ಮಧುರೈ: ತಮಿಳುನಾಡಿನ ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ(Thirupparankundram Hill) ವಾರ್ಷಿಕ ಕಾರ್ತಿಕ ಮಹಾದೀಪೋತ್ಸವವು(Karthigai Deepam) ತೀವ್ರ ರಾಜಕೀಯ ಮತ್ತು ಕಾನೂನು ಹೈಡ್ರಾಮಾಗಳ ನಡುವೆ ಸಂಪನ್ನಗೊಂಡಿದೆ.
ಸುಪ್ರೀಂ ಕೋರ್ಟ್(Supreme Court) ಮತ್ತು ಮದ್ರಾಸ್ ಹೈಕೋರ್ಟ್ಗಳ ಸ್ಪಷ್ಟ ಆದೇಶವಿದ್ದರೂ ಅದನ್ನು ಧಿಕ್ಕರಿಸಿರುವ ಸಿಎಂ ಸಿ. ಜೋಸೆಫ್ ವಿಜಯ್(Vijay) ನೇತೃತ್ವದ ಟಿವಿಕೆ (TVK) ಸರ್ಕಾರ ವಿವಾದಿತ ಕಲ್ಲಿನ ಕಂಬದ ಬದಲಿಗೆ ಬೆಟ್ಟದ ಸಾಂಪ್ರದಾಯಿಕ ಸ್ಥಳವಾದ ‘ಉಚ್ಚಿ ಪಿಳ್ಳಯಾರ್’ ಮಂಟಪದಲ್ಲಿ ದೀಪವನ್ನು ಬೆಳಗಿಸಿದೆ.
ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಬೆಟ್ಟದ ಮೇಲಿರುವ ಉಚ್ಚಿ ಪಿಳ್ಳಯಾರ್ ದೇವಸ್ಥಾನದ ಬಳಿ ಕಾರ್ತಿಕ ದೀಪವನ್ನು ಬೆಳಗಿಸಲಾಯಿತು. ತಿರುಪ್ಪರಂಕುಂದ್ರಂ ಕ್ಷೇತ್ರದ ಶಾಸಕರೂ ಆಗಿರುವ ರಾಜ್ಯ ಕಾನೂನು ಸಚಿವ ಸಿಟಿಆರ್ ನಿರ್ಮಲ್ ಕುಮಾರ್, ಸಾಂಪ್ರದಾಯಿಕ ಸ್ಥಳದಲ್ಲಿ ದೀಪ ಹಚ್ಚಿರುವುದನ್ನು ಅಧಿಕೃತವಾಗಿ ಘೋಷಿಸಿದರು. ಇತ್ತ ಕಲ್ಲಿನ ಕಂಬದ ಮೇಲೆ ದೀಪ ಹಚ್ಚುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಬೆಟ್ಟದ ತಪ್ಪಲಿನಲ್ಲಿ ಭಕ್ತರು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು.
750ಕ್ಕೂ ಹೆಚ್ಚು ಮಂದಿ ವಶಕ್ಕೆ:
ನ್ಯಾಯಾಲಯಗಳ ಆದೇಶದ ಹೊರತಾಗಿಯೂ ವಿಜಯ್ ಸರ್ಕಾರ ಕಲ್ಲಿನ ಕಂಬದ ಬಳಿ ದೀಪ ಹಚ್ಚಲು ಅವಕಾಶ ನೀಡದಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳು ಹಾಗೂ ಭಕ್ತರು ಪ್ರತಿಭಟನೆಗೆ ಇಳಿದಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ತಡೆಯಲು ಮುಂದಾದ ಪೊಲೀಸರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನಾಗೇಂದ್ರನ್ ಸೇರಿದಂತೆ 750ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸ್ಥಳದಿಂದ ತೆರವುಗೊಳಿಸಿದರು. ಆದರೆ, ವಶಕ್ಕೆ ಪಡೆದಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
#WATCH | Thiruparankundram, Tamil Nadu | The Maha Deepam lit at the Annamalai Hills in Thiruparankundram as part of the annual Karthigai Deepam festival.
Deepam lit at Ucchi Pillayar Temple, where the lamp is traditionally lit on Karthigai Deepam day. https://t.co/KVMSKVCW1d
— ANI (@ANI) November 24, 2026
ಕೋರ್ಟ್ ಆದೇಶ ಏನಿತ್ತು?
ತಿರುಪ್ಪರಂಕುಂದ್ರಂ ಬೆಟ್ಟದ ಮೇಲೆ ಹಿಂದೂಗಳು(Hindu) ಪವಿತ್ರವೆಂದು ನಂಬಿರುವ ಕಲ್ಲಿನ ಕಂಬದ ಮೇಲೆಯೇ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ಆದೇಶಿಸಿತ್ತು. ಅಲ್ಲಿ ದೀಪ ಹಚ್ಚುವ ಹಕ್ಕಿನ ಕುರಿತಾದ ವಿವಾದವನ್ನು ಮುಕ್ತವಾಗಿರಿಸಿದ್ದ ನ್ಯಾಯಾಲಯ, ಈ ವರ್ಷಕ್ಕೆ ಮಾತ್ರ ಸೀಮಿತವಾಗಿ ದೇವಸ್ಥಾನದಿಂದ ಅಧಿಕೃತಗೊಂಡ ಸಣ್ಣ ತಂಡವೊಂದು ಕಂಬದ ಬಳಿ ದೀಪ ಹಚ್ಚಬಹುದು ಎಂದು ಸೂಚಿಸಿತ್ತು. ಕಲ್ಲಿನ ಕಂಬದ ಸಮೀಪವೇ ‘ಹಜರತ್ ಸುಲ್ತಾನ್ ಸಿಖಂದರ್ ಅವುಲಿಯಾ ದರ್ಗಾ’ ಇರುವುದರಿಂದ ಈ ಸ್ಥಳ ವಿವಾದದ ಕೇಂದ್ರವಾಗಿದೆ.
ಸುಪ್ರೀಂ ಕೋರ್ಟ್ ಸೂಚನೆಯನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತಾದರೂ, ಹೈಕೋರ್ಟ್ ಕೂಡ ಸುಪ್ರೀಂ ಆದೇಶವನ್ನೇ ಪಾಲಿಸುವಂತೆ ಸ್ಪಷ್ಟ ನಿರ್ದೇಶನ ನೀಡಿತ್ತು. ಅತ್ತ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರಕ್ಕೆ ಮಂಗಳವಾರ ಸಂಜೆಯವರೆಗೂ ಯಾವುದೇ ತಡೆಯಾಜ್ಞೆ ಸಿಕ್ಕಿರಲಿಲ್ಲ.
ಮೈತ್ರಿಕೂಟದ ಒತ್ತಡಕ್ಕೆ ಮಣಿದರಾ ಸಿಎಂ?
ಕಲ್ಲಿನ ಕಂಬದ ಮೇಲೆ ದೀಪ ಹಚ್ಚದಿರುವ ನಿರ್ಧಾರವು ಮುಖ್ಯಮಂತ್ರಿ ವಿಜಯ್ ಅವರನ್ನು ಮಿತ್ರಪಕ್ಷಗಳ ನಿಲುವಿನೊಂದಿಗೆ ನಿಲ್ಲುವಂತೆ ಮಾಡಿದೆ. 228 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ ಪಕ್ಷ 108 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ನ 5, ಐಯುಎಂಎಲ್ (IUML), ವಿಸಿಕೆ (VCK), ಸಿಪಿಐ (CPI) ಮತ್ತು ಸಿಪಿಐ(ಎಂ) ಪಕ್ಷಗಳ ತಲಾ 2 ಶಾಸಕರ (ಒಟ್ಟು 121 ಸಂಖ್ಯಾಬಲ) ಬೆಂಬಲದೊಂದಿಗೆ ಸರ್ಕಾರ ನಡೆಯುತ್ತಿದೆ.
ಎರಡೂ ಎಡಪಕ್ಷಗಳು ಮತ್ತು ವಿಸಿಕೆ ಪಕ್ಷವು ಕಲ್ಲಿನ ಕಂಬದ ಬಳಿ ಎರಡನೇ ದೀಪ ಹಚ್ಚುವುದನ್ನು ವಿರೋಧಿಸಿದ್ದವು. ಕೋಮು ಸೌಹಾರ್ದತೆಯ ಕಾರಣ ನೀಡಿ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಠಾಗೋರ್ ಕೂಡ ಸಾಂಪ್ರದಾಯಿಕ ಸ್ಥಳವನ್ನೇ ಸಮರ್ಥಿಸಿಕೊಂಡಿದ್ದರು.
ಸರ್ಕಾರಕ್ಕೆ ಕಾನೂನು ಸಂಕಷ್ಟ:
ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವು ಆಡಳಿತಕ್ಕೆ ದೊಡ್ಡ ಕಾನೂನು ಸಂಕಷ್ಟ ತಂದೊಡ್ಡುವ ಅಪಾಯವಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಹೇಗೆ ಪಾಲಿಸಲಾಗಿದೆ ಎಂಬುದರ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಮಧುರೈ ಜಿಲ್ಲಾಧಿಕಾರಿಗೆ ನ್ಯಾಯಾಲಯ ಸೂಚಿಸಿದ್ದು, ಮುಂದಿನ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.
