– 4 ರಿಂದ 60 ವರ್ಷದೊಳಗಿನವರಿಗೂ ಪಡೆಯಬಹುದು ಲಸಿಕೆ
– 3 ತಿಂಗಳ ಅಂತರದಲ್ಲಿ 2 ಡೋಸ್
ಟೊಕಿಯೊ/ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷವೇ ಭಾರತಕ್ಕೆ ಮೊದಲ ಡೆಂಗ್ಯೂ ಲಸಿಕೆ (Dengue Vaccine) ಬರಲಿದೆ ಎಂದು ವರದಿಗಳು ತಿಳಿಸಿವೆ.
ಹೌದು. ಭಾರತದಲ್ಲಿ ‘ಕ್ವೆಡೆಂಗಾ’ (Qdenga) ಡೆಂಗ್ಯೂ ಲಸಿಕೆ ವಿತರಿಸಲು ಹಾಗೂ ಉತ್ತೇಜಿಸಲು ಜಪಾನ್ ಔಷಧ ತಯಾರಕ ಸಂಸ್ಥೆ ʻಟಕೆಡಾ ಫಾರ್ಮಾಸ್ಯುಟಿಕಲ್ʼ (Takeda Pharmaceutical) ಜೊತೆಗೆ ʻಡಾ. ರೆಡ್ಡೀಸ್ ಲ್ಯಾಬೊರೇಟರೀಸ್ʼ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರ ಪರಿಣಾಮವಾಗಿ, ಭಾರತವು ಮುಂದಿನ ವರ್ಷದ ಮೊದಲ 6 ತಿಂಗಳ ಒಳಗೇ ಭಾರತಕ್ಕೆ ಮೊದಲ ಡೆಂಗ್ಯೂ ಲಸಿಕೆ ಬರುವ ನಿರೀಕ್ಷೆಯಿದೆ.
ಕಳೆದ ಜುಲೈ ತಿಂಗಳಲ್ಲೇ ಭಾರತದ ಔಷಧ ನಿಯಂತ್ರಕ ಸಂಸ್ಥೆಯು ಅನುಮೋದನೆ ನೀಡಿದ ಮೊದಲ ಡೆಂಗ್ಯೂ ಲಸಿಕೆ ಟಕೆಡಾದ ‘ಕ್ವೆಡೆಂಗಾ’ ಆಗಿದೆ.

ವರದಿಗಳ ಪ್ರಕಾರ, ಈ ಡೆಂಗ್ಯೂ ಲಸಿಕೆಯು 2027ರ ಮೊದಲಾರ್ಧದಲ್ಲಿ ಭಾರತದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ʻನಾವು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. 2030ರ ವೇಳೆಗೆ ವಾರ್ಷಿಕ 100 ಮಿಲಿಯನ್ (10 ಕೋಟಿ) ಡೋಸ್‌ಗಳ ಜಾಗತಿಕ ಉತ್ಪಾದನಾ ಸಾಮರ್ಥ್ಯ ಗುರಿ ಹೊಂದಿದ್ದು, ಆ ನಿಟ್ಟಿನಲ್ಲೇ ಸಾಗುತ್ತಿದ್ದೇವೆ ಎಂದು ಟಕೆಡಾ ಫಾರ್ಮಾಸ್ಯುಟಿಕಲ್ ಜುಲೈನಲ್ಲಿ ತಿಳಿಸಿದೆ.
ಕ್ವೆಡೆಂಗಾ ಎಂದರೇನು?
ಟಕೆಡಾ ಫಾರ್ಮಾಸ್ಯುಟಿಕಲ್ ಸಂಸ್ಥೆ ಹೇಳುವಂತೆ, ಕ್ವೆಡೆಂಗಾ ಲಸಿಕೆಯನ್ನ ಡೆಂಗ್ಯೂ ವೈರಸ್‌ನ ನಾಲ್ಕೂ ಸೆರೋಟೈಪ್‌ಗಳಿಂದ (ಒಂದೇ ಜಾತಿಯ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳ ಒಳಗೆ ಕಂಡುಬರುವ ವಿಭಿನ್ನ ಗುಂಪುಗಳು) ರಕ್ಷಣೆ ನೀಡುವಂತೆ ವಿನ್ಯಾಗೊಳಿಸಲಾಗಿರುವ ಲಸಿಕೆಯಾಗಿದೆ. 4 ವರ್ಷದ ಮಕ್ಕಳಿಂದ 60 ವರ್ಷದೊಳಗಿನ ವಯಸ್ಕರಲ್ಲಿ ಡೆಂಗ್ಯೂ ತಡೆಗಟ್ಟಲು ಈ ಲಸಿಕೆಯನ್ನ ಬಳಸಬಹುದು.
ಈ ವರ್ಷದ ಆರಂಭದಲ್ಲಿ ನಡೆದ ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ, ಎರಡನೇ ಡೋಸ್ ಪಡೆದ ಒಂದು ವರ್ಷದ ಬಳಿಕ ದೃಢಪಟ್ಟ ಡೆಂಗ್ಯೂ ಪ್ರಕರಣಗಳ ವಿರುದ್ಧ ಕ್ವೆಡೆಂಗಾ ಶೇ.80.2ರ ಪರಿಣಾಮಕಾರಿತ್ವ ತೋರಿಸಿದೆ. 18 ತಿಂಗಳ ಬಳಿಕ ಡೆಂಗ್ಯೂ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವುದನ್ನ ತಡೆಯುವಲ್ಲಿ ಶೇ.90.4ರ ಯಶಸ್ವಿಯಾಗಿದೆ. ಅಲ್ಲದೇ ಅಧ್ಯಯನವು 2ನೇ ಹಂತದ ಗುರಿಯನ್ನೂ ತಲುಪಿದೆ ಎಂದು ವರದಿಗಳು ಉಲ್ಲೇಖಿಸಿವೆ.
3 ತಿಂಗಳ ಅಂತರದಲ್ಲಿ 2 ಡೋಸ್
ಕ್ವೆಡೆಂಗಾ ಲಸಿಕೆಯನ್ನ 0.5 ಮಿ.ಲೀ. ಪ್ರಮಾಣದಲ್ಲಿ 2 ಡೋಸ್‌ಗಳಾಗಿ ನೀಡಲಾಗುತ್ತದೆ. ಈ ಎರಡು ಡೋಸ್‌ಗಳ ನಡುವೆ 3 ತಿಂಗಳ ಅಂತರ ಇರಬೇಕು. ವ್ಯಕ್ತಿಗೆ ಈ ಹಿಂದೆ ಡೆಂಗ್ಯೂ ಸೋಂಕು ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನ ಪರಿಗಣಿಸದೇ ಲಸಿಕೆ ನೀಡಬಹುದು. ಹೀಗಾಗಿ ಲಸಿಕೆ ನೀಡುವ ಮೊದಲು ಡೆಂಗ್ಯೂ ಸೋಂಕಿನ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಭಾರತದಲ್ಲಿನ ಡೆಂಗ್ಯೂ ಬಿಕ್ಕಟ್ಟು
ಭಾರತ ಸೇರಿದಂತೆ ಉಷ್ಣವಲಯ ಮತ್ತು ಉಪಉಷ್ಣವಲಯದ ಪ್ರದೇಶಗಳಲ್ಲಿ ಡೆಂಗ್ಯೂ ಇನ್ನೂ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಋತುಮಾನಕ್ಕೆ ಅನುಗುಣವಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವುದರಿಂದ ಆಸ್ಪತ್ರೆಗಳ ಮೇಲೂ ಹೆಚ್ಚಿನ ಒತ್ತಡ ಉಂಟಾಗಬಹುದು. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಲಸಿಕೆಯು ಸೊಳ್ಳೆ ನಿಯಂತ್ರಣ ಕ್ರಮಗಳು ಮತ್ತು ಇತರ ಸಾರ್ವಜನಿಕ ಆರೋಗ್ಯ ಕ್ರಮಗಳ ಜೊತೆಗೆ ಡೆಂಗ್ಯೂ ತಡೆಗಟ್ಟಲು ಮತ್ತೊಂದು ಸಾಧನವಾಗಬಹುದು.
ರಾಷ್ಟ್ರೀಯ ವೆಕ್ಟರ್‌ಬೋರ್ನ್ ಡಿಸೀಸ್ ಕಂಟ್ರೋಲ್ ಸೆಂಟರ್ (NCVBDC)ನ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಭಾರತದಲ್ಲಿ 1,13,450 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, 95 ಮಂದಿ ಮೃತಪಟ್ಟಿದ್ದಾರೆ.
ಸಾಮಾನ್ಯವಾಗಿ ಮುಂಗಾರು ಮತ್ತು ಮುಂಗಾರು ನಂತರದ ಅವಧಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಸಮಯದಲ್ಲಿ ನಿಂತ ನೀರು Aedes ಸೊಳ್ಳೆಗಳ ಸಂತಾನೋತ್ಪತ್ತಿಗೆ ಸೂಕ್ತ ತಾಣವಾಗುತ್ತದೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ವರದಿಯಾಗುವ ಡೆಂಗ್ಯೂ ಪ್ರಕರಣಗಳು 11 ಪಟ್ಟು ಹೆಚ್ಚಾಗಿವೆ ಎಂದು ಟಕೆಡಾ ತಿಳಿಸಿದೆ. ಮಾರುಕಟ್ಟೆ ಅನುಮೋದನೆ ಮತ್ತು ನಿಯಂತ್ರಣ ಸಂಸ್ಥೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಕ್ವೆಡೆಂಗ ಲಸಿಕೆ ಮುಂದಿನ ವರ್ಷ ಲಭ್ಯವಾಗುವ ನಿರೀಕ್ಷೆಯಿದೆ.

