ನವದೆಹಲಿ: ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ಮಸೂದೆ (New Anti Paper Leak Bill) ಅಂಗೀಕಾರವಾಗಿದೆ. ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕಾರ ಮಾಡಲಾಗಿದೆ.
ವಿಪಕ್ಷಗಳ ಗದ್ದಲ ಕೋಲಾಹಲದ ನಡುವೆಯೇ ಮಸೂದೆ ಅಂಗೀಕರಿಸಲಾಯಿತು. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮಸೂದೆಯ ಅಂಗೀಕಾರದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮಸೂದೆಯು ರಾಜ್ಯಸಭೆಯಲ್ಲಿ ಚರ್ಚೆಗೆ ಬಂದು ಅಲ್ಲಿ ಅಂಗೀಕೃತವಾದ ನಂತರ ರಾಷ್ಟ್ರಪತಿಗಳ ಅಂಕಿತ ಪಡೆದು ಕಾನೂನಿನ ರೂಪ ಪಡೆಯಲಿದೆ.
ಮಸೂದೆಯಲ್ಲಿ ಏನಿದೆ?
ಹೊಸ ಕಾನೂನಿನ ಅನ್ವಯ ಪ್ರಶ್ನೆಪತ್ರಿಕೆ ಸೋರಿಕೆ ಜಾಲದಲ್ಲಿ ಭಾಗಿಯಾಗುವವರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಯನ್ನೂ ಪ್ರಸ್ತಾಪಿಸಲಾಗಿದೆ. ತಪ್ಪಿತಸ್ಥರೆಂದು ಸಾಬೀತಾದವರಿಗೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಜೊತೆಗೆ 10 ಕೋಟಿ ರೂ. ವರೆಗೆ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದು ಸಂಘಟಿತ ಪರೀಕ್ಷಾ ಅಕ್ರಮಗಳ ವಿರುದ್ಧದ ಅತ್ಯಂತ ಕಠಿಣ ಕಾನೂನುಗಳಲ್ಲಿ ಒಂದಾಗಲಿದೆ ಎನ್ನಲಾಗುತ್ತಿದೆ.
ಲೋಕಸಭೆ ಜು.30ರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ.

