ನವದೆಹಲಿ: ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ(Sringeri Assembly Election) ಅಂಚೆ ಮತಗಳ ಮರು ಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ(TD Rajegowda) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಮತ್ತೆ ತಾತ್ಕಾಲಿಕ ರಿಲೀಫ್ ದೊರೆತಿದೆ.
ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 10ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಈ ಹಿಂದಿನ ಮಧ್ಯಂತರ ಆದೇಶವೇ ಮುಂದುವರಿಯಲಿದೆ. ಇದರಿಂದಾಗಿ ರಾಜೇಗೌಡ ಅವರ ಶಾಸಕ ಸ್ಥಾನ ಸದ್ಯಕ್ಕೆ ಸುಭದ್ರವಾಗಿದೆ.
ಇಂದು ನಡೆದ ವಿಚಾರಣೆ ವೇಳೆ, ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್(DN Jeevaraj) ಅವರಿಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ನ್ಯಾಯಾಲಯವು ಅವಕಾಶ ನೀಡಿದೆ. ಮುಂದಿನ ವಿಚಾರಣೆ ನಡೆಯುವವರೆಗೂ ಹೈಕೋರ್ಟ್ ಆದೇಶಕ್ಕೆ ನೀಡಲಾಗಿದ್ದ ತಡೆ ಮುಂದುವರಿಯಲಿದೆ.
ಏನಿದು ಪ್ರಕರಣ?
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಜಯಗಳಿಸಿದ್ದರು. ಅಂಚೆ ಮತಗಳ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಬಿಜೆಪಿಯ ಡಿ.ಎನ್. ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಇನ್ಮುಂದೆ ಒಬ್ಬ ವ್ಯಕ್ತಿ ಹೆಸರಿಗೆ ಗರಿಷ್ಠ 9 ಸಿಮ್ – ರಿಯಲ್ ಟೈಮ್ ವೆರಿಫಿಕೇಷನ್ ಕಡ್ಡಾಯ
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ತಕ್ಷಣವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ, ರಾಜೇಗೌಡ ಅವರೇ ಶಾಸಕರಾಗಿ ಮುಂದುವರಿಯಲು ಮಧ್ಯಂತರ ಆದೇಶ ನೀಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು 2023 ಹಾಗೂ 2026ರ ಮತ ಎಣಿಕೆಯ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಸೆಪ್ಟೆಂಬರ್ 10ರಂದು ನಡೆಯಲಿರುವ ಮುಂದಿನ ವಿಚಾರಣೆ ವೇಳೆ ದಾಖಲೆಗಳ ಪರಿಶೀಲನೆ ಹಾಗೂ ವಾದ-ಪ್ರತಿವಾದ ಮುಂದುವರಿಯಲಿದೆ.

