ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಇರಾನ್‌ನ (Iran) ‘ಪಿಕ್‌ಆಕ್ಸ್ ಪರ್ವತ’ (Pickaxe Mountain) ಎಂಬ ಹೆಸರು ಮತ್ತೆ ವಿಶ್ವದ ಗಮನ ಸೆಳೆದಿದೆ. ಹೊರನೋಟಕ್ಕೆ ಸಾಮಾನ್ಯ ಪರ್ವತದಂತೆ ಕಾಣುವ ಈ ಪ್ರದೇಶದೊಳಗೆ ಅತ್ಯಂತ ಸುರಕ್ಷಿತ ಭೂಗತ ಅಣು ಸಂಕೀರ್ಣವಿದೆ ಎಂದು ಅಮೆರಿಕ ಮತ್ತು ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳು ನಂಬಿವೆ. ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈ ತಾಣವನ್ನು ಗುರಿಯಾಗಿಸುವ ಬಗ್ಗೆ ನೀಡಿರುವ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಹಾಗಿದ್ರೆ ಇರಾನ್‌ಗೆ ಈ ಪರ್ವತ ಏಕೆ ಅಷ್ಟೊಂದು ಮಹತ್ವದ್ದು? ಇದರ ನಿರ್ಮಾಣದ ಹಿಂದಿನ ಇತಿಹಾಸವೇನು? ಈ ಭೂಗತ ಕೇಂದ್ರದಲ್ಲಿ ಏನಿದೆ? ಇದರ ಮೇಲೆ ದಾಳಿ ನಡೆದರೆ ಜಾಗತಿಕ ರಾಜಕೀಯ ಮತ್ತು ಮಧ್ಯಪ್ರಾಚ್ಯದ ಭದ್ರತೆ ಮೇಲೆ ಯಾವ ರೀತಿಯ ಪರಿಣಾಮ ಬೀಳಬಹುದು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಪಿಕ್‌ಆಕ್ಸ್ ಪರ್ವತ ಎಂದರೇನು?
ಪಿಕ್‌ಆಕ್ಸ್ ಪರ್ವತವು ಇರಾನ್‌ನ ಇಸ್ಫಹಾನ್ ಪ್ರಾಂತ್ಯದ ನತಾಂಜ್ ಅಣು ಕೇಂದ್ರದ ಸಮೀಪದಲ್ಲಿರುವ ಭೂಗತ ಸುರಂಗ ಸಂಕೀರ್ಣವಾಗಿದೆ. ಇದು ಅಧಿಕೃತ ಹೆಸರು ಅಲ್ಲ. ಈ ಪರ್ವತದ ನಿಜವಾದ ಹೆಸರು ಕುಹ್-ಎ-ಕೊಲಾಂಗ್ ಗಾಜ್ ಲಾ. ಆದರೆ ಉಪಗ್ರಹ ಚಿತ್ರಗಳಲ್ಲಿ ಪರ್ವತವನ್ನು ಕೊಡಲಿಯಿಂದ ಕೊರೆದಂತಿರುವ ಸುರಂಗಗಳ ನಿರ್ಮಾಣ ಕಂಡುಬಂದ ಕಾರಣ ಪಾಶ್ಚಾತ್ಯ ಗುಪ್ತಚರ ಸಂಸ್ಥೆಗಳು ಇದಕ್ಕೆ ʼಪಿಕ್‌ಆಕ್ಸ್ ಮೌಂಟನ್’ ಎಂಬ ಹೆಸರಿಟ್ಟವು. ಈ ಹೆಸರೇ ಈಗ ಜಾಗತಿಕವಾಗಿ ಹೆಚ್ಚು ಪರಿಚಿತವಾಗಿದೆ.
ಈ ಪರ್ವತ ಎಲ್ಲಿದೆ?
ಈ ಪರ್ವತವು ಇರಾನ್ ರಾಜಧಾನಿ ತೆಹರಾನ್‌ನಿಂದ ಸುಮಾರು 220 ಕಿಲೋಮೀಟರ್ ದಕ್ಷಿಣಕ್ಕೆ ಹಾಗೂ ನತಾಂಜ್ ಅಣು ಸಂಕೀರ್ಣದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ನತಾಂಜ್ ಇರಾನ್‌ನ ಪ್ರಮುಖ ಯುರೇನಿಯಂ ಸಂವರ್ಧನಾ ಕೇಂದ್ರವಾಗಿರುವುದರಿಂದ ಅದರ ಪಕ್ಕದಲ್ಲೇ ಈ ಭೂಗತ ಸಂಕೀರ್ಣ ನಿರ್ಮಾಣವಾಗಿರುವುದು ಅದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಪಿಕ್‌ಆಕ್ಸ್ ಪರ್ವತದ ಇತಿಹಾಸ:
2002ರಲ್ಲಿ ಇರಾನ್‌ನ ನತಾಂಜ್ ಅಣು ಕೇಂದ್ರದ ಬಗ್ಗೆ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ಬಹಿರಂಗವಾಯಿತು. ಬಳಿಕ ಇರಾನ್‌ನ ಅಣು ಕಾರ್ಯಕ್ರಮದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ನಿಗಾ ಆರಂಭವಾಯಿತು. 2010ರಲ್ಲಿ ಸ್ಟಕ್ಸ್‌ನೆಟ್ ಸೈಬರ್ ದಾಳಿ ಹಾಗೂ ನಂತರ ನಡೆದ ಸ್ಫೋಟಗಳು ಮತ್ತು ವಿಧ್ವಂಸಕ ಕೃತ್ಯಗಳಿಂದ ನತಾಂಜ್ ಕೇಂದ್ರಕ್ಕೆ ಹಾನಿಯಾಯಿತು. ಈ ಘಟನೆಗಳ ನಂತರ ಇರಾನ್ ತನ್ನ ಪ್ರಮುಖ ಅಣು ಮೂಲಸೌಕರ್ಯವನ್ನು ಪರ್ವತದ ಆಳಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿತು. ಸುಮಾರು 2020ರಿಂದ ಪಿಕ್‌ಆಕ್ಸ್ ಪರ್ವತದೊಳಗಿನ ಭೂಗತ ಸುರಂಗ ನಿರ್ಮಾಣ ವೇಗ ಪಡೆದುಕೊಂಡಿತು.
ಪರ್ವತದೊಳಗೆ ಏನಿದೆ?
ಇರಾನ್ ಇದುವರೆಗೆ ಪಿಕ್‌ಆಕ್ಸ್ ಪರ್ವತದೊಳಗಿನ ನಿರ್ಮಾಣದ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಅಮೆರಿಕ, ಇಸ್ರೇಲ್ ಹಾಗೂ ಪಾಶ್ಚಾತ್ಯ ಗುಪ್ತಚರ ಸಂಸ್ಥೆಗಳ ಅಂದಾಜಿನ ಪ್ರಕಾರ, ಇಲ್ಲಿ ಅತ್ಯಾಧುನಿಕ ಯುರೇನಿಯಂ ಸಂವರ್ಧನಾ ಸೆಂಟ್ರಿಫ್ಯೂಜ್‌ಗಳು, ಅಣು ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು, ಭೂಗತ ನಿಯಂತ್ರಣ ಕೇಂದ್ರಗಳು ಹಾಗೂ ಸಂವೇದನಾಶೀಲ ಅಣು ವಸ್ತುಗಳ ಸಂಗ್ರಹಣಾ ವ್ಯವಸ್ಥೆ ಇರಬಹುದು. ಇತ್ತೀಚಿನ ವರದಿಗಳ ಪ್ರಕಾರ, ನತಾಂಜ್‌ನಲ್ಲಿದ್ದ ಸಾವಿರಾರು ಸೆಂಟ್ರಿಫ್ಯೂಜ್‌ಗಳನ್ನು ಈ ಪರ್ವತದೊಳಗೆ ಸ್ಥಳಾಂತರಿಸಿರುವ ಸಾಧ್ಯತೆಯಿದೆ. ಆದರೆ ಈ ಮಾಹಿತಿಯನ್ನು ದೃಢೀಕರಿಸಲಾಗಿಲ್ಲ.
ಈ ಪರ್ವತ ಏಕೆ ನಿರ್ಮಿಸಲಾಯಿತು?
ಇರಾನ್‌ನ ಅಣು ಕೇಂದ್ರಗಳು ಹಲವು ಬಾರಿ ಸೈಬರ್ ದಾಳಿ, ಸ್ಫೋಟ ಹಾಗೂ ವೈಮಾನಿಕ ದಾಳಿಯ ಗುರಿಯಾಗಿದ್ದವು. ಇದರಿಂದ ಪಾಠ ಕಲಿತ ಇರಾನ್ ತನ್ನ ಅತ್ಯಂತ ಪ್ರಮುಖ ಅಣು ಮೂಲಸೌಕರ್ಯವನ್ನು ಭೂಗತ ಸುರಂಗಗಳಲ್ಲಿ ನಿರ್ಮಿಸಲು ಆರಂಭಿಸಿತು. ಪರ್ವತದ ಆಳದಲ್ಲಿ ನಿರ್ಮಾಣ ಮಾಡಿದರೆ ವೈಮಾನಿಕ ದಾಳಿಯಿಂದ ಹೆಚ್ಚಿನ ರಕ್ಷಣೆ ದೊರೆಯುತ್ತದೆ ಎಂಬುದು ಇದರ ಹಿಂದಿನ ಪ್ರಮುಖ ಕಾರಣವಾಗಿದೆ.
ಪರ್ವತ ಎಷ್ಟು ಆಳದಲ್ಲಿದೆ?
ತಜ್ಞರ ಅಂದಾಜಿನ ಪ್ರಕಾರ, ಈ ಭೂಗತ ಸಂಕೀರ್ಣವು ಸುಮಾರು 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಆಳದಲ್ಲಿ ನಿರ್ಮಾಣವಾಗಿದೆ. ಕೆಲವು ವಿಶ್ಲೇಷಕರು ಇದು ಅಮೆರಿಕದ ಅತ್ಯಂತ ಶಕ್ತಿಶಾಲಿ GBU-57 ಬಂಕರ್ ಬಸ್ಟರ್ ಬಾಂಬ್‌ಗಳಿಗೂ ದೊಡ್ಡ ಸವಾಲಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಪಿಕ್‌ಆಕ್ಸ್ ಪರ್ವತವನ್ನು ಜಗತ್ತಿನ ಅತ್ಯಂತ ಸುರಕ್ಷಿತ ಭೂಗತ ಅಣು ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ.
ಇರಾನ್‌ಗೆ ಇದರ ಮಹತ್ವವೇನು?
ಇರಾನ್ ತನ್ನ ಅಣು ಕಾರ್ಯಕ್ರಮವು ವಿದ್ಯುತ್ ಉತ್ಪಾದನೆ, ವೈದ್ಯಕೀಯ ಸಂಶೋಧನೆ ಹಾಗೂ ವೈಜ್ಞಾನಿಕ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳುತ್ತದೆ. ಆದರೆ ತನ್ನ ಪ್ರಮುಖ ತಾಂತ್ರಿಕ ಸಾಮರ್ಥ್ಯವನ್ನು ರಕ್ಷಿಸಲು ಭೂಗತ ಸಂಕೀರ್ಣಗಳು ಅಗತ್ಯವೆಂದು ವಾದಿಸುತ್ತದೆ. ಆದ್ದರಿಂದ ಪಿಕ್‌ಆಕ್ಸ್ ಪರ್ವತವು ಇರಾನ್‌ನ ರಾಷ್ಟ್ರೀಯ ಭದ್ರತೆ ಮತ್ತು ಅಣು ಕಾರ್ಯಕ್ರಮದ ಪ್ರಮುಖ ಆಸ್ತಿಯಾಗಿದೆ.

ಅಮೆರಿಕ ಮತ್ತು ಇಸ್ರೇಲ್ ಏಕೆ ಆತಂಕದಲ್ಲಿವೆ?
ಅಮೆರಿಕ ಹಾಗೂ ಇಸ್ರೇಲ್‌ನ ಆರೋಪದಂತೆ, ಇರಾನ್ ತನ್ನ ಅಣು ಕಾರ್ಯಕ್ರಮದ ಮೂಲಕ ಭವಿಷ್ಯದಲ್ಲಿ ಅಣ್ವಸ್ತ್ರ ತಯಾರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು. ಪಿಕ್‌ಆಕ್ಸ್ ಪರ್ವತದೊಳಗಿನ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿರುವುದು ಮತ್ತು ಅಂತರರಾಷ್ಟ್ರೀಯ ತಪಾಸಣೆಗೆ ಸೀಮಿತ ಅವಕಾಶ ದೊರಕಿರುವುದು ಈ ಅನುಮಾನಗಳಿಗೆ ಕಾರಣವಾಗಿದೆ. ಇರಾನ್ ಮಾತ್ರ ಈ ಆರೋಪಗಳನ್ನು ನಿರಾಕರಿಸುತ್ತಿದೆ.
ಡೊನಾಲ್ಡ್ ಟ್ರಂಪ್ ಏಕೆ ಈ ಪರ್ವತವನ್ನು ಗುರಿಯಾಗಿಸಿದ್ದಾರೆ?
ಇತ್ತೀಚೆಗೆ ಡೊನಾಲ್ಡ್ ಟ್ರಂಪ್, ಪಿಕ್‌ಆಕ್ಸ್ ಪರ್ವತವು ಇರಾನ್‌ನ ಅಣು ಕಾರ್ಯಕ್ರಮದ ಪ್ರಮುಖ ಕೇಂದ್ರವಾಗಿದೆ ಎಂದು ಹೇಳಿದ್ದು, ಅಗತ್ಯವಿದ್ದರೆ ಅಮೆರಿಕ ಇದನ್ನು ಗುರಿಯಾಗಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಯು ಇಸ್ರೇಲ್‌ನ ಗುಪ್ತಚರ ವರದಿಗಳ ಬಳಿಕ ಬಂದಿದ್ದು, ಇರಾನ್ ತನ್ನ ಪ್ರಮುಖ ಅಣು ಸಾಧನಗಳನ್ನು ಈ ಪರ್ವತಕ್ಕೆ ಸ್ಥಳಾಂತರಿಸಿದೆ ಎಂಬ ಅನುಮಾನವನ್ನು ಅಮೆರಿಕ ಗಂಭೀರವಾಗಿ ಪರಿಗಣಿಸುತ್ತಿದೆ.
ಈ ಪರ್ವತದ ಮೇಲೆ ದಾಳಿ ನಡೆಸುವುದು ಏಕೆ ಕಷ್ಟ?
ಪರ್ವತದೊಳಗಿನ ಸುರಂಗಗಳು ಘನ ಬಂಡೆಗಳ ಅಡಿಯಲ್ಲಿ ನಿರ್ಮಾಣವಾಗಿರುವುದರಿಂದ ಸಾಮಾನ್ಯ ಕ್ಷಿಪಣಿ ಅಥವಾ ಬಾಂಬ್‌ಗಳಿಂದ ಇದನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದು ಅತ್ಯಂತ ಕಷ್ಟ. ದಾಳಿ ನಡೆದರೂ ಪ್ರವೇಶ ದ್ವಾರಗಳಿಗೆ ಮಾತ್ರ ಹಾನಿಯಾಗುವ ಸಾಧ್ಯತೆ ಇದೆ ಎಂದು ಹಲವು ಸೇನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
IAEA ಪಾತ್ರವೇನು?
ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಇರಾನ್‌ನ ಅಣು ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಆದರೆ ಪಿಕ್‌ಆಕ್ಸ್ ಪರ್ವತದೊಳಗಿನ ಸಂಪೂರ್ಣ ಸಂಕೀರ್ಣಕ್ಕೆ ಸಂಸ್ಥೆಗೆ ನಿರಂತರ ಪ್ರವೇಶ ದೊರೆತಿಲ್ಲ. ಇದೇ ಕಾರಣಕ್ಕೆ ಈ ತಾಣದ ಬಗ್ಗೆ ಹಲವು ಪ್ರಶ್ನೆಗಳು ಇನ್ನೂ ಉತ್ತರಿಸದೇ ಉಳಿದಿವೆ.
ದಾಳಿ ನಡೆದರೆ ಜಗತ್ತಿನ ಮೇಲೆ ಏನು ಪರಿಣಾಮ?
ಪಿಕ್‌ಆಕ್ಸ್ ಪರ್ವತದ ಮೇಲೆ ಅಮೆರಿಕ ದಾಳಿ ನಡೆಸಿದರೆ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ಸಾಗಣೆ ಅಸ್ತವ್ಯಸ್ತವಾಗಬಹುದು. ಇದರಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಜೊತೆಗೆ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀಳಬಹುದು. ಜೊತೆಗೆ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಅಪಾಯವಿದೆ.
