ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪುತ್ರಿಯ (Akhilesh Yadav daughter) ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಹಾಕುತ್ತಿರುವುದು ಖಂಡನೀಯ. ಅಷ್ಟೇ ಅಲ್ಲದೇ, ಈ ರೀತಿ ಕಾಮೆಂಟ್ ಮಾದುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹೇಳಿದ್ದೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಂಜಗಢದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಯಾರ ಮನೆ ಹೆಣ್ಣು ಮಕ್ಕಳಾದರೂ ಸರಿ, ಈ ರೀತಿ ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು. ಹೆಣ್ಣುಮಕ್ಕಳ ವಿರುದ್ಧದ ಇಂತಹ ಆಕ್ಷೇಪಾರ್ಹ ಮತ್ತು ಅಸಭ್ಯ ಕಾಮೆಂಟ್ ಹಾಕುವವರನ್ನ ಕ್ಷಮಿಸಲು ಸಾಧ್ಯವಿಲ್ಲ. ನಾವು ಎಲ್ಲರ ಮಗಳು, ಎಲ್ಲರ ಸಹೋದರಿಯೂ ಕೂಡ ಒಂದೇ ಎನ್ನುವ ಮೌಲ್ಯಗಳೊಂದಿಗೆ ಬೆಳೆದಿದ್ದೇವೆ. ಇದರಲ್ಲಿ ಯಾವುದೇ ಭೇದಭಾವ ಮಾಡಿಲ್ಲ ಎಂದಿದ್ದಾರೆ.
ಇತ್ತೀಚಿಗೆ ಅಖಿಲೇಶ್ ಯಾದವ್ ಅವರ ಪುತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಕಾಮೆಂಟ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಖಿಲೇಶ್ ಜೀ, ನೀವು ಇತರರಿಗೆ ಸಲಹೆ ನೀಡುತ್ತೀರಿ. ಆದರೆ ನಿಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರು ಸಭ್ಯ ಭಾಷೆಯನ್ನು ಬಳಸುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಈ ವಿಚಾರವನ್ನು ನೀವು ಅವರಿಗೆ ಅರ್ಥ ಮಾಡಿಸಬೇಕು. ಒಂದು ವೇಳೆ ನಿಮಗೆ ಅರ್ಥ ಮಾಡಿಸಲು ಸಾಧ್ಯವಾಗದಿದ್ದರೆ ನಮ್ಮ ಹತ್ತಿರ ಕಳುಹಿಸಿಕೊಡಿ. ನವು ಅವರಿಗೆ ಅರ್ಥ ಮಾಡಿಸುವ ರೀತಿಯಲ್ಲಿ ಮಾಡಿಸುತ್ತೇವೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: ವಾಹನಗಳಲ್ಲಿ 100% ಎಥೆನಾಲ್ ಬಳಕೆ ಗಡ್ಕರಿ ಸಹಿ – ಶೀಘ್ರವೇ ಟೊಯೋಟಾ, ಹ್ಯುಂಡೈ, ಎಂಜಿ ಕಾರುಗಳು ಬಿಡುಗಡೆ
ಅಖಿಲೇಶ್ ಯಾದವ್ ಅವರ ಪುತ್ರಿಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಮಾನಹಾನಿಕರ ಮತ್ತು ದುರುದ್ದೇಶಪೂರ್ವಕವಾಗಿ ಪೋಸ್ಟ್ ಮಾಡಿದ ಹಲವರ ವಿರುದ್ಧ ಕಾನ್ಪುರ ಪೊಲೀಸ್ ಕಮಿಷನರೇಟ್‌ನ ಸೈಬರ್ ಸೆಲ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವು ಸೋಶಿಯಲ್ ಮೀಡಿಯಾ ಬಳಕೆದಾರರು ಅಖಿಲೇಶ್ ಯಾದವ್ ಪುತ್ರಿಯ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಅತ್ಯಂತ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಪೋಸ್ಟ್ ಮಾಡಲಾಗಿರುವ ಆ ಫೋಟೋವನ್ನು ತಿರುಚಲಾಗಿದ್ದು, ಅದರಲ್ಲಿ ಹಂಚಿಕೊಳ್ಳಲಾಗಿರುವ ಎಲ್ಲಾ ವಿಷಯಗಳು ಕೂಡ ಸುಳ್ಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಇದನ್ನೂ ಓದಿ: ದೆಹಲಿಯಲ್ಲಿ ಬೆಂಕಿ ಅವಘಡಕ್ಕೆ ಮೂವರು ಬಲಿ; ಘಟನೆ ಆಕಸ್ಮಿಕವಲ್ಲ – ಸಿಸಿಟಿವಿ ದೃಶ್ಯಗಳಿಂದ ಸಂಚು ಬಯಲು
