ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ನಡೆದ ಕಲ್ಲು ಕ್ವಾರಿ (Stone Quarry) ದುರಂತದ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಕಲ್ಲು ಕ್ವಾರಿಯಲ್ಲಿ ದುರಂತ ಸಂಭವಿಸಿ ಕಾರ್ಮಿಕನೊರ್ವ ಸಾವನ್ನಪ್ಪಿದ್ದಾನೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮೂಲದ ನಾಗೇಂದ್ರ (38) ಮೃತಪಟ್ಟ ಕಾರ್ಮಿಕ (labour). ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಪೆರೇಸಂದ್ರ ಸಮೀಪದ ಯಲಗಲಹಳ್ಳಿ. ಕ್ರಶರ್ ವಲಯದಲ್ಲಿರುವ ಎಕೋ ಸ್ಯಾಂಡ್ ಕ್ರಶರ್‌ಗೆ ಸೇರಿದ ಕ್ವಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಬೆಂಗಳೂರು ಸಮೀಪದ ಕಲ್ಲು ಕ್ವಾರಿಯಲ್ಲಿ ಘೋರ ದುರಂತ – ಬಂಡೆ ಕುಸಿದು 7 ಕಾರ್ಮಿಕರು ಸಾವು

2 ದಿನಗಳ ಹಿಂದೆ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಂಪ್ರೆಸ್ಸರ್ ಟ್ರ್ಯಾಕ್ಟರ್ ಆಯತಪ್ಪಿ ಸುಮಾರು 30 ಅಡಿ ಆಳಕ್ಕೆ ಬಿದ್ದ ಪರಿಣಾಮ ನಾಗೇಂದ್ರ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಾಗೇಂದ್ರ ಮೃತಪಟ್ಟಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಇದನ್ನೂ ಓದಿ: ಕಲ್ಲು ಕ್ವಾರಿ ದುರಂತ – ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ: ಹೆಚ್‌ಡಿಕೆ
ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಹಿರೇನಾಗವಲ್ಲಿ ಗ್ರಾಮದ ಮುನಿರಾಜು ಎಂಬುವವರ ಬಳಿ ನಾಗೇಂದ್ರ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
