– ಈ ಬಾರಿ ಕಥೆ ಇನ್ನಷ್ಟು ಡಾರ್ಕ್… ಇನ್ನಷ್ಟು ವೈಲ್ಡ್… ಇನ್ನಷ್ಟು ‘ಟಾಕ್ಸಿಕ್’
– ಟಾಕ್ಸಿಕ್ ಹೊಸ ಟ್ರೇಲರ್‌ಗೆ ಫ್ಯಾನ್ಸ್ ಫಿದಾ
ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಯಶ್ ಅಭಿನಯದ ‘Toxic: A Fairy Tale for Grown-Ups’ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಇಂದು ಬಿಡುಗಡೆಯಾಗಿದೆ.
ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ಈ ಡಾರ್ಕ್ ಮತ್ತು ಸ್ಟೈಲಿಶ್ ಜಗತ್ತಿನ ಮೊದಲ ಝಲಕ್ ಇದೀಗ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದು, ರಾಯ – ರೂಮಿ ಮತ್ತು ಟಿಕೆಟ್ ಪಾತ್ರದಲ್ಲಿ ಯಶ್ ಅಬ್ಬರಿಸಿದ್ದಾರೆ.
#Toxic : A Fairy Tale for Grown-Ups
Trailer out now
Kannada:https://t.co/YuoYcOfAlv
Hindi:https://t.co/1RCrndyRsk
Tamil:https://t.co/TsG7zsWo9D
Telugu:https://t.co/XXEwfTCcky
Malayalam:https://t.co/xUJSup0lle#ToxicTheMovie In Cinemas Worldwide from 26-08-2026.… pic.twitter.com/oWaxu1HTl5— KVN Productions (@KvnProductions) August 8, 2026
‘KGF’ ಸರಣಿಯ ಅದ್ಭುತ ಯಶಸ್ಸಿನ ಬಳಿಕ ಯಶ್ ಅವರ ಮುಂದಿನ ಸಿನಿಮಾ ಹೇಗಿರಲಿದೆ ಎಂಬ ಪ್ರಶ್ನೆಗೆ ‘ಟಾಕ್ಸಿಕ್’ ಟ್ರೈಲರ್ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದೆ. ರಾ ಆ್ಯಕ್ಷನ್, ಗ್ಯಾಂಗ್‌ಸ್ಟರ್ ಜಗತ್ತು, ಅಧಿಕಾರದ ಆಟ, ದ್ರೋಹ, ಪ್ರೀತಿ ಮತ್ತು ಅಪಾಯಕಾರಿ ಸಂಬಂಧಗಳ ಸುತ್ತ ಹೆಣೆದಿರುವ ಕಥೆಯ ಸುಳಿವು ಟ್ರೈಲರ್‌ನಲ್ಲಿ ಸಿಕ್ಕಿದೆ.

ʻರಾಯʼನ ಮತ್ತೊಂದು ಮಾಸ್ ಅವತಾರ!
‘ಟಾಕ್ಸಿಕ್’ ಟ್ರೈಲರ್ ಆರಂಭದಿಂದಲೇ ಅಪಾಯ, ಅಧಿಕಾರ ಮತ್ತು ಅನಿರೀಕ್ಷಿತ ಪಾತ್ರಗಳ ಜಗತ್ತಿಗೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಯಶ್ ಹಲವು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದು, ಅವರ ರಗಡ್ ಲುಕ್ ಅಭಿಮಾನಿಗಳನ್ನ ಮೋಡಿ ಮಾಡಿದೆ. ಅಷ್ಟೇ ಅಲ್ಲದೇ ಅಪರಾಧದ ಕರಾಳ ಜಗತ್ತು… ಮಾಫಿಯಾದ ಹಿಡಿತ… ಅಧಿಕಾರಕ್ಕಾಗಿ ನಡೆಯುವ ಸಂಘರ್ಷ… ದ್ರೋಹದ ಆಟ… ಇವೆಲ್ಲದರ ನಡುವೆ ಯಶ್ ಅವರ ಪಾತ್ರ ಹೇಗೆ ಸಾಗುತ್ತದೆ ಎಂಬ ಕುತೂಹಲವನ್ನ ಟ್ರೈಲರ್ ಬಿಚ್ಚಿಟ್ಟಿದೆ.

ಇದರ ಜೊತೆಗೆ ಚಿತ್ರದಲ್ಲಿ ರೊಮ್ಯಾನ್ಸ್ ಮತ್ತು ಭಾವನಾತ್ಮಕ ಸಂಬಂಧಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಅಂದರೆ ‘ಟಾಕ್ಸಿಕ್’ ಕೇವಲ ಆ್ಯಕ್ಷನ್ ಸಿನಿಮಾ ಅಲ್ಲ; ಪ್ರೀತಿ, ಸಂಬಂಧಗಳು ಮತ್ತು ಪಾತ್ರಗಳ ಸಂಕೀರ್ಣ ಭಾವನೆಗಳನ್ನೂ ಕಥೆಯ ಪ್ರಮುಖ ಭಾಗವನ್ನಾಗಿ ಮಾಡಿರುವಂತೆ ಕಾಣುತ್ತಿದೆ. ಡಾರ್ಕ್ ವಿಷುವಲ್ಸ್, ಸ್ಟೈಲಿಶ್ ಮೇಕಿಂಗ್, ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ಗಳು ಮತ್ತು ಯಶ್ ಅವರ ಪವರ್‌ಫುಲ್ ಪ್ರೆಸೆನ್ಸ್ ಟ್ರೈಲರ್‌ನ ಪ್ರಮುಖ ಹೈಲೈಟ್‌ಗಳಾಗಿವೆ.
‘ಟಾಕ್ಸಿಕ್’ನಲ್ಲಿ ಯಶ್‌ನ ಹೊಸ ಗ್ಯಾಂಗ್‌ಸ್ಟರ್ ಅವತಾರ!
ಈಗಾಗಲೇ ಬಿಡುಗಡೆಯಾಗಿದ್ದ ‘Ladies & Ladies’ ಇಂಟ್ರೊಡಕ್ಷನ್ ವೀಡಿಯೋ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವೇಗ ಸಿಕ್ಕಿದೆ. ಚಿತ್ರದ ಹಿನ್ನೆಲೆ ಕೂಡ ಸಾಕಷ್ಟು ವಿಭಿನ್ನವಾಗಿದೆ. ಈ ಕಥೆ ಅಪರಾಧ, ಅಧಿಕಾರ ಮತ್ತು ಮಾಫಿಯಾ ನೆಟ್‌ವರ್ಕ್‌ಗಳ ಕರಾಳ ಜಗತ್ತನ್ನು ತೆರೆದಿಡುವ ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತದೆ.

1940ರಿಂದ 1970ರ ದಶಕದ ನಡುವಿನ ಗೋವಾದ ಡ್ರಗ್ ಟ್ರೇಡ್ ಮತ್ತು ಮಾಫಿಯಾ ಜಗತ್ತಿನ ಹಿನ್ನೆಲೆ ಚಿತ್ರದಲ್ಲಿದೆ ಎನ್ನಲಾಗಿದೆ. ಆ ಕಾಲಘಟ್ಟದ ಕ್ರೈಂ ನೆಟ್‌ವರ್ಕ್‌ಗಳನ್ನ ದೊಡ್ಡ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನ ‘ಟಾಕ್ಸಿಕ್’ನಲ್ಲಿ ನಡೆದಿದೆ.
‘KGF’ಗಿಂತ ಡಿಫರೆಂಟ್… ‘ಟಾಕ್ಸಿಕ್’ನಲ್ಲಿ ಹೊಸ ಯಶ್!
‘KGF’ ಮೂಲಕ ರಾಕಿ ಭಾಯ್ ಆಗಿ ಪ್ರೇಕ್ಷಕರನ್ನ ಹುಚ್ಚೆಬ್ಬಿಸಿದ್ದ ಯಶ್, ಇದೀಗ ‘ಟಾಕ್ಸಿಕ್’ನಲ್ಲಿ ಮತ್ತೊಂದು ಸಂಪೂರ್ಣ ವಿಭಿನ್ನ ಜಗತ್ತಿನ ಪಾತ್ರವನ್ನು ಹೊತ್ತಿದ್ದಾರೆ. ಟ್ರೈಲರ್ ನೋಡಿದರೆ, ಸಿನಿಮಾ ಕೇವಲ ಮಾಸ್ ಎಲಿಮೆಂಟ್‌ಗಳ ಮೇಲೆ ಅವಲಂಬಿತವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಒಟ್ಟಿನಲ್ಲಿ ಪೀರಿಯಡ್ ಡ್ರಾಮಾ, ಕ್ರೈಂ, ಆ್ಯಕ್ಷನ್ ಮತ್ತು ರೊಮ್ಯಾನ್ಸ್—ಈ ಎಲ್ಲಾ ಅಂಶಗಳನ್ನು ಒಟ್ಟಿಗೆ ಬೆರೆಸಿ ‘ಟಾಕ್ಸಿಕ್’ ಅನ್ನು ದೊಡ್ಡ ಮಟ್ಟದ ಸಿನಿಮ್ಯಾಟಿಕ್ ಅನುಭವವಾಗಿ ಕಟ್ಟಿಕೊಡಲು ಚಿತ್ರತಂಡ ಮುಂದಾಗಿದೆ.
ಆಗಸ್ಟ್ 26ಕ್ಕೆ ‘ಟಾಕ್ಸಿಕ್’ ಅಬ್ಬರ!
‘KGF’ ನಂತರ ಯಶ್ ಅವರ ಮತ್ತೊಂದು ದೊಡ್ಡ ಸಿನಿಮಾಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ‘ಟಾಕ್ಸಿಕ್’ ಈಗ ಭಾರೀ ನಿರೀಕ್ಷೆಯ ಸಿನಿಮಾ ಆಗಿದೆ. ಟ್ರೈಲರ್‌ನಲ್ಲಿ ಕಥೆಯ ಹಲವು ಪ್ರಮುಖ ಅಂಶಗಳನ್ನು ರಹಸ್ಯವಾಗಿಯೇ ಉಳಿಸಿರುವುದು ಕುತೂಹಲ ಇನ್ನಷ್ಟು ಹೆಚ್ಚಿಸಿದೆ. ಯಶ್ ಅವರ ಪಾತ್ರದ ನಿಜವಾದ ಉದ್ದೇಶವೇನು? ಈ ಗ್ಯಾಂಗ್‌ಸ್ಟರ್ ಸಾಮ್ರಾಜ್ಯದ ಹಿಂದೆ ಇರುವ ರಹಸ್ಯವೇನು? ಪ್ರೀತಿ ಮತ್ತು ಅಧಿಕಾರದ ನಡುವೆ ನಡೆಯುವ ಸಂಘರ್ಷ ಎಲ್ಲಿಗೆ ತಲುಪಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಚಿತ್ರಮಂದಿರದವರೆಗೆ ಕಾಯಲೇಬೇಕು. ಆಗಸ್ಟ್ 26ರಂದು ವಿಶ್ವದಾದ್ಯಂತ ‘ಟಾಕ್ಸಿಕ್’ ತೆರೆಗೆ ಬರಲು ಸಜ್ಜಾಗಿದೆ.



