– ಜಾನಕಮ್ಮನಿಗೂ ಮೈಸೂರಿಗೂ ಅವಿನಾಭಾವ ನಂಟು
ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ (S Janaki) ಅವರ ಜೀವಮಾನದ ಮೊದಲ ಸಾರ್ವಜನಿಕ ಗಾಯನ ಕಾರ್ಯಕ್ರಮ ಮೈಸೂರಿನಿಂದಲೇ ಆರಂಭವಾಗಿತ್ತು. ಅಚ್ಚರಿಯೆಂದರೆ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವೂ ಸಾಂಸ್ಕೃತಿಕ ನಗರಿಯಲ್ಲೇ ನಡೆದಿತ್ತು. ಇದೀಗ ಅವರ ಉಸಿರು ಚೆಲ್ಲಿದ್ದು ಕೂಡ ಮೈಸೂರಲ್ಲೇ (Mysuru) ಎಂಬುದು ಗಮನಾರ್ಹ.
ಹೌದು. ಮೈಸೂರಿಗೂ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಅವಿನಾಭಾವ ನಂಟು. 1952ರಲ್ಲಿ ಮೈಸೂರಿನಲ್ಲಿ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರು ಆಯೋಜನೆ ಮಾಡಿದ್ದ `ಸಂಗೀತ ಕಾರ್ಯಕ್ರಮ’ದಲ್ಲಿ ಮೊದಲ ಬಾರಿಗೆ ಜಾನಕಿ ಅವರು ದನಿಗೂಡಿಸಿದ್ದರು. ಅಲ್ಲಿಂದ ಅವರಿಗೆ ಈ ಊರಿನ ಜೊತೆಗೆ ನಂಟು ಗಾಢವಾಗಿ ಬೆಳೆಯಿತು. ವಿಶೇಷವೆಂದ್ರೆ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನಡೆದಿದ್ದು ಕೂಡ ಮೈಸೂರಿನಲ್ಲೇ.

2017ರ ಅಕ್ಟೋಬರ್‌ನಲ್ಲಿ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಕೊನೆಯಬಾರಿಗೆ ಸಾರ್ವಜನಿಕವಾಗಿ ಹಾಡಿದ್ದರು. ಮೈಸೂರಿನಲ್ಲಿ ಎಸ್.ಜಾನಕಿ ಹೆಚ್ಚು ಕಾರ್ಯಕ್ರಮಗಳನ್ನ ನೀಡದಿದ್ದರೂ, ಈ ಪಾರಂಪರಿಕ ನಗರಕ್ಕೆ ಹಲವು ಬಾರಿ ಭೇಟಿ ನೀಡಿದ್ದರು. ಅಷ್ಟೆ ಅಲ್ಲದೇ, ತಮ್ಮ ಮಕ್ಕಳೊಂದಿಗೆ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟವನ್ನು ಮೆಟ್ಟಿಲು ಏರಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದರು.
1952ರಲ್ಲಿ ಮೈಸೂರಿನಲ್ಲಿ ಹಾಡಿದ್ದರು!
ʻ1952ರಲ್ಲಿ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರ ಆಯೋಜನೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಿ.ಬಿ. ಶ್ರೀನಿವಾಸ್ ಅವರೊಂದಿಗೆ ಮೈಸೂರಿನಲ್ಲಿ ಹಾಡಿದ್ದೆ. ಕಾರ್ಯಕ್ರಮ ನಡೆದ ಸ್ಥಳದ ಹೆಸರು ಈಗ ನೆನಪಿಲ್ಲ. ಆದರೆ, 4 ರಸ್ತೆಗಳು ಸೇರುವ ದೊಡ್ಡ ಮೈದಾನದಲ್ಲಿ ಕಾರ್ಯಕ್ರಮ ನಡೆದಿತ್ತು. ಅಪಾರ ಸಂಖ್ಯೆಯಲ್ಲಿ ಸಂಗೀತಾಭಿಮಾನಿಗಳು ಸೇರಿದ್ದದ್ದು ಮಾತ್ರ ಇನ್ನೂ ನೆನಪಿದೆ. ಅದರ ನಂತರ ನಾನು ಮತ್ತೆ ಮೈಸೂರಿನಲ್ಲಿ ಹಾಡುವ ಅವಕಾಶ ಬಂದಿರಲಿಲ್ಲʼ, ಎಂದು ತಮ್ಮ ಕೊನೆ ಸಂಗೀತ ಕಾರ್ಯಕ್ರಮದ ದಿನ ಮೆಲುಕು ಹಾಕಿದ್ದರು.

2017ರಲ್ಲಿ ಕೊನೆ ಕಾರ್ಯಕ್ರಮ:
2017ರಲ್ಲಿ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಎಸ್.ಜಾನಕಿ ಅವರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅದೇ ಎಸ್ ಜಾನಕಿ ಅವರ ಸಾರ್ವಜನಿಕ ಕೊನೆ ಕಾರ್ಯಕ್ರಮವೂ ಆಗಿತ್ತು. ಈ ಕಾರ್ಯಕ್ರಮಕ್ಕೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಿಂದಲೂ ಅನೇಕ ಅಭಿಮಾನಿಗಳು ಆಗಮಿಸಿದ್ದರು. ಸುಮಾರು 4-5 ಗಂಟೆಗಳ ಕಾಲ ಕಾರ್ಯಕ್ರಮ ನಡೆದಿತ್ತು.
ಗಾಯನ ನಿಲ್ಲಿಸಿದ್ದೂ ಮೈಸೂರಲ್ಲೇ
48 ಸಾವಿರಕ್ಕೂ ಅಧಿಕ ಹಾಡುಗಳನ್ನ ಹಾಡಿ, 20ಕ್ಕೂ ಅಧಿಕ ಭಾಷೆಗಳ ಹಾಡುಗಳಿಗೆ ಜೀವ ತುಂಬಿದ ಗಾಯಕಿ, ಉಸಿರು ಚೆಲ್ಲಿದ್ದು ಮೈಸೂರಿನಲ್ಲೇ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್. ಜಾನಕಿ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿಯಲ್ಲಿ ಶನಿವಾರ ಕೊನೆಯುಸಿರೆಳೆದರು.
