– 12 ಕೋಟಿ ಹಣ, 3 ಬೆಡ್‌ರೂಮ್ ಫ್ಲ್ಯಾಟ್ ಜೀವನಾಂಶ ಪಡೆಯುವ ಹುನ್ನಾರ: ವಿನಾಯಕ್ ರಾವತ್
ಮುಂಬೈ: ಉದ್ಧವ್ ಠಾಕ್ರೆ ಬಣದ ಹಿರಿಯ ನಾಯಕರೂ ಆಗಿರುವ ಮಾಜಿ ಸಂಸದ ವಿನಾಯಕ್ ರಾವತ್ (Vinayak Raut) ಕುಟುಂಬದ ವಿರುದ್ಧ ಅವರ ಸೊಸೆ ಗಿರಿಜಾ ರಾವ್ ಗಂಭೀರ ಆರೋಪ ಮಾಡಿದ್ದಾರೆ. ಮೂಢನಂಬಿಕೆ ಆಚರಣೆ ಹೆಸರಿನಲ್ಲಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆಂದು ಕುಟುಂಬಸ್ಥರ ವಿರುದ್ಧ ಆರೋಪಿಸಿದ್ದಾರೆ.
ಈ ಸಂಬಂಧ ದೂರನ್ನೂ ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು (Thane Police) ತನಿಖೆ ಶುರು ಮಾಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಮಾಂತ್ರಿಕರನ್ನೂ ಬಂಧಿಸಿದ್ದಾರೆ.

ಸೊಸೆ ಗಿರಿಜಾ ಆರೋಪಗಳೇನು?
ನನ್ನ ಅತ್ತೆ – ಮಾವ ಮಾಂತ್ರಿಕರನ್ನು ಭೇಟಿ ಮಾಡಲು ಒತ್ತಾಯ ಮಾಡುತ್ತಾರೆ, ಮೂಢನಂಬಿಕೆ ಆಚರಣೆಗಾಗಿ ನನ್ನ ಕೂದಲನ್ನು ಕತ್ತರಿಸಿ ಹಿಂಸೆ ಕೊಟ್ಟಿದ್ದಾರೆ. ಬಂಜೆತನ ಪರಿಹಾರಕ್ಕೆ ಗೋಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ನಿತ್ಯ ನನಗೆ ಮಾನಸಿಕ ಹಿಂಸೆ ನೀಡಿ, ಹಲ್ಲೆ ಮಾಡುತ್ತಿದ್ದಾರೆ. ಸರಿಯಾಗಿ ಊಟ ಕೊಡದೇ ಹಸಿವಿನಿಂದ ಬಳಲುವಂತೆ ಮಾಡ್ತಿದ್ದಾರೆ. ಕುಟುಂಬದಲ್ಲಿ ಒಬ್ಬಳಾಗಿದ್ದರೂ ಅತ್ತೆ – ಮಾವ ನನ್ನ ಮಾತನ್ನು ಕೇಳುವುದಿಲ್ಲ. ಕಳೆದ 7 ವರ್ಷಗಳಿಂದ ನಿರಂತರವಾಗಿ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತನಿಖೆ ಆರಂಭ
ಗಿರಿಜಾ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮಾಜಿ ಸಂಸದ ವಿನಾಯಕ್ ರಾವತ್, ಅವರ ಪತ್ನಿ ಹಾಗೂ ಕೌನ್ಸಿಲರ್ ಮಗ ಗೀತೇಶ್ ರಾವತ್ ಮತ್ತು ಇಬ್ಬರು ಮಾಂತ್ರಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೂಢನಂಬಿಕೆ ವಿರೋಧಿ ಕಾಯ್ದೆ ಮತ್ತು ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ. ಗಿರಿಜಾ ರಾವತ್ ಅವರ ದೂರಿನಂತೆ, ಮಾಂತ್ರಿಕ ಫಿರೋಜ್ ಶೇಖ್‌ನನ್ನ ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ಹನಿಮೂನ್‌ನಲ್ಲೂ ದೂರ ದೂರ
ಊಟಿಯಲ್ಲಿ ತಮ್ಮ ಮಧುಚಂದ್ರದ ಸಮಯದಲ್ಲಿ ನನ್ನ ಪತಿ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದರು ಎಂದು ಸಹ ಗಿರಿಜಾ ರಾವತ್ ಆರೋಪಿಸಿದ್ದಾರೆ. ನಾನು ಅವರಿಗೆ ಹತ್ತಿರವಾಗಲು ಪ್ರಯತ್ನಿಸಿದಾಗಲೆಲ್ಲಾ ಅವರು ನನ್ನನ್ನ ದೂರ ತಳ್ಳುತ್ತಿದ್ದರು. 2018 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಹೋದಾಗಲೂ ಸಹ ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲುನಿರಾಕರಿಸಿದ್ದರು ಎಂದು ಹೇಳಿದ್ದರು.
12 ಕೋಟಿ, 3 ಬೆಡ್‌ರೂಮ್ ಫ್ಲಾಟ್ ಜೀವನಾಂಶ ಪಡೆಯುವ ತಂತ್ರ
ಈ ಮಧ್ಯೆ ಮಾಜಿ ಸಂಸದ ವಿನಾಯಕ್ ರಾವತ್ ಸೊಸೆಯ ಆರೋಪಗಳನ್ನು ಸಾರಸಗಟಾಗಿ ನಿರಾಕರಿಸಿದ್ದಾರೆ. ಇವು ವಿಚ್ಛೇದನ ಪಡೆಯಲು ಮಾಡಿರುವ ತಂತ್ರ. ನನ್ನ ಮಗನಿಂದ 12 ಕೋಟಿ ರೂ., 3 ಬೆಡ್‌ರೂಮ್‌ನ ಫ್ಲಾಟ್ ಮತ್ತು ಕಾರನ್ನು ಜೀವನಾಂಶವಾಗಿ ಸುಲಿಗೆ ಮಾಡಲು ವಿಫಲವಾದ ನಂತರ ಗಿರಿಜಾ ಈ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
