ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ(Nithin Gadkari) ಅವರು ವಾಹನಗಳಲ್ಲಿ 100% ಎಥೆನಾಲ್ (E100) ಇಂಧನ ಬಳಕೆಯನ್ನು ಕಾನೂನುಬದ್ಧಗೊಳಿಸುವ ನಿಯಮಾವಳಿಗಳ ಫೈಲ್‌ಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ (Nagpura) ನಡೆದ ಸಭೆಯೊಂದರಲ್ಲಿ ಗಡ್ಕರಿ ಈ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದ್ದಾರೆ. ದೇಶದಲ್ಲಿ 100% ಎಥೆನಾಲ್ (Ethanol) ಅನ್ನು ವಾಹನ ಇಂಧನವಾಗಿ ಬಳಸಲು ಇದ್ದ ಕಾನೂನು ಅಡೆತಡೆಗಳನ್ನು ನಿವಾರಿಸಿ, ಹೊಸ ನಿಯಮಾವಳಿಗಳನ್ನು ಅಂತಿಮಗೊಳಿಸಲಾಗಿದೆ. ಭಾರತವು ವಾರ್ಷಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಆಮದಿಗಾಗಿ ಸುಮಾರು 22 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಎಥೆನಾಲ್ ಬಳಕೆಯಿಂದ ಈ ದೊಡ್ಡ ಮೊತ್ತವನ್ನು ಉಳಿಸಬಹುದು ಎಂದು ಗಡ್ಕರಿ ತಿಳಿಸಿದ್ದಾರೆ.
ಮಾರುತಿ ಸುಜುಕಿ ಈಗಾಗಲೇ ತನ್ನ ವ್ಯಾಗನ್ ಆರ್ (WagonR) ಫ್ಲೆಕ್ಸ್-ಫ್ಯುಯೆಲ್ ಮಾದರಿಯನ್ನು ಪರಿಚಯಿಸಿದೆ. ಮುಂದಿನ ಒಂದೂವರೆ ತಿಂಗಳಲ್ಲಿ ಟೊಯೋಟಾ (Toyota), ಸುಜುಕಿ (Suzuki), ಹ್ಯುಂಡೈ (Hyundai) ಮತ್ತು ಎಂಜಿ (MG) ಕಂಪನಿಗಳು 100% ಎಥೆನಾಲ್‌ನಲ್ಲಿ ಓಡುವ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿವೆ ಎಂದು ತಿಳಿಸಿದರು.
ನಾನು ಮೊದಲ ಬಾರಿಗೆ 100% ಎಥೆನಾಲ್ ಇಂಧನದ ಬಗ್ಗೆ ಮಾತನಾಡಿದಾಗ ಜನರು ನನ್ನನ್ನು ನೋಡಿ ನಗುತ್ತಿದ್ದರು. ನನ್ನ ಕೆಲವು ಸ್ವಂತ ಸ್ನೇಹಿತರು ಕೂಡ ಈ ಆಲೋಚನೆಯನ್ನು ಟೀಕಿಸಿದ್ದರು. ಆದರೆ ನಾನು ಆ ಫೈಲ್‌ಗೆ ಸಹಿ ಹಾಕುವ ಮೂಲಕ ಆ ಕನಸನ್ನು ಇಂದು ಕಾನೂನುಬದ್ಧವಾಗಿ ನನಸು ಮಾಡಿದ್ದೇನೆ ಎಂದು ನಿತಿನ್ ಗಡ್ಕರಿ ಅವರು ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಎಥೆನಾಲ್ ಪೆಟ್ರೋಲ್‌ನಿಂದ ಮೈಲೇಜ್ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
#WATCH | Nagpur, Maharashtra: Union Minister Nitin Gadkari says, “Last night at 8 PM, I signed the file, finalising the regulations to legally authorise the use of 100% ethanol. I am delighted to share that I, along with Hardeep Singh Puri, had the opportunity to launch the 100%… pic.twitter.com/BDIyTZGZF4
— ANI (@ANI) June 13, 2026
ನಮಗೆ ದೇಶದಲ್ಲಿ ಇನ್ನು ಮುಂದೆ ಪೆಟ್ರೋಲ್ ಮುಖ ನೋಡುವುದು ಇಷ್ಟವಿಲ್ಲ, ಅದನ್ನು ಸಂಪೂರ್ಣವಾಗಿ ನಿಲ್ಲಿಸುವುದೇ ನಮ್ಮ ಗುರಿ. ಪೆಟ್ರೋಲ್ ಮತ್ತು ಡಿಸೇಲ್ ಬಳಕೆಯಿಂದ ದೇಶದಲ್ಲಿ ಮಾಲಿನ್ಯ ಹೆಚ್ಚುತ್ತಿದೆ ಮತ್ತು ದೇಶದ ಆರ್ಥಿಕತೆಗೆ ದೊಡ್ಡ ಹೊರೆಯಾಗುತ್ತಿದೆ. ಭಾರತವು ಇಂಧನ ಆಮದಿಗಾಗಿ ಪ್ರತಿ ವರ್ಷ ಸುಮಾರು 22 ಲಕ್ಷ ಕೋಟಿ ರೂಪಾಯಿಗಳನ್ನು ವಿದೇಶಗಳಿಗೆ ನೀಡುತ್ತಿದೆ. ಎಥೆನಾಲ್ ಮತ್ತು ಗ್ರೀನ್ ಹೈಡ್ರೋಜನ್ ಬಳಕೆಯಿಂದ ಈ ಹಣ ದೇಶದಲ್ಲೇ ಉಳಿಯುತ್ತದೆ ಮತ್ತು ಭಾರತ ಇಂಧನ ವಲಯದಲ್ಲಿ ಸ್ವಾವಲಂಬಿಯಾಗಲಿದೆ ಎಂದರು.
ನಮ್ಮ ದೇಶದ ರೈತರು ಇನ್ಮುಂದೆ ಕೇವಲ ಅನ್ನದಾತರಲ್ಲ, ಅವರು ದೇಶಕ್ಕೆ ಇಂಧನ ನೀಡುವ ಊರ್ಜಾದಾತರು (ಇಂಧನ ದಾತರು) ಆಗಲಿದ್ದಾರೆ. ಕಬ್ಬು, ಜೋಳ ಮತ್ತು ಧಾನ್ಯಗಳಿಂದ ಎಥೆನಾಲ್ ತಯಾರಿಸುವುದರಿಂದ ದೇಶದ ಕೃಷಿ ವಲಯ ಮತ್ತು ರೈತರ ಆದಾಯ ಹೆಚ್ಚಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಪೆಟ್ರೋಲ್‌ಗಿಂತ ಎಥೆನಾಲ್ ಅಗ್ಗ? ದರ ಏರಿಕೆ ಹೊತ್ತಲ್ಲೇ ಚರ್ಚೆಗೆ ಬಂತು ‘E100’
ಈ ಸಭೆಯಲ್ಲಿ ಗಡ್ಕರಿ ನಾಗ್ಪುರದಲ್ಲಿ ನೀರಿನಿಂದ ‘ಗ್ರೀನ್ ಹೈಡ್ರೋಜನ್’ (ಹಸಿರು ಹೈಡ್ರೋಜನ್) ತಯಾರಿಸಿ, ಅದರ ಮೂಲಕ ಸಾರ್ವಜನಿಕ ಬಸ್‌ಗಳನ್ನು ಓಡಿಸುವ ಅತ್ಯಾಧುನಿಕ ಪ್ರಾಯೋಗಿಕ ಯೋಜನೆಯನ್ನು (Pilot Project) ಶೀಘ್ರದಲ್ಲೇ ಆರಂಭಿಸುವುದಾಗಿ ಪ್ರಕಟಿಸಿದರು.
ಆರಂಭಿಕ ಹಂತದಲ್ಲಿ ಎರಡು ಹೈಡ್ರೋಜನ್ ಚಾಲಿತ ಸಾರ್ವಜನಿಕ ಬಸ್‌ಗಳನ್ನು ರಸ್ತೆಗಿಳಿಸಲಾಗುವುದು.ನಾಗ್ಪುರದ ಸಾಮಾನ್ಯ ಜನರು ಈ ಅತ್ಯಾಧುನಿಕ ಹೈಡ್ರೋಜನ್ ಬಸ್‌ಗಳಲ್ಲಿ ಪ್ರಯಾಣಿಸಿ ಇದರ ಅನುಭವವನ್ನು ಪಡೆಯಬಹುದು.
ಭಾರತವು ಇನ್ನು ಮುಂದೆ ಬೇರೆ ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುವ ದೇಶವಾಗಿ ಉಳಿಯಬಾರದು, ಬದಲಿಗೆ ಜಗತ್ತಿಗೆ ಹಸಿರು ಹೈಡ್ರೋಜನ್ ರಫ್ತು ಮಾಡುವ ದೇಶವಾಗಬೇಕು ಎನ್ನುವುದು ನನ್ನ ಗುರಿ ಎಂದು ತಿಳಿಸಿದರು.
