ಬಾಗಲಕೋಟೆ: ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಸೇತುವೆಯ ಮೇಲಿಂದ ನೇರವಾಗಿ ಕೃಷ್ಣಾ ನದಿಗೆ (Krishna River) ಬಿದ್ದ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಬೀಳಗಿ ಸಮೀಪದ ಕೊಲ್ಹಾರ ಸೇತುವೆ ಬಳಿ ನಡೆದಿದೆ.
ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಟಿಪ್ಪರ್ ತಕ್ಷಣವೇ ಮುಳುಗಲು ಆರಂಭಿಸಿದೆ. ಈ ವೇಳೆ ತಕ್ಷಣವೇ ಎಚ್ಚೆತ್ತ ಚಾಲಕ, ಲಾರಿಯ ಕ್ಯಾಬಿನ್‌ನಿಂದ ಹೊರಬಂದು ಮುಳುಗುತ್ತಿದ್ದ ಟಿಪ್ಪರ್‌ನ ಮೇಲ್ಭಾಗಕ್ಕೆ (ಟಾಪ್) ಏರಿ ಕುಳಿತಿದ್ದಾನೆ. ಸುತ್ತಲೂ ನೀರಿನ ಭೀಕರ ಹರಿವಿನ ಮಧ್ಯೆ ಸಿಲುಕಿದ ಚಾಲಕ, ತನಗೆ ಆಸರೆ ನೀಡುವಂತೆ ಮತ್ತು ಪ್ರಾಣ ಉಳಿಸುವಂತೆ ಜೋರಾಗಿ ಕೂಗುತ್ತಾ ನೆರವಿಗಾಗಿ ಮೊರೆ ಇಟ್ಟಿದ್ದಾನೆ.
ಸೇತುವೆಯ ಮೇಲಿಂದ ಟಿಪ್ಪರ್ ಕೆಳಗೆ ಬಿದ್ದಿರುವುದನ್ನು ಮತ್ತು ಚಾಲಕ ಸಿಲುಕಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಮಯ ವ್ಯರ್ಥ ಮಾಡದೆ ಸ್ಥಳೀಯ ಮೀನುಗಾರರು ಮತ್ತು ಗ್ರಾಮಸ್ಥರು ತೆಪ್ಪದ ಸಹಾಯದಿಂದ ಕೃಷ್ಣಾ ನದಿಯ ಮಧ್ಯಕ್ಕೆ ತೆರಳಿದ್ದಾರೆ. ಇದನ್ನೂ ಓದಿ: Ram Mandir Donation Row | 77.85 ಲಕ್ಷ ಹಣ, 1121 ಡಾಲರ್ ಕರೆನ್ಸಿ ಜಪ್ತಿ – ರಾಮನ ದೇಣಿಗೆ ಕದ್ದವರ ಮನೆಯಲ್ಲಿ ಸಿಕ್ಕಿದ್ದೇನು?
ಸಾಹಸಮಯವಾಗಿ ಮುಳುಗುತ್ತಿದ್ದ ಲಾರಿಯ ಮೇಲಿದ್ದ ಚಾಲಕನನ್ನು ಸುರಕ್ಷಿತವಾಗಿ ತೆಪ್ಪಕ್ಕೆ ಹತ್ತಿಸಿಕೊಂಡು ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರ ಈ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೀಳಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನದಿಗೆ ಬಿದ್ದ ಟಿಪ್ಪರ್ ಯಾರಿಗೆ ಸೇರಿದ್ದು? ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಚಾಲಕನ ನಿರ್ಲಕ್ಷ್ಯವೇ? ಎಂಬ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
