-ಸರ್ಕಾರದಿಂದ 12 ನಿಯಮಗಳ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಇನ್ಮುಂದೆ ಶೈಕ್ಷಣಿಕ ಪ್ರವಾಸದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (Govt Degree College) ವಿದ್ಯಾರ್ಥಿಗಳಿಗೆ ಸೆಲ್ಫಿ, ರೀಲ್ಸ್, ವಿಡಿಯೋ ಚಿತ್ರೀಕರಣ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.
ಶೈಕ್ಷಣಿಕ ಪ್ರವಾಸದ (Educational Tour) ಸಂಬಂಧ ಕಾಲೇಜು ಶಿಕ್ಷಣ ಇಲಾಖೆ 12 ನಿಯಮಗಳನ್ನು ಹೊರಡಿಸಿದೆ. ಕಡ್ಡಾಯವಾಗಿ ಪದವಿ ಕಾಲೇಜುಗಳು ನಿಯಮ ಪಾಲನೆ ಮಾಡಬೇಕು. ನಿಯಮ ಉಲ್ಲಂಘನೆ ಮಾಡಿದ್ರೆ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ಇಲಾಖೆ ನೀಡಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಬಿಎಸ್‌ಎಫ್ ವಾಹನ ಪಲ್ಟಿ; ಐವರು ಸೈನಿಕರಿಗೆ ಗಾಯ
ಪ್ರವಾಸಕ್ಕೆ ಇಲಾಖೆಯ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಪಡೆಯೋದು ಕಡ್ಡಾಯ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನಿಡೋದು ಕಡ್ಡಾಯ ಎಂಬ ನಿಯಮವನ್ನು ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿಯಮ ಜಾರಿ ಮಾಡಿರೋದಾಗಿ ಕಾಲೇಜು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ನಿಯಮಗಳು:
1. ಇಲಾಖೆಯಿಂದ ಪೂರ್ವಾನುಮತಿಯನ್ನು ಪಡೆಯದೇ ಕಾಲೇಜಿನಿಂದ ಶೈಕ್ಷಣಿಕ ಪ್ರವಾಸ ಕೈಗೊಳ್ಳುವಂತಿಲ್ಲ.
2. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಪೂರ್ವದಲ್ಲಿ ಪ್ರವಾಸಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳಿಂದ ಪಡೆದ ಮುಚ್ಚಳಿಕೆ ಪತ್ರ ಮತ್ತು ಅವರ ಪೋಷಕರಿಂದ ಪಡೆದ ಅನುಮತಿ ಪತ್ರಗಳೊಂದಿಗೆ ಕೇಂದ್ರ ಕಛೇರಿಗೆ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು.
3. ಅನುಮತಿ ನೀಡಲಾಗಿರುವ ಸ್ಥಳಗಳನ್ನು ಹೊರತುಪಡಿಸಿ ಇನ್ನಿತರೇ ಯಾವುದೇ ಸ್ಥಳಗಳ ವೀಕ್ಷಣೆಗೆ ತೆರಳಲು ಅನುಮತಿ ಇರುವುದಿಲ್ಲ.
4. ವಿದ್ಯಾರ್ಥಿನಿಯರ ಸುರಕ್ಷತೆಯ ಹಿತದೃಷ್ಟಿಯಿಂದ ಸದರಿ ಶೈಕ್ಷಣಿಕ ಪ್ರವಾಸದುದ್ದಕ್ಕೂ ಅಗತ್ಯ ಸುರಕ್ಷತಾ/ರಕ್ಷಣಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವುದು. ಒಂದು ವೇಳೆ ವಿದ್ಯಾರ್ಥಿನಿಯರಿಗೆ ಅನಾನುಕೂಲತೆಗಳಾದಲ್ಲಿ ಅಥವಾ ಅವಘಡ ಸಂಭವಿಸಿದಲ್ಲಿ ಅದಕ್ಕೆ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರೇ ನೇರ ಹೊಣೆಗಾರರಾಗಿರುತ್ತಾರೆ.
5. ವಿದ್ಯಾರ್ಥಿಗಳೊಂದಿಗೆ ಕನಿಷ್ಠ ಒಬ್ಬ ಖಾಯಂ ಉಪನ್ಯಾಸಕರು ತೆರಳತಕ್ಕದ್ದು, ಕೇವಲ ಅತಿಥಿ ಉಪನ್ಯಾಸಕರುಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕಳುಹಿಸಬಾರದು.
6. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಅಧ್ಯಾಪಕರ ಸಂಖ್ಯೆ ನಾಲ್ಕನ್ನು ಮೀರಿರಬಾರದು. ಇಬ್ಬರು ಮಹಿಳಾ ಅಧ್ಯಾಪಕಿಯರು ಕಡ್ಡಾಯವಾಗಿ ತೆರಳಬೇಕು ಹಾಗೂ ಒಬ್ಬರು ಗ್ರೂಪ್ `ಡಿ’ ನೌಕರರನ್ನು ಕರೆದೊಯ್ಯುವುದು.
7. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಅವಧಿಯು ಗರಿಷ್ಠ 05 ದಿನಗಳಿಗಿಂತ ಹೆಚ್ಚಿರಬಾರದು. (ಪ್ರಯಾಣ ದಿನಗಳನ್ನೊಳಗೊಂಡಂತೆ)
8. ಮಳೆಗಾಲದಲ್ಲಿ ಪ್ರವಾಸ ಕೈಗೊಳ್ಳಲು ಅನುಮತಿಯನ್ನು ನೀಡಲಾಗುವುದಿಲ್ಲ. ನೀರಿನ ಹರಿವು (ನದಿ, ಸಮುದ್ರ ಇತ್ಯಾದಿ) ದಟ್ಟ ಅಡವಿ, ಕಡಿದಾದ ಬೆಟ್ಟ ಇರುವ ಸ್ಥಳಗಳಿಗೆ ಭೇಟಿ ನೀಡುವ ಪೂರ್ವದಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪೂರ್ವಭಾವಿಯಾಗಿ ಮಾಡಿಕೊಂಡಿರತಕ್ಕದ್ದು. ನುರಿತ ಚಾರಣಿಗರು/ಈಜುಗಾರರು ಪ್ರವಾಸ ತಂಡದಲ್ಲಿದ್ದಲ್ಲಿ ಮಾತ್ರ ಸ್ಥಳೀಯರಿಂದ ಸುರಕ್ಷತೆಯ ಕುರಿತು ವಿವರಗಳನ್ನು ಪಡೆದು ಚಾರಣ/ಈಜು ಇತ್ಯಾದಿಗಳಿಗೆ ಅವಕಾಶ ನೀಡತಕ್ಕದ್ದು.
9. ಪ್ರವಾಸದ ಸಮಯದಲ್ಲಿ ವಿದ್ಯಾರ್ಥಿಗಳಿಗೆ Selfie/Reels ಇತ್ಯಾದಿಗಳನ್ನು ಚಿತ್ರೀಕರಿಸಲು ಅನುಮತಿ ಇರುವುದಿಲ್ಲವೆಂಬ ಕಟ್ಟುನಿಟ್ಟಾದ ಸೂಚನೆಯನ್ನು ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆ ತೆರಳುವ ಪೂರ್ವದಲ್ಲಿ ನೀಡತಕ್ಕದ್ದು ಹಾಗೂ ಈ ಸೂಚನೆಯನ್ನು ಉಲ್ಲಂಘಿಸದಂತೆ ಜೊತೆಯಲ್ಲಿ ತೆರಳಿರುವ ಅಧ್ಯಾಪಕರು ನಿಗಾವಹಿಸತಕ್ಕದ್ದು.
10. ಪ್ರವಾಸಕ್ಕೆ ಹೊರಡುವ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಪ್ರವಾಸದ ಮಾಹಿತಿಯನ್ನು ನೀಡತಕ್ಕದ್ದು.
11. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಧ್ಯಾಪಕರು/ಆಡಳಿತ ಸಿಬ್ಬಂದಿಗಳು/ಅತಿಥಿ ಉಪನ್ಯಾಸಕರುಗಳು ಯಾವುದೇ ರಜೆಯನ್ನು ಪಡೆದುಕೊಂಡು ಅಥವಾ ಬೇರೆ ವಿಧಾನಗಳಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ಈ ಪ್ರಕಾರವಾಗಿ ಪ್ರವಾಸಕ್ಕೆ ತೆರಳಿದಲ್ಲಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಂಬಂಧಿಸಿದ ಸಿಬ್ಬಂದಿಗಳೇ ನೇರ ಹೊಣೆಗಾರರಾಗುತ್ತಿದ್ದು ಇಲಾಖೆಯ ಹೊಣೆಗಾರಿಕೆ ಇರುವುದಿಲ್ಲ.
12. ಇಲಾಖಾ ಅನುಮತಿಯನ್ನು ಪಡೆದುಕೊಂಡು ಶೈಕ್ಷಣಿಕ ಪ್ರವಾಸ ತೆರಳುವಾಗ ವಿದ್ಯಾರ್ಥಿಗಳೊಂದಿಗೆ ಸಂಬಂಧಪಟ್ಟ ವಿಭಾಗದ ಪ್ರಾಧ್ಯಾಪಕರನ್ನು ಹೊರತುಪಡಿಸಿ ಬೇರೆ ವಿಭಾಗದ ಪ್ರಾಧ್ಯಾಪಕರು/ಆಡಳಿತ ಸಿಬ್ಬಂದಿಗಳು ಅನುಮತಿ ಇಲ್ಲದೇ ಶೈಕ್ಷಣಿಕ ಪ್ರವಾಸಕ್ಕೆ ತೆರಳುವಂತಿಲ್ಲ. ಈ ಅಂಶವನ್ನು ಕಾಲೇಜಿನ ಎಲ್ಲಾ ಸಿಬ್ಬಂದಿಗಳ ಗಮನಕ್ಕೆ ತರತಕ್ಕದ್ದು. ಒಂದು ವೇಳೆ ನಿಯಮ ಮೀರಿ ಶೈಕ್ಷಣಿಕ ಪ್ರವಾಸ ಕೈಗೊಂಡು ಯಾವುದೇ ಅಹಿತಕರ ಘಟನೆ/ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಕಾಲೇಜಿನ ಅಧಿಕಾರಿ ಮತ್ತು ಸಿಬ್ಬಂದಿಗಳು ನೇರಹೊಣೆಗಾರರಾಗುತ್ತಾರೆ.

