– ಪತಿ, ಪ್ರಿಯಕರ ಪೊಲೀಸರ ವಶಕ್ಕೆ
ರಾಯಚೂರು: ಕಲ್ಲಿನಿಂದ ಜಜ್ಜಿ ಮಹಿಳೆಯನ್ನು (Woman) ಬರ್ಬರವಾಗಿ ಹತ್ಯೆಗೈದ ಘಟನೆ ಸಿಂಧನೂರು (Sindhanur) ತಾಲೂಕಿನ ಆರ್‌ಹೆಚ್.ಕ್ಯಾಂಪ್ 5ರ ಹೊರವಲಯದ ಜಮೀನೊಂದರಲ್ಲಿ ನಡೆದಿದೆ.
ಆರ್‌ಹೆಚ್.ಕ್ಯಾಂಪ್ 4ರ ನಿವಾಸಿ ಸ್ನೇಹಾ (25 ) ಕೊಲೆಯಾದ ಮಹಿಳೆ. ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ 2 ವರ್ಷದ ಮಗುವನ್ನು ಗೃಹಿಣಿ ಪಕ್ಕದಲ್ಲಿ ಇರಿಸಿ ಆರೋಪಿಗಳು ಪರಾರಿಯಾಗಿದ್ದರು. ಸುಮಾರು ಹೊತ್ತು ತಾಯಿಯ ಸ್ಥಿತಿ ಅರಿಯದೇ ಪುಟ್ಟ ಕಂದಮ್ಮ ತಾಯಿ ಎದೆಯ ಮೇಲೆಯೇ ಮಲಗಿತ್ತು. ಇದನ್ನೂ ಓದಿ: ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

ಮಹಿಳೆಯನ್ನು ಗಮನಿಸಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾಳೆ. ಮಗುವಿನ ತಲೆಗೂ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದೆ.
ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಮೃತಳ ಪತಿ ಅಮಿತ್ ಹಾಗೂ ಮೃತಳ ಪ್ರಿಯಕರ (Lover) ಶುಭಂನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪತಿಯೊಂದಿಗೆ (Husband) ಜಗಳ ಮಾಡಿಕೊಂಡು 15 ದಿನಗಳ ಹಿಂದೆ ಸ್ನೇಹಾ ತವರು ಮನೆಗೆ ತೆರಳಿದ್ದಳು. ಇಂದು (ಸೆ.19) ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಣ್ಣನ ಮನೆಯಿಂದ ಹೊರಗಡೆ ಬಂದಿದ್ದಳು ಎಂದು ತಿಳಿದುಬಂದಿದೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ಸೀರೆಯಲ್ಲಿ ಕತ್ತು ಬಿಗಿದು ಪ್ರಿಯಕರನ ಹತ್ಯೆ – ಮಹಿಳೆ ಅರೆಸ್ಟ್

