– ಬಾಂಗ್ಲಾದೇಶದವರ ರಕ್ಷಣೆ ನಡೆಯುತ್ತಿದೆ
– ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು: ರಾಮನಗರದಲ್ಲಿ (Ramangara) ಚೌಟ್ರಿಯಲ್ಲಿ ಕುಳಿತು ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ ಎಂದು ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಅಕ್ರಮಗಳ ಕುರಿತು ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಗೃಹ ಸಚಿವರಿಗೆ ದೂರು ನೀಡುವುದಾಗಿ ತಿಳಿಸಿದರು.
ರಾಮನಗರದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಭಾರೀ ಲೋಪವಾಗುತ್ತಿದೆ. ನಿಯಮಗಳ ಪ್ರಕಾರ ಬಿಎಲ್‌ಒ (BLO)ಗಳು ಮನೆ ಮನೆಗೆ ತೆರಳಿ ಈ ಕಾರ್ಯ ಮಾಡಬೇಕು. ಆದರೆ, ರಾಮನಗರದಲ್ಲಿ ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರೇರಣೆಯಿಂದ ಬಿಎಲ್‌ಒಗಳು ಚೌಟ್ರಿಯೊಂದರಲ್ಲಿ ಕುಳಿತು ಒಂದು ನಿರ್ದಿಷ್ಟ ಸಮುದಾಯದ ಅರ್ಜಿಗಳನ್ನು ಭರ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೀಡಿಯೋ ಸಾಕ್ಷ್ಯವನ್ನೂ ಬಿಡುಗಡೆ ಮಾಡಿದರು.

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಗ್ಯಾರಂಟಿ ಯೋಜನೆಗಳು ಸಿಗುವುದಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಜನರಲ್ಲಿ ಜಾಗೃತಿ ಮೂಡಿಸುವ ನೆಪದಲ್ಲಿ ಮೊದಲ ಎಸ್‌ಐಆರ್‌ಗೆ ಮಾಹಿತಿ ನೀಡಿದ್ದರು. ಆದರೆ ಈಗ ಅವರದ್ದೇ ಪ್ರೇರಣೆಯಿಂದ ಕಳ್ಳ ಮತಗಳನ್ನು ಸೃಷ್ಟಿಸಲಾಗುತ್ತಿದೆ. ಅಕ್ರಮ ಎಸಗಿ 2028ರ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಈ ಮೂಲಕ ವ್ಯವಸ್ಥಿತ ಸ್ಕೆಚ್ ಹಾಕಲಾಗುತ್ತಿದೆ ಎಂದು ಹೆಚ್‌ಡಿಕೆ ಆಕ್ರೋಶ ಹೊರಹಾಕಿದರು.
ರಾಮನಗರ ಭಾಗದಲ್ಲಿ ಈಗಾಗಲೇ ಸುಮಾರು 8 ರಿಂದ 10 ಸಾವಿರ ಬಾಂಗ್ಲಾದೇಶದಿಂದ(Bangladesh) ಬಂದಿರುವ ಅಕ್ರಮ ವಲಸಿಗರಿದ್ದಾರೆ. ಈಗ ನಡೆಯುತ್ತಿರುವ ಅಕ್ರಮಗಳ ಮೂಲಕ ಈ ವಲಸಿಗರನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ. ಇಂತಹ ಕಳ್ಳ ಮತಗಳನ್ನು ತಕ್ಷಣವೇ ರದ್ದು ಮಾಡಬೇಕು ಎಂದು ಅವರು ಒತ್ತಾಯಿಸಿದರು. ಇದನ್ನೂ ಓದಿ: ಸಿಕ್ಕಸಿಕ್ಕವರ ಮೇಲೆ ಹುಚ್ಚುನಾಯಿ ದಾಳಿ – ಇಬ್ಬರು ಮಕ್ಕಳು ಸೇರಿ 8 ಮಂದಿಗೆ ಗಾಯ

ರಾಮನಗರದಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಅಲ್ಲಿನ ಜಿಲ್ಲಾಧಿಕಾರಿಗಳು ಮತ್ತು ಇತರ ಸರ್ಕಾರಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ಮೇಲೂ ಕಠಿಣ ಕ್ರಮ ಜರುಗಿಸಬೇಕು ಎಂದರು. ಇದನ್ನೂ ಓದಿ: 15 ದಾಖಲೆ ಸಲ್ಲಿಸಿದರೂ `ಭಾರತೀಯ’ ಎಂದು ನಿರೂಪಿಸುವಲ್ಲಿ ವಿಫಲನಾದ ಕೂಲಿ ಕಾರ್ಮಿಕ
