ನವದೆಹಲಿ: ಬ್ರಿಕ್ಸ್‌ನಿಂದ ಭಾರತಕ್ಕೆ(India) ಲಾಭವಿಲ್ಲ ಎಂದ ಚಿದಂಬರಂಗೆ(Chidambaram) ಸಂಸದ ಶಶಿ ತರೂರ್(Shashi Tharoor) ತಿರುಗೇಟು ನೀಡಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಭಾರತಕ್ಕೆ ಅತ್ಯಂತ ಗೌರವದ ವಿಷಯ ಎಂದು ಬಣ್ಣಿಸಿದ್ದಾರೆ.
ಭಾರತವು ಬ್ರಿಕ್ಸ್(BRICS Meeting) ಶೃಂಗಸಭೆಯ ಆತಿಥ್ಯ ವಹಿಸಿರುವುದು ದೇಶದ ರಾಜತಾಂತ್ರಿಕ ಒಕ್ಕೂಟ ಶಕ್ತಿ ಹಾಗೂ ಹಿರಿಮೆಗೆ ಸಾಕ್ಷಿಯಾಗಿದೆ ಎಂದು ತರೂರ್ ಹೇಳಿದ್ದಾರೆ.
ಬ್ರಿಕ್ಸ್ ಒಕ್ಕೂಟವು ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣದ ರಾಷ್ಟ್ರಗಳು) ಪಾಲಿಗೆ ಅತ್ಯಂತ ಪ್ರಮುಖವಾದ ವೇದಿಕೆಯಾಗಿದೆ. ಬ್ರಿಕ್ಸ್‌ನ 11 ಸದಸ್ಯ ರಾಷ್ಟ್ರಗಳು ವಿಶ್ವದ ಬಹುಪಾಲು ಜನಸಂಖ್ಯೆ ಮತ್ತು ಶೇ.41 ರಷ್ಟು ಜಿಡಿಪಿಯನ್ನು (GDP) ಪ್ರತಿನಿಧಿಸುತ್ತವೆ. ಹಾಗಾಗಿ ಇದನ್ನು ಇಡೀ ಜಗತ್ತು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ರಷ್ಯಾ-ಉಕ್ರೇನ್ ಹಾಗೂ ಇರಾನ್ ಸಂಘರ್ಷದಂತಹ ವಿಷಯಗಳಲ್ಲಿ ಒಮ್ಮತ ಮೂಡದಿರುವುದು ಮತ್ತು ಭಾರತಕ್ಕೆ ಎದುರಾಗಿರುವ ವ್ಯಾಪಾರ ಕೊರತೆಯ ಸವಾಲುಗಳನ್ನೂ ತರೂರ್ ಬೊಟ್ಟು ಮಾಡಿದ್ದಾರೆ.
ಬ್ರಿಕ್ಸ್ ಶೃಂಗಸಭೆಗಳಿಂದ ಭಾರತಕ್ಕೆ ದೊರೆತಿರುವ ಸ್ಪಷ್ಟ ಮತ್ತು ಪ್ರಾಯೋಗಿಕ ಪ್ರಯೋಜನಗಳೇನು ಎಂದು ಚಿದಂಬರಂ ಪ್ರಶ್ನಿಸಿದ್ದರು. ಅಂತರರಾಷ್ಟ್ರೀಯ ಒಕ್ಕೂಟಗಳಲ್ಲಿ ಭಾಗವಹಿಸುವುದರಿಂದ ಭಾರತಕ್ಕೆ ಸಿಗುತ್ತಿರುವ ನಿಜವಾದ ಆರ್ಥಿಕ ಅಥವಾ ರಕ್ಷಣಾತ್ಮಕ ಲಾಭಗಳ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: BRICS Summit | ಭಾರತಕ್ಕೆ ಪುಟಿನ್ – ಜಿನ್‌ಪಿಂಗ್; ಚಲಿಸುವ ಭದ್ರಕೋಟೆಯಂತಿರುವ ಕಾರಿನಲ್ಲಿ ಪ್ರಯಾಣ
ಭಾರತವು ಕೇವಲ ಬ್ರಿಕ್ಸ್ ಮಾತ್ರವಲ್ಲದೆ, ಎಸ್‌ಸಿಒ (SCO), ಜಿ20 (G20) ಮತ್ತು ಕ್ವಾಡ್ (QUAD) ನಂತಹ ಹತ್ತಾರು ಅಂತರರಾಷ್ಟ್ರೀಯ ಒಕ್ಕೂಟಗಳ ಭಾಗವಾಗಿದೆ. ಆದರೆ ಈ ಎಲ್ಲಾ ವೇದಿಕೆಗಳಲ್ಲಿ ಭಾಗವಹಿಸುವುದರಿಂದ ದೇಶಕ್ಕೆ ಸಿಗುತ್ತಿರುವ ನಿಜವಾದ ಆರ್ಥಿಕ ಅಥವಾ ರಕ್ಷಣಾತ್ಮಕ ಲಾಭಗಳೇನು ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇರಾನ್ ಯುದ್ಧ| ಕಾಂಗ್ರೆಸ್‌ನಲ್ಲಿ ಬಿರುಕು – ತರೂರ್ ಬಳಿಕ ಕೇಂದ್ರದ ನಡೆಯನ್ನು ಬೆಂಬಲಿಸಿದ ಮನೀಶ್ ತಿವಾರಿ
ಬ್ರಿಕ್ಸ್ (BRICS) ಶೃಂಗಸಭೆಯ ಕುರಿತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಪಿ. ಚಿದಂಬರಂ ಮತ್ತು ಶಶಿ ತರೂರ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ರಾಜತಾಂತ್ರಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳಲ್ಲಿ ಶಶಿ ತರೂರ್ ಅವರು ಪಕ್ಷದ ಅಧಿಕೃತ ನಿಲುವುಗಳ ಗಡಿ ಮೀರಿ ಸ್ವತಂತ್ರ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಅಂತರರಾಷ್ಟ್ರೀಯ ವಿಚಾರ ಬಂದಾಗ ಕೇಂದ್ರ ಸರ್ಕಾರ ನಿಲುವುಗಳನ್ನು ಬೆಂಬಲಿಸಿ ಮಾತನಾಡಿದ್ದರು.

