ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ರಿಫಿಲ್ ಬುಕ್ಕಿಂಗ್ ನಡುವಿನ ಅವಧಿಯನ್ನ 45 ದಿನಗಳಿಂದ 25 ದಿನಗಳಿಗೆ ಇಳಿಸಲಾಗಿದೆ ಎಂದು ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಸುರೇಶ್ ಗೋಪಿ (Suresh Gopi) ಸೋಮವಾರ ಘೋಷಿಸಿದ್ದಾರೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ ಗ್ರಾಹಕರಿಗೂ 25 ದಿನಗಳಿಗೊಮ್ಮೆ ಎಲ್‌ಪಿಜಿ ರಿಫಿಲ್ ಬುಕ್ ಮಾಡುವ ಅವಕಾಶವನ್ನ ತಕ್ಷಣದಿಂದಲೇ ಜಾರಿಗೆ ತರಲು ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ಎಲ್‌ಪಿಜಿ ಪೂರೈಕೆಯ ಮೇಲೆ ಉಂಟಾಗಿದ್ದ ಒತ್ತಡದಿಂದಾಗಿ ರಿಫಿಲ್ ಬುಕ್ಕಿಂಗ್ ಅವಧಿಯನ್ನ ಪರಿಷ್ಕರಿಸಲಾಗಿತ್ತು. ಆದರೆ, ಪ್ರಸ್ತುತ ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸುಧಾರಿಸಿದ್ದು, ರಿಫಿಲ್ ಬಾಕಿ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ನಿರ್ಬಂಧವನ್ನು ಸಡಿಲಿಕೆ ಮಾಡಿದೆ. ಇದೀಗ ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಎಲ್ಲಾ ಗೃಹಬಳಕೆ ಎಲ್‌ಪಿಜಿ ಗ್ರಾಹಕರು 25 ದಿನಗಳ ಅಂತರದಲ್ಲಿ ರಿಫಿಲ್ ಬುಕ್ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಈ ಬದಲಾವಣೆಯನ್ನು ತಕ್ಷಣದಿಂದಲೇ ಜಾರಿಗೆ ತರಲು ಪೆಟ್ರೋಲಿಯಂ ಸಚಿವಾಲಯವು OMCಗಳಿಗೆ ಕಳುಹಿಸಿರುವ ಪತ್ರದ ಪ್ರತಿಯನ್ನೂ ಸಚಿವರು ಹಂಚಿಕೊಂಡಿದ್ದಾರೆ.
