ನವದೆಹಲಿ: ದಕ್ಷಿಣ ದೆಹಲಿಯ (Delhi) ತುಘಲಕಾಬಾದ್ ಪ್ರದೇಶದ ವಸತಿ ಕಟ್ಟದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭಾರೀ ಬೆಂಕಿ ಆಕಸ್ಮಿಕವಲ್ಲ. ಇದು ಉದ್ದೇಶಪೂರ್ವಕ ಕೃತ್ಯ ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಬಯಲಾಗಿದೆ.
ವಸತಿ ಕಟ್ಟಡದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡಕ್ಕೆ ಮೂವರು ಬಲಿಯಾಗಿದ್ದರು. ಈ ಘಟನೆ ಆಕಸ್ಮಿಕವಲ್ಲ. ಇಬ್ಬರು ಸೋದರಸಂಬಂಧಿಗಳ ನಡುವಿನ ಹಣಕಾಸಿನ ವಿವಾದದಿಂದ ಉಂಟಾದ ಉದ್ದೇಶಪೂರ್ವಕ ಬೆಂಕಿ ಹಚ್ಚುವ ಕೃತ್ಯ ಎಂದು ಪೊಲೀಸರು ತನಿಖೆಯಿಂದ ಬಯಲಿಗೆಳೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂಜನ್ (33), ಆತನ ಸಹೋದರ ರಾಜ್‌ಕುಮಾರ್ (27) ಮತ್ತು ಸರಿತಾ (27) ಎಂಬ ಮೂವರನ್ನು ಬಂಧಿಸಲಾಗಿದೆ. 17 ವರ್ಷದ ಬಾಲಕಿಯನ್ನು ಸಹ ಬಂಧಿಸಲಾಗಿದೆ. ಮಹಿಳೆ ಮತ್ತು ಬಾಲಕಿ ಇಬ್ಬರು ಆರೋಪಿಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಲಾಗಿದೆ. ಇದನ್ನೂ ಓದಿ: Dehradun violence | ಬಿಜೆಪಿ ಮುಖಂಡನ ಹತ್ಯೆಯಿಂದ ಕೆರಳಿದ ಹಿಂದೂ ಸಂಘಟನೆಗಳು – 25 ಮಂದಿ ವಿರುದ್ಧ FIR
ಜೂನ್ 12 ರಂದು ಮಧ್ಯರಾತ್ರಿಯ ನಂತರ ಕೆಳಗೆ ನಿಲ್ಲಿಸಿದ್ದ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದಾಗಿ ಅಪ್ರಾಪ್ತ ಬಾಲಕಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಬೆಂಕಿ ತ್ವರಿತವಾಗಿ ಐದನೇ ಮಹಡಿಗೆ ಹರಡಿ ಇಡೀ ಕಟ್ಟಡವನ್ನು ಆವರಿಸಿತು.
ಎಂಟು ಜನರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಅವರಲ್ಲಿ ಪಂಕಜ್, ಸುಶೀಲಾ ದೇವಿ ಮತ್ತು ಸೋನಿಯಾ ಕುಮಾರಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರು.
ಬೆಂಕಿ ಅವಘಡ ಸಂಭವಿಸುವ ಸ್ವಲ್ಪ ಸಮಯದ ಮೊದಲು ಬಾಲಕಿಯೊಬ್ಬಳು ಕಟ್ಟಡದೊಳಗೆ ಪ್ರವೇಶಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಪಡಿಸಿವೆ. ಈ ದೃಶ್ಯಗಳ ಆಧಾರದ ಮೇಲೆ, ಅಪ್ರಾಪ್ತ ಬಾಲಕಿಯನ್ನು ಗುರುತಿಸಿ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ.
ವಿಚಾರಣೆಯ ಸಮಯದಲ್ಲಿ, ನಿರಂಜನ್ ಅವರ ಸೋದರಸಂಬಂಧಿ ಮತ್ತು ಕಟ್ಟಡದ ಐದನೇ ಮಹಡಿಯಲ್ಲಿ ವಾಸಿಸುತ್ತಿದ್ದ ದೀಪಕ್ ಅವರ ಸ್ಕೂಟರ್‌ಗೆ ಬೆಂಕಿ ಹಚ್ಚಲು ಸರಿತಾ ಪ್ರೇರೇಪಿಸಿದ್ದಾಳೆ ಎಂದು ಬಾಲಕಿ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಗೆ ಪೆಟ್ರೋಲ್ ಮತ್ತು ಬೆಂಕಿಕಡ್ಡಿಯನ್ನೂ ಒದಗಿಸಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ. ಇದನ್ನೂ ಓದಿ: ಸ್ಕೂಟರ್ ಡಿಕ್ಕಿ ಹೊಡೆದು ರಸ್ತೆ ಮೇಲೆ ಬಿದ್ದ ಪೊಲೀಸ್ ಮೇಲೆ ಹರಿದ ಟ್ರಕ್; ದಾರುಣ ಸಾವು
ಬೆಂಕಿ ಹಚ್ಚಲು ಕಾರಣ ದೀಪಕ್ ಮತ್ತು ನಿರಂಜನ್ ನಡುವಿನ ಹಣಕಾಸಿನ ವಿವಾದ ಎಂದು ಹೇಳಲಾಗುತ್ತಿದೆ. ನಿರಂಜನ್ ಇತ್ತೀಚೆಗೆ ಮತ್ತೊಂದು ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಕ್ರಿಮಿನಲ್ ಪಿತೂರಿ, ಅಪರಾಧಿಕ ನರಹತ್ಯೆ, ಕೊಲೆಯತ್ನ, ಬೆಂಕಿ ಹಚ್ಚಿ ದುಷ್ಕೃತ್ಯ ಮತ್ತು ಅತಿಕ್ರಮಣಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
