ಬೆಂಗಳೂರು: ಪ್ರಮುಖ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ(Swiggy) ವಿರುದ್ಧ ಬೆಂಗಳೂರಿನ ಹೋಟೆಲ್ ಮಾಲೀಕರು(Bengaluru Hotel Owners Association) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಗಸ್ಟ್ 15ರ ನಂತರ ಸ್ವಿಗ್ಗಿ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೋಟೆಲ್ ಮಾಲೀಕರ ಮಹತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ನ್ಯಾಯಯುತ ಹಾಗೂ ಪಾರದರ್ಶಕ ಪಾಲುದಾರಿಕೆಗಾಗಿ ಸ್ವಿಗ್ಗಿ ಆಡಳಿತ ಮಂಡಳಿಯನ್ನು ಒತ್ತಾಯಿಸಲಾಗಿದೆ.
ಆನ್‌ಲೈನ್ ಫುಡ್ ಡೆಲಿವರಿ(Online Food Delivery) ಸಂಸ್ಥೆಯಿಂದ ವಿಧಿಸಲಾಗುತ್ತಿರುವ ದುಬಾರಿ ಕಮಿಷನ್, ಕಡ್ಡಾಯ ಡಿಸ್ಕೌಂಟ್ ಹಾಗೂ ವಿವಿಧ ಹಿಡಿತಗಳಿಂದಾಗಿ ಹೋಟೆಲ್ ಉದ್ಯಮಕ್ಕೆ ಭಾರಿ ಆರ್ಥಿಕ ಪೆಟ್ಟು ಬೀಳುತ್ತಿದೆ. ಹೋಟೆಲ್ ಮಾಲೀಕರ ಲಾಭಾಂಶ ತೀವ್ರವಾಗಿ ಕುಸಿಯುತ್ತಿದ್ದು, ಸ್ವಿಗ್ಗಿಯ ಏಕಪಕ್ಷೀಯ ಒಪ್ಪಂದದ ನಿಯಮಗಳಿಂದಾಗಿ ತಾವು ಶೋಷಣೆಗೆ ಒಳಗಾಗುತ್ತಿದ್ದೇವೆ ಎಂದು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇಡಿಕೆ ಏನು?
ಹೋಟೆಲ್ ಮಾಲೀಕರ ಒಪ್ಪಿಗೆಯಿಲ್ಲದೆ ಆ್ಯಪ್‌ನಲ್ಲಿ ಗ್ರಾಹಕರಿಗೆ ಯಾವುದೇ ರೀತಿಯ ರಿಯಾಯಿತಿ ನೀಡಬಾರದು. ಜಾಹೀರಾತು ಶುಲ್ಕ ಹಾಗೂ ಪೇಮೆಂಟ್ ಗೇಟ್‌ವೇ ಶುಲ್ಕಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು.
ಗ್ರಾಹಕರು ದೂರು ನೀಡಿದ ತಕ್ಷಣ ಹೋಟೆಲ್ ಖಾತೆಯಿಂದ ಹಣ ಕಡಿತಗೊಳಿಸಬಾರದು. ಹಾಗೆಯೇ, ಆಹಾರ ಸಿದ್ಧವಾದ ಬಳಿಕ ಆರ್ಡರ್ ರದ್ದಾದರೆ, ಆ ನಷ್ಟದ ಹೊರೆಯನ್ನು ರೆಸ್ಟೋರೆಂಟ್ ಮೇಲೆ ಹಾಕಬಾರದು.
ಪ್ರತಿಯೊಂದು ಕಡಿತಗಳ ಬಗ್ಗೆಯೂ ಸ್ಪಷ್ಟವಾದ ಸೆಟ್ಲ್ಮೆಂಟ್ ವರದಿ ನೀಡಬೇಕು.ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಪ್ರತಿ ರೆಸ್ಟೋರೆಂಟ್‌ಗೆ ಪ್ರತ್ಯೇಕ ಸಂಪರ್ಕಾಧಿಕಾರಿಯನ್ನು (SPOC) ನೇಮಿಸಬೇಕು.
ಆಗಸ್ಟ್ 15 ಡೆಡ್‌ಲೈನ್:
ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲು ಸ್ವಿಗ್ಗಿ ಆಡಳಿತ ಮಂಡಳಿ ತಕ್ಷಣವೇ ಮಾತುಕತೆಗೆ ಬರಬೇಕು ಎಂದು ಹೋಟೆಲ್ ಮಾಲೀಕರು ಆಗ್ರಹಿಸಿದ್ದಾರೆ. ಒಂದೊಮ್ಮೆ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲವಾದರೆ ಆಗಸ್ಟ್ 15ರ ನಂತರ ಬೆಂಗಳೂರಿನ ಯಾವುದೇ ರೆಸ್ಟೋರೆಂಟ್‌ಗಳಿಂದ ಸ್ವಿಗ್ಗಿಗೆ ಪಾರ್ಸೆಲ್ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

