ಆಶಾ ಕಾರ್ಯಕರ್ತೆಯರ ಹೋರಾಟ ಸತತ 8ನೇ ದಿನಕ್ಕೆ ಕಾಲಿಟ್ಟಿದೆ. ಈ ಕುರಿತು ಹಿರಿಯ ನಟಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು, ಅಂಥವರ ಜೀವನಕ್ಕೆ ಮೂಲಭೂತ ಸೌಕರ್ಯ ಪೂರೈಕೆ ಮಾಡದಿದ್ದರೆ ಅದು ಅನ್ಯಾಯ ಆಗುತ್ತದೆ ಎಂದಿದ್ದಾರೆ.
ಬೆAಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ 8ನೇ ವರ್ಷದ ಪುಣ್ಯಸ್ಮರಣೆ ಕಾರ್ಯ ನೆರವೇರಿಸಿದ ಬಳಿಕ ಮಾತನಾಡಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರ ನಿರಂತರ ಬಿರುಸಿನ ಪ್ರತಿಭಟನೆ ನಡೆಯುತ್ತಿದೆ. ಈ ಬಗ್ಗೆ ಸುಮಲತಾ ಇನ್ಸ್ಟಾಗ್ರಾಂನಲ್ಲಿ ಅವರಿಗೆ ಬೆಂಬಲ ಸೂಚಿಸಿ ಪೋಸ್ಟ್ ಹಾಕಿಕೊಂಡಿದ್ದರು. ಇದೀಗ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾನು ಎಂಪಿ ಇದ್ದಾಗಲೂ ಆಶಾ ಕಾರ್ಯಕರ್ತೆಯರ ಬಗ್ಗೆ ಮಾತನಾಡಿದ್ದೆ, ಆಶಾ ಕಾರ್ಯಕರ್ತರ ನೋವು ಹೃದಯಕ್ಕೆ ಹತ್ತಿರವಾಗುವ ವಿಚಾರ. ಅವರ ಕಷ್ಟಗಳನ್ನ ನಾನು ಕೋವಿಡ್ ಸಮಯದಲ್ಲಿ ಕಣ್ಣಾರೆ ನೋಡಿದ್ದೇನೆ. ಅವರು ಪ್ರಾಣಕ್ಕೆ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದವರು. ಮನೆ ಮಕ್ಕಳು ಎಲ್ಲಾ ಬಿಟ್ಟು ಬೀದಿಗೆ ಇಳಿದಿದ್ದಾರೆ. ಅಂಥವರ ಜೀವನಕ್ಕೆ ಮೂಲಭೂತ ಸೌಕರ್ಯ ಪೂರೈಕೆ ಮಾಡದಿದ್ದರೆ ಅದು ಅನ್ಯಾಯ ಆಗುತ್ತದೆ. ಅವರು ಕೇಳಿದ್ದನ್ನೆಲ್ಲಾ ಕೊಡೋದಕ್ಕೆ ಆಗದೇ ಇದ್ದರೂ, ಅವರ ಜೊತೆ ಸಂಧಾನ ಮಾಡಿಕೊಂಡು ಕೆಲವೇ ಕೆಲವು ಬೇಡಿಕೆಗಳನ್ನಾದರೂ ಪೂರೈಸಬೇಕು, ಅವರಿಗೆ ನ್ಯಾಯ ಕೊಡಬೇಕು ಅನ್ನೋದು ನನ್ನ ಮನವಿ ಎಂದು ಸರ್ಕಾರಕ್ಕೆ ಸುಮಲತಾ ಆಗ್ರಹಿಸಿದ್ದಾರೆ.
ಹಲವು ಬೇಡಿಕೆಗಳನ್ನ ಮುಂದಿಟ್ಟುಕೊAಡು ಆಶಾ ಕಾರ್ಯಕರ್ತೆಯರು ಅನಿರ್ಧಿಷ್ಟಾವಧಿಯ ಪ್ರತಿಭಟನೆ ಮುಂದುವರೆಸಿದ್ದು, ಅನೇಕ ನಟ ನಟಿಯರೂ ಕೂಡ ಸಪೋರ್ಟ್ಗೆ ನಿಂತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಸುಮಲತಾ ಅಂಬರೀಶ್ ಮಾತನಾಡಿ ಆಶಾ ಕಾರ್ಯಕರ್ತೆಯರ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಲ್ಲದೇ ಸರ್ಕಾರ ಅವರ ಸಮಸ್ಯೆ ಬಗೆಹರಿಸಬೇಕೆಂದು ಅಭಿಪ್ರಾಯ ಹೇಳಿಕೊಂಡಿದ್ದಾರೆ.
