ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಂಗಣ್ಣು ಸೋಂಕಿನ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಕಂಜಕ್ಟಿವೈಟಿಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಾಲಾ ಮಕ್ಕಳು ಸೇರಿದಂತೆ ಹಲವರು ಕಣ್ಣಿನ ಸೋಂಕಿನಿಂದ ಬಳಲುತ್ತಿದ್ದಾರೆ. ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಕೊಡಗಿನಲ್ಲಿ ಕೆಂಗಣ್ಣಿನ ಕಾಟ ಶುರುವಾಗಿದೆ. ಕಣ್ಣು ಕೆಂಪಾಗುವುದು, ನಿರಂತರವಾಗಿ ನೀರು ಸುರಿಯುವುದು, ತುರಿಕೆ ಹಾಗೂ ಕಣ್ಣಿನಲ್ಲಿ ಅಂಟಿಕೊಳ್ಳುವಂತಹ ಸಮಸ್ಯೆಗಳು ಕೆಂಗಣ್ಣು ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳೊಂದಿಗೆ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗಳತ್ತ ಬರುತ್ತಿದ್ದಾರೆ.
ʻಕಂಜಕ್ಟಿವೈಟಿಸ್ʼ ಎಂದರೆ ಕಣ್ಣಿನ ಹೊರಪದರದಲ್ಲಿ ಕಾಣಿಸಿಕೊಳ್ಳುವ ಸೋಂಕು. ಸೋಂಕಿತರ ಕಣ್ಣು ಅಥವಾ ಅವರು ಬಳಸಿದ ವಸ್ತುಗಳ ಸಂಪರ್ಕದಿಂದಲೂ ಇದು ಹರಡುವ ಸಾಧ್ಯತೆ ಇದೆ. ಹೀಗಾಗಿ ಶಾಲೆ, ಕಚೇರಿ ಸೇರಿದಂತೆ ಜನಸಂದಣಿ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಕೆಂಗಣ್ಣು ಬಂದವರು ಪದೇಪದೇ ಕಣ್ಣು ಉಜ್ಜಿಕೊಳ್ಳಬಾರದು. ಕಣ್ಣು ಮುಟ್ಟಿದ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಟವೆಲ್, ಕರವಸ್ತ್ರ ಸೇರಿದಂತೆ ವೈಯಕ್ತಿಕ ವಸ್ತುಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇನ್ನು, ಕಣ್ಣಿನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಮೆಡಿಕಲ್ ಶಾಪ್‌ಗೆ ತೆರಳಿ ಸ್ವಯಂ ಆಗಿ ಐ ಡ್ರಾಪ್ಸ್ ಖರೀದಿಸಿ ಬಳಸುವುದು ಸರಿಯಲ್ಲ. ವೈದ್ಯರ ಸಲಹೆಯಿಲ್ಲದೆ ಯಾವುದೇ ಕಣ್ಣಿನ ಔಷಧಿಯನ್ನು ಬಳಸಬಾರದು. ವಿಶೇಷವಾಗಿ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಪೋಷಕರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿದೆ. ಸೋಂಕು ಮತ್ತಷ್ಟು ಹರಡದಂತೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಎಂದು ವೈದ್ಯರು ಜಿಲ್ಲೆಯ ಜನರಿಗೆ ಮನವಿ ಮಾಡಿದ್ದಾರೆ.
ಕಳೆದ 15 ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಕೆಂಗಣ್ಣು ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಒಟ್ಟಿನಲ್ಲಿ, ಕೊಡಗಿನಲ್ಲಿ ಕೆಂಗಣ್ಣು ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಪಡುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಕಣ್ಣಿನಲ್ಲಿ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂಬುದು ವೈದ್ಯರ ಸಲಹೆಯಾಗಿದೆ.

