– 69 ವರ್ಷಗಳ ಹಿಂದಿನ ಸ್ವಾಧೀನದ ನೆಪವೊಡ್ಡಿ ಗಡಿ ಗುರುತಿಸಲು ಬಂದ ಅಧಿಕಾರಿಗಳು
ಬೆಳಗಾವಿ: ಸುಮಾರು ನಾಲ್ಕೂವರೆ ದಶಕಗಳಿಂದ ಯಾವುದೇ ಅಡೆತಡೆ ಇಲ್ಲದೆ ಸಾಗುವಳಿ ಮಾಡಿಕೊಂಡು ಬಂದಿದ್ದ ಜಮೀನಿಗೆ ಏಕಾಏಕಿ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳು ನಾವೇ ಮಾಲೀಕರು ಎಂದು ಎಂಟ್ರಿ ಕೊಟ್ಟಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ(Raybag) ತಾಲೂಕಿನ ಪಾಲಬಾವಿ ಗ್ರಾಮದಲ್ಲಿ ನಡೆದಿದೆ.
ಬರೋಬ್ಬರಿ 69 ವರ್ಷಗಳ ಹಿಂದೆ ಈ ಜಾಗವನ್ನು(Land) ಸ್ವಾಧೀನಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ವಾದಿಸುತ್ತಿದ್ದರೆ, ದಿಢೀರ್ ಬೆಳವಣಿಗೆಯಿಂದ ಕಂಗಾಲಾದ ರೈತರು(Farmers) ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಪಾಲಬಾವಿ ಗ್ರಾಮದ ಸರ್ವೆ ನಂಬರ್ 221 ಹಾಗೂ 225ರಲ್ಲಿ ಬರುವ 7 ಎಕರೆ 28 ಗುಂಟೆ ಜಮೀನಿನ ವಿಚಾರವೇ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. 1957ರಲ್ಲಿ ಹಿಡಕಲ್ ಜಲಾಶಯದಿಂದ ಬಾಗಲಕೋಟೆಯವರೆಗೆ ಕಾಲುವೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ವಸ್ತುಗಳನ್ನು ಸಂಗ್ರಹಿಸಿಡಲು ಈ ಭೂಮಿಯನ್ನು ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು ಎಂದು PWD ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ. ಇದೀಗ 69 ವರ್ಷಗಳ ಬಳಿಕ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜಮೀನಿನ ಗಡಿ ಗುರುತಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಧಿಕಾರಿಗಳು ಗಡಿ ಗುರುತಿಸಲು ಮುಂದಾಗುತ್ತಿದ್ದಂತೆ 50ಕ್ಕೂ ಹೆಚ್ಚು ರೈತರು ಸ್ಥಳದಲ್ಲೇ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದರು. ಈ ವೇಳೆ ರೈತರ ವಿರೋಧವನ್ನು ಲೆಕ್ಕಿಸದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸರ್ವೆ ಕಾರ್ಯ ಮುಂದುವರಿಸಲು ನೆರವಾದರು.

1980ರಲ್ಲಿ ಧನಪಾಲ ನಾಯಿಕ ಎಂಬುವವರಿಂದ ಅಧಿಕೃತವಾಗಿ ಜಮೀನು ಖರೀದಿಸಿದ್ದು, ಕಳೆದ 45 ವರ್ಷಗಳಿಂದ ಯಾವುದೇ ತಕರಾರಿಲ್ಲದೆ ಸಾಗುವಳಿ ಮಾಡುತ್ತಿದ್ದೇವೆ. ಇಂದಿಗೂ ಪಹಣಿ (RTC) ನಮ್ಮ ಹೆಸರಲ್ಲೇ ಇದೆ ಎಂಬುದು ರೈತರ ವಾದ. ಇದನ್ನೂ ಓದಿ: ಮೂಡಾ 50:50 ಸೈಟು ಹಂಚಿಕೆ ಹಗರಣ – ಹಂಚಿಕೆಯಾಗಿದ್ದ ಎಲ್ಲಾ 1,100 ಸೈಟುಗಳು ತಕ್ಷಣದಿಂದಲೇ ರದ್ದು
ಕಳೆದ ಒಂದು ವರ್ಷದ ಹಿಂದೆ ಅಧಿಕಾರಿಗಳು ಅನಧಿಕೃತವಾಗಿ ಆರ್‌ಟಿಸಿ ದಾಖಲೆಗಳನ್ನು ಬದಲಾಯಿಸಿಕೊಂಡಿದ್ದು, ರಾಜಕೀಯ ಒತ್ತಡಕ್ಕೆ ಮಣಿದು ಬಡ ರೈತರ ಜಮೀನು ಕಬಳಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.
69 ವರ್ಷಗಳ ಹಿಂದೆ ಭೂಸ್ವಾಧೀನ ಮಾಡಿಕೊಂಡಿದ್ದರೆ ಅದು ಯಾರ ಹೆಸರಿನಿಂದ ಮಾಡಲಾಗಿದೆ ಎಂಬ ಸ್ಪಷ್ಟ ದಾಖಲೆಗಳನ್ನು ಅಧಿಕಾರಿಗಳು ಬಹಿರಂಗಪಡಿಸುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಈ ಜಮೀನಿನ ಹಗ್ಗಜಗ್ಗಾಟ ರಾಯಭಾಗ ನ್ಯಾಯಾಲಯದಲ್ಲಿದ್ದು, ಅಂತಿಮವಾಗಿ ನ್ಯಾಯಾಲಯದಿಂದ ಯಾವ ತೀರ್ಪು ಹೊರಬರಲಿದೆ ಎಂಬುದನ್ನು ಕಾದುನೋಡಬೇಕಿದೆ.

