– ಸ್ಟಿಂಗ್ ಆಪರೇಷನ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು
– ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಬೇಕು
– ಸಿಬಿಐ ತನಿಖೆಗೆ ಅಭ್ಯರ್ಥಿಗಳ ಆಗ್ರಹ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಅರ್ಹ ಅಭ್ಯರ್ಥಿಗಳಿಗೆ ಗೇಟ್ ಪಾಸ್ ನೀಡಿ, ಕಾಸು ಕೊಟ್ಟವರಿಗೆ ನೌಕರಿ ಮಾರಾಟ ಮಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ (Corruption) ಕರ್ಮಕಾಂಡವೊಂದು ಬಟಾಬಯಲಾಗಿದೆ.
ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಾಗುತ್ತಿರುವ ಪಶುವೈದ್ಯಾಧಿಕಾರಿ (Veterinary Officer) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯಲ್ಲಿ ಕೋಟಿ ಕೋಟಿ ರೂಪಾಯಿಗಳ ಅಕ್ರಮ ನಡೆದಿರುವುದು ಬಯಲಿಗೆ ಬಂದಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಏಜೆಂಟರ್‌ಗಳಿಂದಲೇ ಖುದ್ದು ಕರೆ ಹೋಗುತ್ತಿದ್ದು, ನಿಮ್ಮ ಅಂಕಗಳು ಕಮ್ಮಿ ಇವೆ, ಅಂತಿಮ ಪಟ್ಟಿಯಲ್ಲಿ ಹೆಸರು ಬರಬೇಕೆಂದರೆ ಕಾಸು ಕೊಡಿ ಎಂದು ಬೆದರಿಸಿ ಆಮಿಷ ಒಡ್ಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಜನವರಿಯಲ್ಲಿ ನಡೆದ ಪರೀಕ್ಷೆಯ ಅಂತಿಮ ಆಯ್ಕೆ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಲಾಗಿತ್ತು. ಈ ನೇಮಕಾತಿ ಅಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ನೂರಾರು ಪಶುವೈದ್ಯಾಧಿಕಾರಿ ಅಭ್ಯರ್ಥಿಗಳು ಇಂದು ವಿಧಾನಸೌಧ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ದೂರು ನೀಡಿದ್ದಾರೆ.
ಪಶುವೈದ್ಯಕೀಯ ಪದವಿಯಲ್ಲೇ (Degree) ಫೇಲ್ ಆಗಿದ್ದ ಹಲವು ಅಭ್ಯರ್ಥಿಗಳು, ಕೆಪಿಎಸ್‌ಸಿ ಪ್ರಕಟಿಸಿದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಉನ್ನತ ಸ್ಥಾನ ಮತ್ತು ರ್‍ಯಾಂಕ್ ಪಡೆದುಕೊಂಡಿರುವುದು ಅಭ್ಯರ್ಥಿಗಳ ಕಣ್ಣು ಕೆಂಪಗಾಗಿಸಿದೆ.
80 ಲಕ್ಷಕ್ಕೆ ಹುದ್ದೆ ಮಾರಾಟ:
ಪಶುವೈದ್ಯಾಧಿಕಾರಿ ಹುದ್ದೆಗೆ 80 ಲಕ್ಷ ರೂಪಾಯಿ ನಿಗದಿಪಡಿಸಲಾಗಿದ್ದು 40 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಲೇಬೇಕು ಎಂದು ಏಜೆಂಟ್ ಒಬ್ಬ ಅಭ್ಯರ್ಥಿಯ ತಂದೆಯೊಂದಿಗೆ ನಡೆಸಿದ ಕರಾಳ ಡೀಲ್‌ನ ಆಡಿಯೋ ಪಬ್ಲಿಕ್ ಟಿವಿಗೆ (PUBLiC TV) ಸಿಕ್ಕಿದೆ.
ಸ್ಟಿಂಗ್ ಆಪರೇಷನ್‌ನಲ್ಲಿ ಏನಿದೆ?
ಏಜೆಂಟ್: ನಿನ್ನೆ ಹುಡುಗ ಬಂದು ಭೇಟಿಯಾಗಿದ್ದ, ನೀವು ಬರಬೇಕಿತ್ತು. ಮೊದಲೇ ಮಾತನಾಡಿದ್ದರೆ ಸ್ವಲ್ಪ ಕಮ್ಮಿಯಾಗುತ್ತಿತ್ತು. 80 ಲಕ್ಷ ರೂಪಾಯಿ ಕೊಡ್ತೀವಿ ಅಂದಿದ್ದಾರೆ. ಅರ್ಧ ಮೊತ್ತ (ಅಡ್ವಾನ್ಸ್) ಅರೇಂಜ್ ಮಾಡಿ ಬೆಂಗಳೂರಿಗೆ ಬರಬೇಕು.
ಅಭ್ಯರ್ಥಿಯ ತಂದೆ: “ಕಡಿಮೆ ಆಗಲ್ವಾ ಸರ್? ರಾತ್ರಿನೇ ದುಡ್ಡು ಕೊಡಬೇಕಾ?
ಏಜೆಂಟ್: ವಿನೋದ್ ಕೈಯಲ್ಲಿ ಕೊಡಿ. ಫೋನ್ ಸ್ಪೀಕರ್ ಆನ್‌ನಲ್ಲಿ ಇರಲಿ. ನಾಳೆನೇ ಎಲ್ಲಾ ರೆಡಿ ಮಾಡ್ತೀನಿ. ಡಾಕ್ಯುಮೆಂಟ್ಸ್ ತಂದುಕೊಡಿ.
ವಿದ್ಯಾರ್ಥಿ: ಮನೆಯಲ್ಲಿ ಈಗ 30 ಲಕ್ಷ ಇದೆ ಸರ್. ಎಲ್ಲಿಗೆ ಬರಬೇಕು?
ಏಜೆಂಟ್: ಬೆಂಗಳೂರಿಗೆ ಬರಬೇಕು, ರೂಮ್ ಬುಕ್ ಮಾಡ್ತಾರೆ. ಯಾವುದೇ ಆನ್‌ಲೈನ್ ಬೇಡ. ಜವಾಬ್ದಾರಿ ಮನುಷ್ಯನನ್ನು ಕರೆದುಕೊಂಡು ಬನ್ನಿ. ನನ್ನ ಮೇಲೆ ಡೌಟ್ ಇದ್ದರೆ ಎಷ್ಟು ಅಮೌಂಟ್ ಕೊಡ್ತೀರೋ ಅಷ್ಟಕ್ಕೆ ಚೆಕ್ (Cheque) ಕೊಡ್ತೀನಿ. 99% ಕೆಲಸ ಗ್ಯಾರಂಟಿ ಮಾಡುತ್ತೇನೆ.
