ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಕೀಯ ಹುದ್ದೆಗಳ ನೇಮಕಾತಿ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಕೆಎಎಸ್ (KAS) ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕೆಎಎಸ್ ಅಭ್ಯರ್ಥಿ ಮಮಿತಾ(Mamitha) ಅವರ ಕಲಬುರಗಿಯ (Kalaburagi) ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
2023-24ರ ಕೆಎಎಸ್ ಪರೀಕ್ಷೆ ಬರೆದು, ಸಂದರ್ಶನ ಮುಗಿಸಿ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಮಮಿತಾ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ(Shantha Hosamani) ಅವರ ಮೂಲಕ ಅಕ್ರಮವಾಗಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಶಾಂತಾ ಹೊಸಮನಿ ಹಾಗೂ ಮಮಿತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಆಧಾರದ ಮೇಲೆ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಕಲಬುರಗಿ ನಗರದ ನ್ಯೂ ಓಝಾ ಲೇಔಟ್‌ನಲ್ಲಿರುವ ಮಮಿತಾ ಅವರ ನಿವಾಸದ ಮೇಲೆ ದಿಢೀರ್ ದಾಳಿ ನಡೆಸಿದೆ.
ದಾಳಿಯ ವೇಳೆ ಕೆಎಎಸ್ ಅಕ್ರಮಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳು ಹಾಗೂ ಲ್ಯಾಪ್‌ಟಾಪ್ ಅನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿರುವ ಡಿಜಿಟಲ್ ಡೇಟಾವನ್ನು ರಿಟ್ರೀವ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಸಾವು
ಇದೇ ಪ್ರಕರಣ ಹಾಗೂ ಅಕ್ರಮ ಹಣ ವರ್ಗಾವಣೆ ಶಂಕೆಯ ಹಿನ್ನೆಲೆಯಲ್ಲಿ ಆಗಸ್ಟ್ 18ರಂದು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಕೂಡ ಇದೇ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಇದೀಗ ಸಿಐಡಿ ಅಧಿಕಾರಿಗಳು ಕೂಡ ತನಿಖೆಯನ್ನು ತೀವ್ರಗೊಳಿಸಿದ್ದು, ಕೆಪಿಎಸ್‌ಸಿ ಅಕ್ರಮದ ಜಾಲ ಮತ್ತಷ್ಟು ಬಯಲಾಗುವ ಸಾಧ್ಯತೆಯಿದೆ.


