ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮಹಾಕವಿ’ (Mahakavi Movie) ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಚಿತ್ರದ ಹಾಡುಗಳನ್ನು ಅನಾವರಣ ಮಾಡಿದರು. ಪಿ.ಆರ್. ಅಸೋಸಿಯೇಟ್ಸ್ ಮೂಲಕ ಪ್ರಭು ಯತ್ನಟ್ಟಿ ನಿರ್ಮಿಸಿರುವ ಈ ಚಿತ್ರಕ್ಕೆ ಶಮಿತಾ ಮಲ್ನಾಡ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಶೋರ್ ಹಾಗೂ ಅನುಷಾ ರೈ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಾಡುಗಳ ಬಿಡುಗಡೆ ಬಳಿಕ ಮಾತನಾಡಿದ ಅರ್ಜುನ್ ಜನ್ಯ, ನಾನು ಇಲ್ಲಿ ಮುಖ್ಯ ಅತಿಥಿಯಾಗಿ ಬಂದಿಲ್ಲ. ಬರಗೂರು ರಾಮಚಂದ್ರಪ್ಪ ಅವರ ಅಭಿಮಾನಿಯಾಗಿ ಬಂದಿದ್ದೇನೆ. ಅವರ ಬಾಯಲ್ಲಿ ಕನ್ನಡ ಕೇಳುವುದೇ ಸಂತೋಷ. ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿರುವ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿವೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ, ‘ಮಹಾಕವಿ’ ತಮ್ಮ ನಿರ್ದೇಶನದ 25ನೇ ಸಿನಿಮಾ ಎಂಬುದನ್ನು ವಿಶೇಷವಾಗಿ ಉಲ್ಲೇಖಿಸಿದರು. ಈ ಚಿತ್ರವು ಆದಿಕವಿ ಪಂಪನ ಜೀವನಚರಿತ್ರೆಯಲ್ಲ. ಪಂಪ ತಮ್ಮ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳನ್ನು ಕಥಾರೂಪದಲ್ಲಿ ತೆರೆ ಮೇಲೆ ತರಲಾಗಿದೆ. ಹತ್ತನೇ ಶತಮಾನದ ಹಿನ್ನೆಲೆಗೆ ಧಕ್ಕೆಯಾಗದಂತೆ ಚಿತ್ರವನ್ನು ರೂಪಿಸುವುದು ಸವಾಲಿನ ಕೆಲಸವಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: ಮದ್ದೂರಿನಲ್ಲಿ ಚಿತ್ರೀಕರಣ ಆರಂಭಿಸಿದ ಯತಿರಾಜ್
ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್ ಮಾತನಾಡಿ, 2015ರಲ್ಲಿ ‘ಬೆಕ್ಕು’ ಚಿತ್ರದ ಮೂಲಕ ಬರಗೂರು ರಾಮಚಂದ್ರಪ್ಪ ಅವರು ನನ್ನನ್ನು ಸಂಗೀತ ನಿರ್ದೇಶಕಿಯಾಗಿ ಪರಿಚಯಿಸಿದರು. ಆ ಬಳಿಕ ಅವರ ಎಲ್ಲ ಚಿತ್ರಗಳಿಗೂ ಸಂಗೀತ ನೀಡಿರುವುದು ಹೆಮ್ಮೆ. ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಅರ್ಜುನ್ ಜನ್ಯ ಅವರಿಗೆ ಧನ್ಯವಾದಗಳು ಎಂದರು.
ನಟ ಕಿಶೋರ್ ಮಾತನಾಡಿ, ಆದಿಕವಿ ಪಂಪನ ಕುರಿತ ಚಿತ್ರದ ಭಾಗವಾಗಿರುವುದು ಹೆಮ್ಮೆ. ವಿಲನ್ ಪಾತ್ರಗಳಲ್ಲಿ ನಟಿಸುವವರಿಗೆ ಹಾಡುಗಳು ಸಿಗುವುದು ಅಪರೂಪ. ಆದರೆ ಈ ಚಿತ್ರದಲ್ಲಿ ವಿಭಿನ್ನ ಪಾತ್ರದ ಜೊತೆಗೆ ಹಾಡುಗಳೂ ಸಿಕ್ಕಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಾಯಕಿ ಅನುಷಾ ರೈ, ಹಿರಿಯ ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯ್, ರಾಜಪ್ಪ ದಳವಾಯಿ ಸೇರಿದಂತೆ ಹಲವರು ಚಿತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕ ಪ್ರಭು ಯತ್ನಟ್ಟಿ ಕೂಡ ಉಪಸ್ಥಿತರಿದ್ದರು. ವಿಶೇಷವೆಂದರೆ, ‘ಮಹಾಕವಿ’ ಚಿತ್ರ ಹಾಲಿವುಡ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು, ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಇದನ್ನೂ ಓದಿ: ʻಪ್ರೇಮದ ಊರಲಿʼ ಏರುಪೇರು ಹೃದಯ ಸಾಂಗ್ ರೀಲಿಸ್
