– 31 ಕೋಟಿ ರೂ. ವೆಚ್ಚದಲ್ಲಿ ಆಂಬುಲೆನ್ಸ್‌ಗಳ ಖರೀದಿಗೆ ಆದೇಶ
ಬೆಂಗಳೂರು: ರಾಜ್ಯದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಘಾತ ಆರೈಕೆ ಸೇವೆಗಳನ್ನ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವೈದ್ಯಕೀಯ ಉಪಕರಣಗಳು ಹಾಗೂ ಸಾಧನಗಳ ಖರೀದಿಗೆ ರಾಜ್ಯ ಸರ್ಕಾರ (Karnataka Govt) ಆದೇಶ ಹೊರಡಿಸಿದೆ.
‘108 ಆರೋಗ್ಯ ಕವಚ’ ಯೋಜನೆಯಡಿ ಹಳೆಯ ಆಂಬುಲೆನ್ಸ್‌ಗಳ (Ambulances) ಬದಲಿಗೆ 100 ಹೊಸ ಆಂಬುಲೆನ್ಸ್‌ಗಳನ್ನ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಹೊಸ ಆಂಬುಲೆನ್ಸ್‌ಗಳ ಖರೀದಿಗೆ ಒಟ್ಟು 31 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ ಖರೀದಿಗೂ ಆದೇಶ
ಇದರೊಂದಿಗೆ ರಾಜ್ಯದ ಜನರಲ್ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ ಬಲಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಮೈಸೂರು, ದಾವಣಗೆರೆ ಹಾಗೂ ಬೆಂಗಳೂರಿನ ಸರ್.ಸಿ.ವಿ ರಾಮನ್ ನಗರ ಆಸ್ಪತ್ರೆಗಳಿಗೆ ತಲಾ 6 ಕೋಟಿ ರೂ. ವೆಚ್ಚದಲ್ಲಿ 64-ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರಗಳನ್ನ ಖರೀದಿಸಲು ಆದೇಶ ನೀಡಲಾಗಿದೆ. ಅದೇ ರೀತಿ, ಹಾಸನ ಜಿಲ್ಲಾ ಆಸ್ಪತ್ರೆಗೆ 2.50 ಕೋಟಿ ರೂ. ವೆಚ್ಚದಲ್ಲಿ 32-ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ ಖರೀದಿಸಲು ಸರ್ಕಾರ ಅನುಮತಿ ನೀಡಿದೆ.

ಕರ್ನಾಟಕ ರಾಜ್ಯ ರಕ್ತ ಸುರಕ್ಷತಾ ಪ್ರಾಧಿಕಾರಕ್ಕೆ ಮೆದುಳಿನ ಗಾಯ ಪತ್ತೆಹಚ್ಚಲು ಬಳಸುವ ವಿಶೇಷ ಸಾಧನಗಳ ಖರೀದಿಗೂ ಸರ್ಕಾರ ಮುಂದಾಗಿದೆ. ಐಎಂಆರ್ ಮತ್ತು ಬಯೋಪ್ಸಾನ್ ರಿಸರ್ಚ್ ಅಭಿವೃದ್ಧಿಪಡಿಸಿರುವ ಈ ಸಾಧನಗಳನ್ನ ಪ್ರತಿ ಘಟಕಕ್ಕೆ 19 ಲಕ್ಷ ರೂ.ನಂತೆ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ.
ವಿಜಯಪುರ ಜಿಲ್ಲಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ಹಾಗೂ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳನ್ನ ಖರೀದಿಸಲು ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಮೂಲಕ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಹಾಗೂ ಆಘಾತ ಆರೈಕೆ ಸೇವೆಗಳನ್ನು ಬಲಪಡಿಸುವ ಜೊತೆಗೆ, ಅಗತ್ಯ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರ ಮುಂದಾಗಿದೆ.
