– ಸುಮಾರು 2,000 ಕೋಟಿ ಮೌಲ್ಯದ ಸೈಟುಗಳು
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನ ಉಲ್ಲಂಘಿಸಿ ಮಾಡಲಾಗಿದ್ದ 50:50 ಬದಲಿ ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.
ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿಯು ನೀಡಿರುವ ವರದಿಯನ್ವಯ ಈ ಆದೇಶ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ 2023ರ ಮಾರ್ಚ್ 14ರ ನಿರ್ದೇಶನವನ್ನ ಉಲ್ಲಂಘಿಸಿ ಮಾಡಲಾದ ಎಲ್ಲಾ 50:50 ಬದಲಿ ನಿವೇಶನಗಳ ಹಂಚಿಕೆಯನ್ನ ರದ್ದುಪಡಿಸಿ ಆದೇಶ ಮಾಡಿದೆ. ಇದನ್ನೂ ಓದಿ: ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ: ಈಶ್ವರ ಖಂಡ್ರೆ ಮನವಿ
ನಿಯಮ ಉಲ್ಲಂಘಿಸಿ ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ ಬದಲಿ ನಿವೇಶನಗಳ ‘ಕ್ರಯಪತ್ರ’ಗಳನ್ನ (Sale Deed) ರದ್ದುಪಡಿಸಲು ಸಿವಿಲ್ ನ್ಯಾಯಾಲಯದಲ್ಲಿ ತಕ್ಷಣವೇ ದಾವೆ ಹೂಡುವುದು. ಇದುವರೆಗೆ ಕ್ರಯಪತ್ರವಾಗದ ಪ್ರಕರಣಗಳಲ್ಲಿ, ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ರಚನೆಯಾಗಿ ಸೂಕ್ತ ನಿರ್ದೇಶನ ಬರುವವರೆಗೂ ಪ್ರಾಧಿಕಾರದಿಂದ ಯಾವುದೇ ಕ್ರಯಪತ್ರಗಳನ್ನ ನೀಡದಂತೆ ಹೇಳಿದೆ. ಈಗಾಗಲೇ ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನೂ ತಡೆಹಿಡಿಯಲು ಮೈಸೂರು ಮಹಾನಗರ ಪಾಲಿಕೆ, ಸಂಬಂಧಪಟ್ಟ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿದೆ.

ಒಂದು ವೇಳೆ ಖಾತಾ ಆಗಿದ್ದಲ್ಲಿ, ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1976, ಕರ್ನಾಟಕ ಮುನಿಸಿಪಲ್ ಕಾಯ್ದೆ 1961 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರಡಿ ನಿಯಮಾನುಸಾರ ರದ್ದುಪಡಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸುವುದು. ಈ ಆದೇಶದ ಮೇರೆಗೆ ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿಯನ್ನು (Compliance Report) ಸರ್ಕಾರಕ್ಕೆ ತಕ್ಷಣವೇ ಸಲ್ಲಿಸಲು ಸೂಚಿಸಲಾಗಿದೆ.
ಸೂಚನೆ ಪಾಲನೆ ಮಾಡಲು ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 1,100, 50:50 ಬದಲಿ ನಿವೇಶನಗಳನ್ನು ರದ್ದುಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದರ ಮೌಲ್ಯ ಸರಿ ಸುಮಾರು 2,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ನಿಗದಿತ ಉದ್ದೇಶಕ್ಕೆ ಸರ್ಕಾರದ ಭೂಮಿ ಬಳಕೆ ಆಗದೇ ಹೋದ್ರೆ ಭೂಮಿ ವಾಪಸ್: ಪರಮೇಶ್ವರ್

