– 9 ಎಂಎಂ ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆ; ಮೂವರು ಅರೆಸ್ಟ್
– ಎ1 ಆರೋಪಿ ವಿರುದ್ಧ 5 ರಾಜ್ಯಗಳಲ್ಲಿ 26 ಕ್ರಿಮಿನಲ್ ಕೇಸ್
ಉಡುಪಿ: ಯುಪಿಸಿಎಲ್ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದ ಆರ್ಥಿಕ ವೈಮನಸ್ಸೇ ಉಡುಪಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜ ಹತ್ಯೆಗೆ ಪ್ರಮುಖ ಕಾರಣವಾಗಿರಬಹುದೇ ಎಂಬ ಅನುಮಾನ ಇದೀಗ ತನಿಖೆಯಲ್ಲಿ ವ್ಯಕ್ತವಾಗಿದೆ.
ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಉತ್ತರ ಭಾರತದ ವ್ಯಕ್ತಿಯೊಬ್ಬ ಡೇವಿಡ್ ಹತ್ಯೆಗೆ ಸುಪಾರಿ ನೀಡಿರುವುದನ್ನ ಪತ್ತೆಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
23 ಕೋಟಿ ವೆಚ್ಚದ ಗುತ್ತಿಗೆ ವಿಚಾರದಲ್ಲಿ ವೈಮನಸ್ಸು
ಡೇವಿಡ್ ಹಾಗೂ ಮತ್ತೊಬ್ಬ ಗುತ್ತಿಗೆದಾರನ ನಡುವೆ ಸುಮಾರು 23 ಕೋಟಿ ರೂ. ಮೌಲ್ಯದ ಯುಪಿಸಿಎಲ್ ಗುತ್ತಿಗೆ ವಿಚಾರದಲ್ಲಿ ಆರ್ಥಿಕ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದೇ ವೈಮನಸ್ಸು ಹತ್ಯೆಗೆ ಪ್ರಮುಖ ಕಾರಣವಾಗಿರಬಹುದೆಂದು ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.


ಹಂತಕನ ಖಾತೆಗೆ 2 ಲಕ್ಷಕ್ಕೂ ಅಧಿಕ ಹಣ
ಡೇವಿಡ್ ಹತ್ಯೆ ಪ್ರಕರಣದಲ್ಲಿ ಶೂಟರ್ ಆಗಿ ಆರೋಪಿಸಲಾಗಿರುವ ರಾಜು ಅವರ ಬ್ಯಾಂಕ್ ಖಾತೆಗೆ ಕೊಲೆಗೂ ಮುನ್ನವೇ 2 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯಾಗಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ನಡೆದ ಬಳಿಕವೂ ಹಂತ ಹಂತವಾಗಿ ಹಣ ಪಾವತಿಯಾಗಿರುವ ಮಾಹಿತಿಯನ್ನ ಪೊಲೀಸರು ಕಲೆಹಾಕಿದ್ದಾರೆ. ಹತ್ಯೆಗೆ ಸುಪಾರಿ ನೀಡಿದ ವ್ಯಕ್ತಿಯ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವೊಂದನ್ನ ಹೊರರಾಜ್ಯಕ್ಕೆ ಕಳುಹಿಸಲಾಗಿದೆ.
9 ಎಂಎಂ ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆ
ಡೇವಿಡ್ ಡಿಸೋಜ ಅವರನ್ನ 9 ಎಂಎಂ ಬುಲೆಟ್ ಬಳಕೆಯ ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ರಾಜು ಬಳಿಯಿಂದ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು, ಬೈಂದೂರಿನ ಒತ್ತಿನೆಣೆ, ಭಟ್ಕಳ ಹಾಗೂ ಕುಮಟಾ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಶೂಟರ್ ಕಾಲಿಗೆ ಗುಂಡು
ಬಂಧನಕ್ಕೆ ಮುನ್ನ ಆರೋಪಿಗಳನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಶೂಟರ್ ರಾಜು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು, ರಾಜು ಕಾಲಿಗೆ ಗುಂಡೇಟು ತಗುಲಿದೆ.

ರಾಜು ನಡೆಸಿದ ಹಲ್ಲೆಯಿಂದ ಕಾಪು ಠಾಣೆಯ ಪಿಎಸ್‌ಐ ತೇಜಸ್ವಿ ಗಾಯಗೊಂಡಿದ್ದಾರೆ. ಆರೋಪಿ ರಾಜು ಹಾಗೂ ಗಾಯಗೊಂಡ ಪಿಎಸ್‌ಐ ತೇಜಸ್ವಿ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಡೇವಿಡ್ ಹತ್ಯೆ ಪ್ರಕರಣದ ತನಿಖೆ ಮತ್ತು ಆರೋಪಿಗಳ ಬಂಧನಕ್ಕಾಗಿ 500ಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು
ಪ್ರಕರಣದ ಎ1 ಆರೋಪಿ ರಾಜು ವಿರುದ್ಧ ಐದು ರಾಜ್ಯಗಳಲ್ಲಿ 26 ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎ2 ಆರೋಪಿ ಅನಮೋಲ್ ವಿರುದ್ಧ ನಾಲ್ಕು ರಾಜ್ಯಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಜಿಯಾವುಲ್ ವಜುಲ್ ಶೇಖ್ ವಿರುದ್ಧ ದರೋಡೆ, ಶೂಟೌಟ್ ಹಾಗೂ ಡಕಾಯಿತಿ ಸೇರಿದಂತೆ 12 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
2 ತಿಂಗಳ ಹಿಂದೆಯೇ ಸ್ಥಳಕ್ಕೆ ಭೇಟಿ
ಹತ್ಯೆ ನಡೆಸುವುದಕ್ಕೂ ಸುಮಾರು ಎರಡು ತಿಂಗಳ ಹಿಂದೆಯೇ ಆರೋಪಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸ್ಕೆಚ್ ಹಾಕಿದ್ದರು. ಆದರೆ ಆರೋಪಿಗಳಿಗೆ ಪರಸ್ಪರ ಸಂಪೂರ್ಣ ಪರಿಚಯವಿರಲಿಲ್ಲ. ಸುಳ್ಳು ಹೆಸರುಗಳ ಮೂಲಕ ಆರೋಪಿಗಳು ಪರಸ್ಪರ ಪರಿಚಯವಾಗಿದ್ದರು, ಹತ್ಯೆ ಸಂಚಿನ ಹಿಂದೆ ಸ್ಥಳೀಯವಾಗಿ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಎರ್ಮಾಳ್ ಬಳಿ ಬೈಕ್ ಬಿಟ್ಟು ಪರಾರಿ
ಹತ್ಯೆಯ ಬಳಿಕ ಆರೋಪಿಗಳು ಎರ್ಮಾಳ್ ಬಳಿ ಬೈಕ್ ಬಿಟ್ಟು ಪರಾರಿಯಾಗಿದ್ದರು. ಆರೋಪಿಗಳಿಗೆ ಬೈಕ್ ಒದಗಿಸಿದ ವ್ಯಕ್ತಿ ಅಥವಾ ವ್ಯಕ್ತಿಗಳ ಪತ್ತೆಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಂದ ಮೂರು ಮೊಬೈಲ್ ಫೋನ್‌ಗಳು ಹಾಗೂ ಸಿಮ್‌ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

