ಪ್ರೇಕ್ಷಕರಿಂದ ಭಾರೀ ಮೆಚ್ಚಿಗೆಯಾದ ಸಿನಿಮಾ ಕೆರೆಬೇಟೆ. ವಿಮರ್ಶಾತ್ಮಕವಾಗಿ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಸದ್ದು ಮಾಡಿತ್ತು. ಆನಂತರ ಈ ಸಿನಿಮಾದ ನಾಯಕ ಗೌರಿಶಂಕರ್ (Gowrishankar) ಯಾವ ರೀತಿಯ ಪಾತ್ರ ಮಾಡಲಿದ್ದಾರೆ ಅನ್ನುವ ಕುತೂಹಲ ಇದ್ದೇ ಇತ್ತು. ಅದಕ್ಕೆ ಕಾಮನ್ ಮ್ಯಾನ್ (Common Man) ಸಿನಿಮಾ ಮೂಲಕ ಉತ್ತರ ನೀಡಿದ್ದಾರೆ ಗೌರಿ ಶಂಕರ್. ಕಮರ್ಷಿಯಲ್ ಆಗಿ ದೊಡ್ಡ ಸಕ್ಸಸ್ ಕನಸು ಕಾಣುತ್ತಿರುವ ಗೌರಿಶಂಕರ್‌ಗೆ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ಹೆಸರು ತಂದುಕೊಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಬಿಡುಗಡೆ ಆಗಿರುವ ಕಾಮನ್ ಮ್ಯಾನ್ ಸಿನಿಮಾದ ಬಹುತೇಕ ಹಾಡುಗಳು ಕೇಳುಗರ ಹೃದಯ ಗೆದ್ದಿವೆ.
ಒಬ್ಬ ಸಾಮಾನ್ಯ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತೆ ಎಂಬ ಎಳೆ ಇಟ್ಟುಕೊಂಡು ಕಥೆ ಬರೆದು ಸುರಭಿ ಫಿಲಂಸ್ ಅಡಿ ಎನ್.ನರಸಿಂಹಮೂರ್ತಿ ಅವರು ನಿರ್ಮಿಸಿರುವ ‘ಕಾಮನ್ ಮ್ಯಾನ್’ ಚಿತ್ರ ಸೆ.25ರಂದು ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕಥೆ ರಚಿಸಿ ಆ್ಯಕ್ಷನ್ ಕಟ್ ಹೇಳಿರೋ ಈ ಚಿತ್ರದಲ್ಲಿ ಗೌರಿಶಂಕರ್ ನಾಯಕನಾಗಿ ನಟಿಸಿದ್ದಾರೆ. ದೊಡ್ಡಮಟ್ಟದಲ್ಲೇ ನಿರ್ಮಾಪಕರು ಪ್ರಚಾರದ ಕಾರ್ಯ ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಕರ್ 2027ರ ರೇಸ್‌ಗೆ ಮರಾಠಿಯ ʻಗೊಂಧಳ್ʼ ಸಿನಿಮಾ ಆಯ್ಕೆ
ಇತ್ತೀಚೆಗಷ್ಟೇ ದೇವಸ್ಥಾನದ ಮುಂದೆ ಸಿನಿಮಾ ಪ್ರಚಾರದ ಟ್ಯಾಬ್ಲೋ ವಾಹನಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಜೊತೆಗೆ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವಂಥ ಪ್ರಯತ್ನವನ್ನೂ ಚಿತ್ರತಂಡ ಮಾಡುತ್ತಿದೆ. ಸಿನಿಮಾ ಕುರಿತಾಗಿ ಮಾತಾಡಿರುವ ಗೌರಿಶಂಕರ್, ಸಾಮಾನ್ಯ ಯುವಕನೊಬ್ಬ ಸರ್ಕಾರದ ಮೇಲೆ ಒತ್ತಡ ತಂದು ಹೇಗೆ ಸಿಎಂ ಆಗ್ತಾನೆ, ರಾಜಕಾರಣಿಗಳಿಂದಲೂ ಆಗದ ಕೆಲಸಗಳನ್ನು ಆತ ಹೇಗೆ ಮಾಡ್ತಾನೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲರೂ ಬಂದು ನೋಡುವಂಥ ಸಿನಿಮಾ ಇದಾಗಿದೆ ಅನ್ನುತ್ತಾರೆ.
ಗಾಯಕಿ ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್ ರಂಥ ಗಾಯಕರು ಈ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಸಾಯಿಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರ ಇದಾಗಿದ್ದು, ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನೆಲ್ಲ ಸುಧಾರಣೆ ಮಾಡಬಹುದು ಎಂಬುದನ್ನು ಈ ಚಿತ್ರ ಮೂಲಕ ಹೇಳಿದ್ದಾರೆ. ಇದನ್ನೂ ಓದಿ: ಕತ್ರೀನಾ ಬಾಡಿ ಶೇಮಿಂಗ್ ವಿಚಾರಕ್ಕೆ ರಮ್ಯಾ ಧಗ ಧಗ
ಗೌರಿಶಂಕರ್ ಚಿತ್ರದ ನಾಯಕನಾಗಿದ್ದು, ಸೋನಾ ಲದ್ವಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಅಶೋಕ್ ಅವರು ರಾಜ್ಯಪಾಲರ ಪಾತ್ರ ಮಾಡಿದ್ದಾರೆ. ವಿನಯ ಚಂದ್ರ ಅವರ ಸಂಗೀತ, ಜೆ.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ. ಕಾಮನ್ ಮ್ಯಾನ್ ಚಿತ್ರದ ಉಳಿದ ಪಾತ್ರಗಳಲ್ಲಿ ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮಿನಾಡು ಹಾಗೂ ಇತರರು ನಟಿಸಿದ್ದಾರೆ. ವಿನಯ ಚಂದ್ರ ಅವರು ಸಂಗೀತ ನಿರ್ದೇಶನ, ಜೆ.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

