿಡಿಯಲಾಯಿತು. ಈ ಕಾರ್ಯಾಚರಣೆಯೇ ಮುಂದಿನ ದಿನಗಳಲ್ಲಿ ಮೈಸೂರು ಭಾಗದ ಖೆಡ್ಡಾ ಪರಂಪರೆಗೆ ಪ್ರಮುಖ ಆಧಾರವಾಯಿತು.
1800ಕ್ಕೂ ಹೆಚ್ಚು ಆನೆಗಳ ಸೆರೆ
ಖೆಡ್ಡಾ ಕಾರ್ಯಾಚರಣೆ ಮುಖ್ಯವಾಗಿ ಹೆಗ್ಗಡದೇವನಕೋಟೆಯ ಕಾಕನಕೋಟೆ ಅರಣ್ಯದಲ್ಲಿ ನಡೆಯುತ್ತಿತ್ತು. 1873ರಿಂದ 1972ರವರೆಗೆ ನಡೆದ 33 ಖೆಡ್ಡಾಗಳಲ್ಲಿ ಸುಮಾರು 1800ಕ್ಕೂ ಹೆಚ್ಚು ಆನೆಗಳನ್ನ ಸೆರೆಹಿಡಿಯಲಾಯಿತು. ಈ ಪೈಕಿ 24 ಖೆಡ್ಡಾಗಳು ಕಾಕನಕೋಟೆ ಅರಣ್ಯದಲ್ಲಿಯೇ ನಡೆದಿದ್ದರಿಂದ ಈ ಪ್ರದೇಶ ಖೆಡ್ಡಾ ಪರಂಪರೆಯ ಪ್ರಮುಖ ಕೇಂದ್ರವಾಯಿತು. ಕಬಿನಿ ನದಿಯ ದಡದಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಲಾಗುತ್ತಿದ್ದ ಬೃಹತ್ ಬೋನಿನತ್ತ ಆನೆಗಳನ್ನು ಓಡಿಸುವ ಕಾರ್ಯಾಚರಣೆ ಅತ್ಯಂತ ಸಾಹಸಮಯವಾಗಿತ್ತು. ಆನೆಗಳನ್ನು ಹೆದರಿಸಲು ತುತ್ತೂರಿ, ಕೊಂಬು ಹಾಗೂ ಹೊತ್ತಿದ ದೊಂಡಿಗಳನ್ನು ಬಳಸಲಾಗುತ್ತಿತ್ತು. ಕಾಡಿನೊಳಗೆ ಏಕಕಾಲದಲ್ಲಿ ನಡೆಯುತ್ತಿದ್ದ ಈ ಬೃಹತ್ ಕಾರ್ಯಾಚರಣೆ ನೋಡುಗರಿಗೆ ದೈತ್ಯ ಸಾಹಸದಂತೆ ಕಾಣುತ್ತಿತ್ತು.

ಆನೆಗಳನ್ನ ಪಳಗಿಸುವುದೇ ಸವಾಲು
ಆನೆಗಳು ಸೆರೆ ಸಿಕ್ಕ ನಂತರ ಅವುಗಳನ್ನು ಪಳಗಿಸುವ ಮತ್ತೊಂದು ಕಠಿಣ ಹಂತ ಆರಂಭವಾಗುತ್ತಿತ್ತು. ಪಳಗಿದ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಗಳಿಗೆ ಹಗ್ಗ ಹಾಕಿ ನಿಧಾನವಾಗಿ ಅವುಗಳನ್ನು ಮಾನವ ಸಂಪರ್ಕಕ್ಕೆ ತರಲಾಗುತ್ತಿತ್ತು. ತರಬೇತಿ ಪಡೆದು ಪಳಗಿದ ಬಳಿಕ ಈ ಆನೆಗಳು ಮೈಸೂರು ದಸರಾ ಮೆರವಣಿಗೆಯಲ್ಲಷ್ಟೇ ಅಲ್ಲದೆ, ಹಿಂದಿನ ಕಾಲದಲ್ಲಿ ಯುದ್ಧದಂತಹ ಹಲವು ಅಗತ್ಯಗಳಿಗೂ ಬಳಸಲ್ಪಡುತ್ತಿದ್ದವು. ದ್ರೋಣ, ರಾಜೇಂದ್ರ ಮೊದಲಾದ ಪ್ರಸಿದ್ಧ ದಸರಾ ಆನೆಗಳೂ ಇದೇ ಖೆಡ್ಡಾ ಪರಂಪರೆಯ ಮೂಲಕ ಮೈಸೂರು ಸಂಸ್ಥಾನದೊಂದಿಗೆ ಬೆಸೆದುಕೊಂಡವು.
ಕಾಲ ಬದಲಾಯಿತು. ಪರಿಸರ ಸಂವೇದನೆ ಹೆಚ್ಚಾದಂತೆ ಕಾಡುಪ್ರಾಣಿಗಳನ್ನ ಈ ರೀತಿಯಲ್ಲಿ ಸೆರೆಹಿಡಿಯುವ ಪದ್ಧತಿಯ ಬಗ್ಗೆ ಪ್ರಶ್ನೆಗಳು ಎದ್ದವು. 1974ರಲ್ಲಿ ಖೆಡ್ಡಾ ಪದ್ಧತಿಯನ್ನು ನಿಷೇಧಿಸಲಾಯಿತು. ನಂತರದ ದಿನಗಳಲ್ಲಿ ಆನೆಗಳನ್ನ ಸೆರೆಹಿಡಿಯುವ ಸಂದರ್ಭಗಳಲ್ಲಿ ಅರಿವಳಿಕೆ ಮದ್ದು ಸೇರಿದಂತೆ ಆಧುನಿಕ ವಿಧಾನಗಳನ್ನು ಬಳಸಲಾಗತೊಡಗಿತು. ಇಂದು ಕಾಕನಕೋಟೆಯ ಬಹುಭಾಗ ಕಬಿನಿ ಹಿನ್ನೀರಿನಲ್ಲಿ ಮುಳುಗಿದ್ದರೂ, ಅಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಗಳ ನೆನಪು ಮೈಸೂರು ನಾಡಿನ ಅರಣ್ಯ ಸಂಸ್ಕೃತಿಯ ಅಮೂಲ್ಯ ಅಧ್ಯಾಯವಾಗಿ ಉಳಿದಿದೆ.
ಆನೆಗಳು ದಸರಾ ವೈಭದ ಪ್ರತೀಕ
ಈ ಖೆಡ್ಡಾ ಪರಂಪರೆಯಿಂದ ಬಂದ ಅನೇಕ ಆನೆಗಳು ಮುಂದೆ ಮೈಸೂರು ದಸರೆಯ ಇತಿಹಾಸವನ್ನೇ ಬದಲಿಸಿದವು. ಅವುಗಳಲ್ಲಿ ಕೆಲವು ಕೇವಲ ಮೆರವಣಿಗೆಯ ಆನೆಗಳಾಗಿರಲಿಲ್ಲ. ಅವು ಮೈಸೂರು ದಸರೆಯ ವೈಭವದ ಪ್ರತೀಕಗಳಾಗಿ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದವು. ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ ಆನೆಗಳ ಸಂಖ್ಯೆ ಸರಿಸುಮಾರು ಹನ್ನೆರಡು. ಪ್ರತಿಯೊಂದು ಆನೆಗೂ ತನ್ನದೇ ಆದ ಕಥೆ, ತನ್ನದೇ ಆದ ಸಾಧನೆ ಮತ್ತು ದಸರೆಯೊಂದಿಗೆ ತನ್ನದೇ ಆದ ಭಾವನಾತ್ಮಕ ನಂಟಿದೆ. ಅವುಗಳ ಬಗ್ಗೆ ತಿಳಿಯೋದಾದ್ರೆ ಮುಂದೆ ಓದಿ…

ಜಯಮಾರ್ತಾಂಡ
ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ, ರಾಜ ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಸೆರೆಹಿಡಿಯಲ್ಪಟ್ಟ ಆನೆ. ಚಿನ್ನದ ಅಂಬಾರಿ ಹೊತ್ತ ಮೊದಲ ಆನೆ ಎಂಬ ಹೆಗ್ಗಳಿಕೆಗೆ ಜಯಮಾರ್ತಾಂಡ ಪಾತ್ರನಾಗಿದ್ದಾನೆ. ಸುಮಾರು 45 ವರ್ಷಗಳ ಕಾಲ, ಅಂದರೆ 1870 ರಿಂದ 1915ರ ವರೆಗೆ, ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ ಈ ಆನೆ 3 ಮಹಾರಾಜರಾದ 10ನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರನ್ನ ಹೊತ್ತು ಸಾಗಿದ ಏಕೈಕ ಆನೆ ಎಂಬ ವಿಶೇಷತೆ ಹೊಂದಿದೆ. ಮಹಾರಾಜರಿಗೆ ಜಯಮಾರ್ತಾಂಡ ಅಚ್ಚುಮೆಚ್ಚಿನ ಆನೆಯಾಗಿದ್ದ. ಅದರ ನೆನಪಿಗಾಗಿ ಅರಮನೆಯ ಮುಖ್ಯ ದ್ವಾರಕ್ಕೆ ‘ಜಯಮಾರ್ತಾಂಡ ದ್ವಾರ’ ಎಂದು ಹೆಸರು ಇಡಲಾಗಿದೆ. ಪ್ರತಿ ವರ್ಷ ದಸರಾ ಆನೆಗಳು ಅರಮನೆಗೆ ಈ ದ್ವಾರದ ಮೂಲಕವೇ ಪ್ರವೇಶಿಸುವುದು ಇಂದಿಗೂ ವಿಶೇಷವಾಗಿ ಕಾಣುತ್ತದೆ.
ಜಯಮಾರ್ತಾಂಡನ ನಂತರ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್ ಹಾಗೂ ಮೋತಿಲಾಲ್‌ರಾಜ್ ಮೊದಲಾದ ಆನೆಗಳು ಚಿನ್ನದ ಅಂಬಾರಿ ಹೊತ್ತು ಮೈಸೂರು ದಸರೆಯ ವೈಭವಕ್ಕೆ ಸಾಕ್ಷಿಯಾದವು. ಒಂದರ ನಂತರ ಮತ್ತೊಂದು ಆನೆ ಅರಮನೆಯ ಪರಂಪರೆಯನ್ನ ಮುಂದುವರಿಸುತ್ತಾ ಬಂದವು.
ಐರಾವತ
ಐರಾವತ ಕೂಡ ಜಗತ್ಪ್ರಸಿದ್ಧಗೊಂಡ ದಸರಾ ಆನೆಗಳಲ್ಲಿ ಒಂದು. ಮೈಸೂರು ದಸರೆಯ ಮೆರವಣಿಗೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಈ ಆನೆಯನ್ನು ‘ದಿ ಎಲಿಫಂಟ್ ಬಾಯ್’ ಎಂಬ ಹಾಲಿವುಡ್ ಚಿತ್ರದಲ್ಲಿಯೂ ಬಳಸಿಕೊಳ್ಳಲಾಯಿತು. ಈ ಚಿತ್ರ ವಿಶ್ವದಾದ್ಯಂತ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳಿಗೆ ಪಾತ್ರವಾಯಿತು. ವಿಶೇಷವೆಂದರೆ ಐರಾವತನ ಮಾವುತನೂ ಆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ. ಹೀಗಾಗಿ ದಸರೆಯ ಆನೆಯೊಂದು ಮೈಸೂರು ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡ ಅಪರೂಪದ ಉದಾಹರಣೆಯಾಗಿ ಐರಾವತ ನೆನಪಾಗುತ್ತಾನೆ.

ಬಿಳಿಗಿರಿ
ಇಲ್ಲಿಯವರೆಗೆ ಅಂಬಾರಿ ಹೊತ್ತ ಆನೆಗಳಲ್ಲಿ ಬಿಳಿಗಿರಿಯೇ ದೈತ್ಯಾಕಾರದ ಆನೆಗಳಲ್ಲಿ ಒಂದಾಗಿದ್ದ. ಸುಮಾರು 7,000 ಕೆ.ಜಿ. ತೂಕ ಹೊಂದಿದ್ದ ಈ ಆನೆ ಬರೋಬ್ಬರಿ 10.5 ಅಡಿ ಎತ್ತರವಿತ್ತು. ತನ್ನ ಭವ್ಯವಾದ ಗಾತ್ರ ಮತ್ತು ಗಜಗಾಂಭೀರ್ಯದಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಬಿಳಿಗಿರಿ, ಮಹಾರಾಜರನ್ನು ಹೊತ್ತು ಸಾಗಿದ ಕೊನೆಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಮೈಸೂರು ಅರಮನೆಯ ರಾಜವೈಭವ ಮತ್ತು ಜಂಬೂಸವಾರಿಯ ನಡುವಿನ ಒಂದು ಮಹತ್ವದ ಕೊಂಡಿಯಾಗಿ ಬಿಳಿಗಿರಿಯ ಹೆಸರು ದಸರೆಯ ಇತಿಹಾಸದಲ್ಲಿ ದಾಖಲಾಗಿದೆ.
ರಾಜೇಂದ್ರ
ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದ ನಂತರ, 1977 ರಿಂದ ಚಿನ್ನದ ಅಂಬಾರಿಯಲ್ಲಿ ಮಹಾರಾಜರನ್ನ ಕೂರಿಸುವ ಬದಲು ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸುವ ಪರಂಪರೆ ಆರಂಭವಾಯಿತು. ಚಾಮುಂಡೇಶ್ವರಿ ವಿಗ್ರಹವನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿದ ಮೊದಲ ಆನೆ ರಾಜೇಂದ್ರ. ಹೀಗಾಗಿ ಮೈಸೂರು ದಸರೆಯ ಇತಿಹಾಸದಲ್ಲಿ ರಾಜೇಂದ್ರನಿಗೆ ವಿಶಿಷ್ಠ ಸ್ಥಾನವಿದೆ.
ರಾಜೇಂದ್ರನ ಮತ್ತೊಂದು ವಿಶೇಷತೆಯೆಂದರೆ, ಆತ ಚಿತ್ರರಂಗದಲ್ಲೂ ಕಾಣಿಸಿಕೊಂಡಿದ್ದ. ಡಾ. ರಾಜ್‌ಕುಮಾರ್ ಅಭಿನಯದ ‘ಗಂಧದ ಗುಡಿ’ ಚಲನಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಪ್ರಸಿದ್ಧ ಹಾಡಿನಲ್ಲಿ ಕಾಣಿಸಿಕೊಳ್ಳುವ ಆನೆಯೂ ರಾಜೇಂದ್ರನೇ. ಚಿತ್ರದ ಕೊನೆಯವರೆಗೂ ಭಾಗವಹಿಸುವ ಮೂಲಕ ದಸರೆಯ ಅಂಬಾರಿ ಆನೆಯೊಂದು ಕನ್ನಡ ಚಿತ್ರರಂಗದಲ್ಲಿಯೂ ತನ್ನದೇ ಆದ ಗುರುತು ಮೂಡಿಸಿತು.

ದ್ರೋಣ
1971ರಲ್ಲಿ ಕಾಕನಕೋಟೆಯ ಅರಣ್ಯದಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ದ್ರೋಣನನ್ನ ಸೆರೆಹಿಡಿಯಲಾಯಿತು. ನಂತರ ಮೈಸೂರು ದಸರೆಯ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಆನೆಯಾಗಿ ಬೆಳೆದ ದ್ರೋಣ ಸತತ 18 ಬಾರಿ, 1980 ರಿಂದ 1998 ರ ವರೆಗೆ, ಚಿನ್ನದ ಅಂಬಾರಿ ಹೊತ್ತಿದ್ದಾನೆ. ಸುಮಾರು 10.2 ಅಡಿ ಎತ್ತರ ಮತ್ತು 6,400 ಕೆ.ಜಿ. ತೂಕ ಹೊಂದಿದ್ದ ದ್ರೋಣನ ಗಜಗಾಂಭೀರ್ಯ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿತ್ತು. ದ್ರೋಣನ ಖ್ಯಾತಿ ಮೈಸೂರು ದಸರೆಯ ಗಡಿಯನ್ನು ದಾಟಿ ಹಿಂದಿ ಕಿರುತೆರೆಯ ‘ದಿ ಸೋರ್ಡ್ ಆಫ್ ಟಿಪ್ಪುಸುಲ್ತಾನ್’ ಧಾರಾವಾಹಿಗೂ ತಲುಪಿತು. ಆದರೆ 1998ರಲ್ಲಿ ಮೇವಿಗಾಗಿ ಕಾಡಿಗೆ ಬಿಟ್ಟ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಈ ದೈತ್ಯಾಕಾರದ ಆನೆಯನ್ನು ಕಳೆದುಕೊಳ್ಳಲಾಯಿತು. ದ್ರೋಣನ ಅಗಲಿಕೆ ದಸರೆಯ ಅಭಿಮಾನಿಗಳಿಗೆ ಮರೆಯಲಾಗದ ನೋವಿನ ಅಧ್ಯಾಯವಾಯಿತು.
ಬಲರಾಮ
ದ್ರೋಣನ ನಂತರ ದಸರೆಯ ಜವಾಬ್ದಾರಿ ಹೊತ್ತ ಪ್ರಮುಖ ಆನೆಗಳಲ್ಲಿ ಬಲರಾಮನದು ವಿಶೇಷ ಸ್ಥಾನ. ಹೆಸರಿಗೆ ತಕ್ಕಂತೆ ಬಲಶಾಲಿಯಾಗಿದ್ದ ಬಲರಾಮ ಶಾಂತ ಸ್ವಭಾವದವನಾಗಿದ್ದ. ರಾಮನಂತೆ ಸಾತ್ವಿಕ ಗುಣ ಹೊಂದಿದ್ದ ಈ ಆನೆಯನ್ನು 1987ರಲ್ಲಿ ಕೊಡಗಿನ ಕಟ್ಟೆಪುರ ಅರಣ್ಯ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಯಿತು. 1994 ರಿಂದ ದಸರೆಯಲ್ಲಿ ಭಾಗವಹಿಸಿದ ಬಲರಾಮ, 2000 ರಿಂದ 2011 ರ ವರೆಗೆ ಸತತ 11 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಸಾಗಿದ. ತನ್ನ ಶಾಂತ ಸ್ವಭಾವ, ಶಿಸ್ತು ಮತ್ತು ಭವ್ಯ ನಡಿಗೆಯಿಂದ ಬಲರಾಮ ಮೈಸೂರು ದಸರೆಯ ಜನಪ್ರಿಯ ಆನೆಗಳ ಸಾಲಿನಲ್ಲಿ ಅಚ್ಚಳಿಯದ ಸ್ಥಾನ ಪಡೆದನು.
ಅರ್ಜುನ
ದ್ರೋಣನ ನಂತರ 1999 ರಲ್ಲಿ 1 ಬಾರಿ ಅರ್ಜುನನಿಗೆ ಚಿನ್ನದ ಅಂಬಾರಿ ಹೊರುವ ಅವಕಾಶ ನೀಡಲಾಯಿತು. ಆದರೆ ಮಾವುತನ ಸಾವಿಗೆ ಸಂಬಂಧಿಸಿದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ ಅರ್ಜುನನನ್ನ ದಸರೆಯಲ್ಲಿ ಭಾಗವಹಿಸುವುದರಿಂದ 2001 ರಿಂದ 2011ರ ವರೆಗೆ ದೂರವಿಡಲಾಗಿತ್ತು. ಕಾಲಕ್ರಮೇಣ ಬಲರಾಮನಿಗೆ ವಯಸ್ಸಾದ ಕಾರಣ ಮತ್ತೆ ಅರ್ಜುನನತ್ತ ಜವಾಬ್ದಾರಿ ಬಂತು. 2012 ರಿಂದ ಚಿನ್ನದ ಅಂಬಾರಿ ಹೊರುವ ಪ್ರಮುಖ ಆನೆಯಾಗಿ ಅರ್ಜುನ ಮುನ್ನಡೆಸಿದ ಜಂಬೂಸವಾರಿ ಮೈಸೂರು ದಸರೆಯ ವೈಭವವನ್ನು ಮುಂದುವರಿಸಿತು. ಆದ್ರೆ ದುರದೃಷ್ಟವಶಾತ್ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಅಕಾಲಿಕ ಮರಣಕ್ಕೆ ತುತ್ತಾಯಿತು.

ಅಭಿಮನ್ಯು
ಅರ್ಜುನನ ನಂತರ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ ಪ್ರಸಿದ್ಧ ಅಭಿಮನ್ಯು ಆನೆಯನ್ನ ಕೊಡಗು ಜಿಲ್ಲೆಯ ಹೆಬ್ಬಾಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಸತತ 6 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು ಈ ಬಾರಿ ಜಂಬೂ ಸವಾರಿ ಹೊರುವ ಕರ್ತವ್ಯದಿಂದ ನಿವೃತ್ತಿ ಪಡೆದುಕೊಂಡಿದ್ದಾನೆ. 60 ವರ್ಷ ಪೂರೈಸಿರುವ ‘ಅಭಿಮನ್ಯು’ ಆನೆಗೆ 2026ರ ಮೈಸೂರು ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರಲು ಅರಣ್ಯ ಇಲಾಖೆ ವಿಶೇಷ ಅನುಮತಿ ನೀಡಿದೆ. ಆನೆಯ ಆರೋಗ್ಯ ತೃಪ್ತಿಕರವಾಗಿದ್ದರೂ, ದಸರಾ ಬಳಿಕ ಯಾವುದೇ ಕಠಿಣ ಕೆಲಸ ನೀಡದೇ ಮರಳಿ ಮತ್ತಿಗೋಡು ಶಿಬಿರಕ್ಕೆ ಕಳುಹಿಸಿ, ಅಗತ್ಯ ವೈದ್ಯಕೀಯ ಆರೈಕೆ ಮಾಡಲು ಆದೇಶಿಸಲಾಗಿದೆ.
ಹೀಗೆ ಕಾಡಿನ ಕತ್ತಲಲ್ಲಿ ಆರಂಭವಾದ ಒಂದು ಆನೆಯ ಪಯಣ ಅರಮನೆಯ ಬೆಳಕಿನಲ್ಲಿ ಅಂತ್ಯವಾಗುವುದಿಲ್ಲ. ಅದು ಜನರ ನೆನಪುಗಳಲ್ಲಿ ಮುಂದುವರಿಯುತ್ತದೆ. ಖೆಡ್ಡಾದ ಕಠಿಣ ದಿನಗಳಿಂದ ಆರಂಭವಾದ ಈ ಗಜಗಾಥೆ, ಅರಮನೆಯ ಅಂಬಾರಿವರೆಗೆ ಬಂದು ಮೈಸೂರು ದಸರೆಯ ಇತಿಹಾಸದ ಅವಿಭಾಜ್ಯ ಭಾಗವಾಗಿದೆ. ಜಯಮಾರ್ತಾಂಡನಿಂದ ದ್ರೋಣನವರೆಗೆ, ದ್ರೋಣನಿಂದ ಬಲರಾಮನವರೆಗೆ, ಬಲರಾಮನಿಂದ ಅರ್ಜುನನವರೆಗೆ, ಅರ್ಜುನನಿಂದ ಅಭಿಮನ್ಯುವರೆಗೆ….. ಪ್ರತಿ ಆನೆಯೂ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿದೆ.
ಜಂಬೂಸವಾರಿಯ ರಸ್ತೆಯಲ್ಲಿ ಸಾವಿರಾರು ಜನರ ನಡುವೆ ಚಿನ್ನದ ಅಂಬಾರಿ ಸಾಗುವಾಗ ಕಾಣುವುದು ಒಂದು ಆನೆ ಮಾತ್ರವಲ್ಲ. ಅದರ ಹಿಂದೆ ಕಾಡು, ಖೆಡ್ಡಾ, ಅರಮನೆ, ಮಾವುತರು, ತರಬೇತಿ, ರಾಜವೈಭವ, ದಸರೆಯ ಸಂಪ್ರದಾಯ ಮತ್ತು ತಲೆಮಾರುಗಳ ನೆನಪುಗಳಿವೆ. ಅದಕ್ಕಾಗಿಯೇ ಮೈಸೂರು ದಸರೆಯ ಆನೆಗಳು ಕೇವಲ ಮೆರವಣಿಗೆಯ ಭಾಗವಲ್ಲ, ಅವು ʻಮೈಸೂರು ನಾಡಿನ ಇತಿಹಾಸವನ್ನು ತಮ್ಮ ಹೆಜ್ಜೆಗಳಲ್ಲಿ ಹೊತ್ತು ಸಾಗಿದ ಜೀವಂತ ಗಜಗಾಥೆಗಳುʼ.
