ನವದೆಹಲಿ/ಇಸ್ಲಾಮಾಬಾದ್: 2027ರ ದಕ್ಷಿಣ ಏಷ್ಯಾ ಫೆಡರೇಷನ್ (SAF) ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಈ ಕ್ರೀಡಾಕೂಟಕ್ಕೆ ಭಾರತ ಒಪ್ಪಿಗೆ ನೀಡಿದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Terror Attack) ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಕ್ರೀಡಾಪಟುಗಳು ಪಾಕಿಸ್ತಾನಕ್ಕೆ ತೆರಳಿದಂತಾಗಲಿದೆ.
2025ರ ಏಪ್ರಿಲ್ 22 ರಂದು ಕಾಶ್ಮೀರದ ಬೈಸರನ್ ಕಣಿವೆ ಪ್ರದೇಶದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ನಾಗರಿಕರು ಹತ್ಯೆಗೀಡಾಗಿದ್ದರು. ಈ ದಾಳಿಯ ಬಳಿಕ ಭಾರತ-ಪಾಕಿಸ್ತಾನ (India – Pakistan) ನಡುವಿನ ಎಲ್ಲಾ ರಾಜತಾಂತ್ರಿಕ ಹಾಗೂ ಕ್ರೀಡಾ ಸಂಬಂಧಗಳು ಸ್ರಬ್ಧಗೊಂಡಿವೆ.

ಪಾಕಿಸ್ತಾನಿ ಮಾಧ್ಯಮಗಳ ವರದಿ ಪ್ರಕಾರ, ದಕ್ಷಿಣ ಏಷ್ಯಾ ಒಲಿಂಪಿಕ್ಸ್ ಅಸೋಸಿಯೇಷನ್‌ನ ಉನ್ನತ ಮಟ್ಟದ ಸಭೆಯಲ್ಲಿ ಭಾರತ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ 2027ರ SAF ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಪಾಕಿಸ್ತಾನ ನೀಡಿದ ಆಹ್ವಾನವನ್ನ ಭಾರತ ತಾತ್ವಿಕವಾಗಿ ಒಪ್ಪಿಕೊಂಡಿದೆ ಎನ್ನಲಾಗಿದೆ.
2027ರ SAF ಕ್ರೀಡಾಕೂಟವು ಏಪ್ರಿಲ್ 4 ರಿಂದ 11ರ ವರೆಗೆ ನಡೆಯುವ ಸಾಧ್ಯತೆಗಳಿವೆ. ಭಾರತದಿಂದ ಎಷ್ಟು ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂಬ ವಿವರಗಳನ್ನ 2027ರ ಜನವರಿಯಲ್ಲಿ ತಿಳಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.
22 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಬಹುಕ್ರೀಡಾಕೂಟ
ಪಾಕಿಸ್ತಾನ ಕೊನೆಯ ಬಾರಿ 2004ರಲ್ಲಿ ಇಸ್ಲಾಮಾಬಾದ್‌ನಲ್ಲಿ SAF ಕ್ರೀಡಾಕೂಟ ಆಯೋಜಿಸಿತ್ತು. ಇದೀಗ 22 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಮತ್ತೆ ಬಹುಕ್ರೀಡಾ ಅಂತಾರಾಷ್ಟ್ರೀಯ ಕೂಟ ನಡೆಯಲಿದೆ. 2027ರ ಆವೃತ್ತಿಯಲ್ಲಿ ಒಟ್ಟು 28 ಕ್ರೀಡೆಗಳು ನಡೆಯುವ ನಿರೀಕ್ಷೆಯಿದ್ದು, ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರ್ ನಗರಗಳು ಆತಿಥ್ಯ ವಹಿಸಲಿವೆ.
ಇಸ್ಲಾಮಾಬಾದ್‌ನಲ್ಲಿ ಸ್ಕ್ವಾಷ್, ಟೆನಿಸ್ ಮತ್ತು ಮಾರ್ಷಲ್ ಆರ್ಟ್ಸ್ ಸೇರಿದಂತೆ 15 ಕ್ರೀಡೆಗಳು ನಡೆಯಲಿವೆ. ಲಾಹೋರ್‌ನಲ್ಲಿ ಕ್ರಿಕೆಟ್, ಹಾಕಿ, ಈಜು ಸೇರಿದಂತೆ 10 ಕ್ರೀಡಾ ವಿಭಾಗಗಳು ನಡೆಯಲಿವೆ. ಪೇಶಾವರ್‌ಗೆ ಮೂರು ಕ್ರೀಡೆಗಳ ಆತಿಥ್ಯ ನೀಡಲಾಗಿದೆ.

ಪಾಕಿಸ್ತಾನದಲ್ಲಿ ಸಿದ್ಧತೆ ಚುರುಕು
ಭಾರತ ಭಾಗವಹಿಸುವ ಸಾಧ್ಯತೆಯ ವರದಿ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನದಲ್ಲಿ SAF ಕ್ರೀಡಾಕೂಟದ ಸಿದ್ಧತೆಗಳು ಮತ್ತಷ್ಟು ವೇಗ ಪಡೆದುಕೊಂಡಿವೆ. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್, ಸಿದ್ಧತೆಗಳನ್ನು ಪರಿಶೀಲಿಸಿ, ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನ ಕಲ್ಪಿಸುವಂತೆ ಕೇಂದ್ರ ಹಾಗೂ ಪ್ರಾಂತೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿದೇಶಿ ಕ್ರೀಡಾಪಟುಗಳು, ಅಧಿಕಾರಿಗಳು, ಪ್ರೇಕ್ಷಕರು ಹಾಗೂ ಅಂತಾರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ಪಾಕಿಸ್ತಾನದಲ್ಲಿ ಇರುವ ಸಂಪೂರ್ಣ ಅವಧಿಯಲ್ಲಿ ಸಮಗ್ರ ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದ್ರೆ ಭಾರತ ಕೇಂದ್ರ ಸರ್ಕಾರವಾಗಲಿ, ವಿದೇಶಾಂಗ ಸಚಿವಾಲಯವಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
