ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದ ಪಟ್ಟಣಗೆರೆ ಶೆಡ್ನ ಇಬ್ಬರು ಕೆಲಸಗಾರರು(Pattanagere Shed Workers) ನ್ಯಾಯಾಲಯದಲ್ಲಿ ತಮ್ಮ ಮೊದಲಿನ ಹೇಳಿಕೆಯಿಂದ ಹಿಂದೆ ಸರಿದು ಪ್ರತಿಕೂಲ ಸಾಕ್ಷಿಗಳಾಗಿ (Hostile Witnesses) ಬದಲಾಗಿದ್ದಾರೆ.
ಪಟ್ಟಣಗೆರೆ ಶೆಡ್ನಲ್ಲಿ ಪಾರ್ಕಿಂಗ್ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷದರ್ಶಿ ಮಲ್ಲಿಕಾರ್ಜುನ್ ಹಾಗೂ ಶೆಡ್ನಲ್ಲಿ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದ ವಿಜಯ್ ಕುಮಾರ್ ಇಂದು ಕೋರ್ಟ್ ವಿಚಾರಣೆ ವೇಳೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.
ಕೃತ್ಯ ನಡೆದ ದಿನ ತಾನು ಶೆಡ್ನಲ್ಲಿ ಏನನ್ನೂ ನೋಡಿಲ್ಲ, ನನಗೆ ಈ ಘಟನೆಯ ಬಗ್ಗೆ ಏನೂ ಗೊತ್ತಿಲ್ಲ ಎಂದು ಪ್ರತ್ಯಕ್ಷ ಸಾಕ್ಷಿಯಾಗಿದ್ದ ಮಲ್ಲಿಕಾರ್ಜುನ್ ಉಲ್ಟಾ ಹೊಡೆದಿದ್ದಾರೆ.
ನನಗೇನೂ ಗೊತ್ತಿಲ್ಲ. ನಾನು ಕಚೇರಿಯಿಂದ ಹೊರಗೆ ಬಂದೇ ಇಲ್ಲ. ಹೊರಗೆ ನಡೆದಿರುವ ಘಟನೆಯ ಅರಿವಿಲ್ಲ, ನಾನ್ಯಾರನ್ನೂ ನೋಡಿಲ್ಲ ಎಂದು ವಿಜಯ್ ಕುಮಾರ್ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಇದರೊಂದಿಗೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ನಾಲ್ವರು ಸಾಕ್ಷಿಗಳು ಉಲ್ಟಾ ಹೊಡೆದಂತಾಗಿದೆ.
ಈ ಹಿಂದೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಕಿರಣ್ ಹಾಗೂ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಕೂಡ ಶೆಡ್ನಲ್ಲಿ ಏನೂ ನಡೆದಿಲ್ಲ ಎಂದು ಹೇಳುವ ಮೂಲಕ ಪ್ರತಿಕೂಲ ಸಾಕ್ಷಿಗಳಾಗಿದ್ದರು. ಇದೀಗ ಮಲ್ಲಿಕಾರ್ಜುನ್ ಮತ್ತು ವಿಜಯ್ ಕುಮಾರ್ ಕೂಡ ಅದೇ ಹಾದಿ ಹಿಡಿದಿದ್ದು, ಪಟ್ಟಣಗೆರೆ ಶೆಡ್ನ ಒಟ್ಟು ನಾಲ್ವರು ಕೆಲಸಗಾರರು ಪ್ರಾಸಿಕ್ಯೂಷನ್ಗೆ ಶಾಕ್ ನೀಡಿದ್ದಾರೆ.
ಪಾಟಿಸವಾಲಿಗೆ ಮನವಿ:
ಸಾಕ್ಷಿಗಳಾದ ಮಲ್ಲಿಕಾರ್ಜುನ್ ಹಾಗೂ ವಿಜಯ್ ಕುಮಾರ್ ಅವರು ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿರುವ ಹಿನ್ನೆಲೆಯಲ್ಲಿ, ಇಬ್ಬರನ್ನೂ ಪ್ರತಿಕೂಲ ಸಾಕ್ಷಿಗಳು ಎಂದು ಪರಿಗಣಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಪ್ರತಿಕೂಲ ಸಾಕ್ಷಿಗಳ ಪಾಟಿಸವಾಲಿಗೆ (Cross-examination) ಡಿಸೆಂಬರ್ 3 ರಂದು ಅವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದೆ.
